ಹೆದ್ದಾರಿಯಲ್ಲಿ ಅಪಾಯಕಾರಿ ಗುಂಡಿಗಳು

ಹೆದ್ದಾರಿಯಲ್ಲಿ ಅಪಾಯಕಾರಿ ಗುಂಡಿಗಳು
Published on

ಕೊಳ್ಳೇಗಾಲ: ಪಟ್ಟಣದ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಬದಿಯ ಪಾಪನಕೆರೆ ಹಾಗೂ ಉತ್ತಂಬಳ್ಳಿ ಗ್ರಾಮದ ರಸ್ತೆಯಲ್ಲಿರುವ ಅಪಾಯಕಾರಿ ಗುಂಡಿಗಳು ವಾಹನ ಸವಾರರ ಜೀವ ತೆಗೆಯಲು ಬಾಯ್ತೆರೆದು ಕಾಯುತ್ತಿವೆ.

ಬೆಂಗಳೂರಿನಿಂದ ತಮಿಳುನಾಡಿನ ದಿಂಡಿಗಲ್ ಸಂಪರ್ಕಿಸುವ ರಾಷ್ಟೀಯ ಹೆದ್ದಾರಿ (209) ಇದಾಗಿದ್ದು, ಕೊಳ್ಳೇಗಾಲ ಪಟ್ಟಣದಿಂದ 4 ಕಿಮೀ ಅಂತರದಲ್ಲಿರುವ ಉತ್ತಂಬಳ್ಳಿ ಗ್ರಾಮದ ಬಳಿ ಭಾರಿ ಗಾತ್ರದ ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ತೆರಳುವಂತಾಗಿದೆ.

ಅಂತೆಯೇ, ಕೊಳ್ಳೇಗಾಲದಿಂದ ಬೆಂಗಳೂರು ಸಂಪರ್ಕಿಸುವ ರಸ್ತೆಯ ಮಾರ್ಗಮಧ್ಯೆ ಸಿಗುವ ಪಾಪನ ಕೆರೆಯ ಬಳಿಯೂ ಗುಂಡಿಗಳು ಹೆಚ್ಚಿವೆ. ಹೆದ್ದಾರಿಯಾದ ಕಾರಣ ಬೆಂಗಳೂರು, ಮೈಸೂರು, ಚಾಮರಾಜನಗರ, ತಮಿಳುನಾಡಿಗೆ ತೆರಳುವ ವಾಹನಗಳು ದಿನವಿಡೀ ಸಾವಿರಾರು ಸಂಖ್ಯೆಯಲ್ಲಿ ಸಂಚರಿಸುತ್ತವೆ. ನಿಯಮ ಮೀರಿ ಅತೀ ಭಾರ ಹೊತ್ತ ಟಿಪ್ಪರ್ ಲಾರಿಗಳು, ಕಂಟೈನರ್‌ಗಳು ಹೆಚ್ಚಾಗಿ ಸಂಚರಿಸುತ್ತಿರುವುದರಿಂದ ಗುಂಡಿಗಳು ಸೃಷ್ಟಿಯಾಗಿವೆ.
ಬೈಕ್ ಸವಾರರು ಆಯಾತಪ್ಪಿ ಗುಂಡಿಗಳ ಮೇಲೆ ಬಿಟ್ಟರೆ ಪಲ್ಟಿ ಹೊಡೆದು ಅನಾಹುತ ಸಂಭವಿಸುವುದು ಖಚಿತ. ಒಂದೊಂದು ಗುಂಡಿಗಳು ಅರ್ಧ ಅಡಿ ಆಳ, 2-3 ಅಡಿ ಅಗಲ-ಉದ್ದವಿದೆ.

ಪಾಪನಕೆರೆಯ ಬಳಿ ಇರುವ ಗುಂಡಿಗಳ ಅಪಾಯದ ಸ್ಥಿತಿ ನೋಡಿ ಜನರೇ ಅವುಗಳಿಗೆ ಕಲ್ಲುಗಳನ್ನು ಭರ್ತಿ ಮಾಡಿದ್ದಾರೆ. ಇನ್ನು ಉತ್ತಂಬಳ್ಳಿ ಬಳಿ ರಸ್ತೆ ಪರಿಸ್ಥಿತಿ ಹೇಳತೀರದು. ರಸ್ತೆ ಅರಿವಿಲ್ಲದ, ಹೊರಗಿನಿಂದ ಮೊದಲ ಬಾರಿಗೆ ಇತ್ತ ಪ್ರಯಾಣ ಮಾಡುವ ವಾಹನ ಸವಾರರಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ.

ಇಷ್ಟಾದರೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇಂತಹ ಡೆಡ್ಲಿ ಗುಂಡಿಗಳನ್ನು ಮುಚ್ಚಿಸುವ ಗೋಜಿ ಹೋಗಿಲ್ಲ. ಸ್ಥಳೀಯ ಜನಪ್ರತಿನಿಧಿಗಳು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಉನ್ನತ ಅಧಿಕಾರಿಗಳು ರಸ್ತೆಗಳಲ್ಲಿ ಸಂಚರಿಸುವಾಗ ಈ ರಸ್ತೆಯ ಶೋಚನೀಯ ಸ್ಥಿತಿಯನ್ನು ಗಮನಹರಿಸಿ ಕ್ರಮ ವಹಿಸದಿರುವುದು ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಈ ಗುಂಡಿಗಳು ಜನರ ಜೀವ ತೆಗೆಯುವ ಮೊದಲು ಮುಚ್ಚಿಸುವ ಕೆಲಸಕ್ಕೆ ಸಂಬಂಧಪಟ್ಟವರು ಕ್ರಮವಹಿಸಬೇಕಿದೆ.

ಉತ್ತಂಬಳ್ಳಿ ಹಾಗೂ ಪಾಪನಕೆರೆ ಬಳಿಯ ರಸ್ತೆ ಗುಂಡಿಗಳು ಜನಸಾಮಾನ್ಯರ ಪ್ರಾಣ ಕಸಿಯುವ ಮೊದಲು ಸಂಬಂಧಪಟ್ಟವರು ಗುಂಡಿ ಮುಚ್ಚಿಸಬೇಕು. ಹೆದ್ದಾರಿ ಪರಿಸ್ಥಿತಿ ಹೀಗಾಗಿರುವುದು ನಾಚಿಗೇಡಿನ ಸಂಗತಿ. ಜನರ ಜೀವದ ಜತೆ ಆಟ ಆಡವಾಡದೆ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಜನಪ್ರತಿನಿಧಿಗಳು ಇತ್ತ ಗಮಹರಿಸಬೇಕು.
* ಅಶೋಕ್, ಮುಡಿಗುಂಡ ನಿವಾಸಿ, ಕೊಳ್ಳೇಗಾಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net