ಹೆದ್ದಾರಿಯಲ್ಲಿ ಇವಿ ಚಾರ್ಜಿಂಗ್ ಕೇಂದ್ರ ಸ್ಥಾಪನೆ

Sunilkumar
Published on

ಮೈಸೂರು: ವಿದ್ಯುತ್‌ಚಾಲಿತ ವಾಹನಗಳಿಗೆ ಇವಿ ಚಾರ್ಜಿಂಗ್ ಕೇಂದ್ರಗಳನ್ನು ರಾಜ್ಯ ಎಲ್ಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಥಾಪನೆ ಮಾಡಲು ಉದ್ದೇಶವಿದ್ದು, ಅದಕ್ಕೆ ಬೇಕಾದ ಜಾಗವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೊಡಬೇಕು. ಅಂತೆಯೇ ಮೈಸೂರು-ಬೆಂಗಳೂರು ಹೆದ್ದಾರಿಯ ಟೋಲ್ ಸಂಗ್ರಹ ತಾಣದಲ್ಲೂ ಈ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್‌ಕುಮಾರ್ ತಿಳಿಸಿದರು

ನಗರದ ಮಹಾರಾಜ ಕಾಲೇಜಿನ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಸೆಸ್ಕ್ ವ್ಯಾಪ್ತಿಯ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು ಜಿಲ್ಲೆಗಳ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜನಸ್ನೇಹಿಯಾಗಿ ಇಂಧನ ಇಲಾಖೆ
ಇಂಧನ ಇಲಾಖೆಯನ್ನು ಜನಸ್ನೇಹಿಯಾಗಿ ರೂಪಿಸಲಾಗುತ್ತಿದೆ. ಸೌಲಭ್ಯಗಳನ್ನು ಜನರಿಗೆ ತಲುಪಿಸಲಾಗುತ್ತಿದೆ. ಒಂದು ವರ್ಷದಲ್ಲಿ 294 ವಿದ್ಯುತ್ ಉಪ ಕೇಂದ್ರಗಳ ಉನ್ನತೀಕರಣ, ಹೊಸದಾಗಿ 50 ಉಪ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಬೆಳಕು ಯೋಜನೆಯಡಿ ಕಳೆದ ಒಂದುಮುಕ್ಕಾಲು ವರ್ಷದಲ್ಲಿ 2.50 ಲಕ್ಷ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಸಚಿವ ವಿ. ಸುನೀಲ್‌ಕುಮಾರ್ ತಿಳಿಸಿದರು.

ಬಿಪಿಎಲ್ ಹೊಂದಿರುವ ಎಸ್‌ಸಿ-ಎಸ್‌ಟಿ ಕುಟುಂಬಕ್ಕೆ 75 ಯೂನಿಟ್ ವಿದ್ಯುತ್ ಪೂರೈಕೆ ಮಾಡುವ ಅಮೃತ್ ಯೋಜನೆ ತ್ವರಿತಗತಿಯಲ್ಲಿ ನಡೆಯುತ್ತಿದೆ. ಪ್ರತಿ ತಿಂಗಳ 3ನೇ ಶನಿವಾರ ವಿದ್ಯುತ್ ಅದಾಲತ್ ನಡೆಸಿ ಸ್ಥಳೀಯವಾಗಿ ವಿದ್ಯುತ್ ಸಮಸ್ಯೆ ಬಗೆಹರಿಸಲಾಗುತ್ತಿದೆ. 24 ಗಂಟೆಯಲ್ಲಿ ವಿದ್ಯುತ್ ಪರಿವರ್ತಕ(ಟಿಸಿ) ಬದಲಾವಣೆಯಲ್ಲಿ ಶೇ. 90ರಷ್ಟು ಗುರಿ ಸಾಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ವಸತಿ ವಲಯಗಳಲ್ಲಿ ಸೌರ ಛಾವಣಿ ಸ್ಥಾಪನೆಗೆ ಎದುರಾಗಿದ್ದ ಸಣ್ಣಪುಟ್ಟ ಅಡೆತಡೆ ನಿವಾರಿಸಿ ತ್ವರಿತಗತಿಯಲ್ಲಿ ಅನುಮತಿ ನೀಡಲಾಗುವುದು. ಸಬ್ಸಿಡಿ ಹಣವನ್ನು ಮನೆ ಮಾಲೀಕರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net