ಹೆದ್ದಾರಿಯಲ್ಲಿ 2 ತಾಸು ಸಂಚಾರ ಬಂದ್

h5-NH bandh 1
Published on

ಹುಬ್ಬಳ್ಳಿ: ಸಂಜೆ ವೇಳೆ ಸುರಿದ ಮಳೆಗೆ ಕುಂದಗೋಳ ಕ್ರಾಸ್ ಬಳಿ ರಸ್ತೆಯಲ್ಲಿ ನೀರು ನಿಂತಿದ್ದರಿಂದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ 2 ತಾಸಿಗೂ ಹೆಚ್ಚು ಕಾಲ ಸಂಚಾರ ಸ್ಥಗಿತಗೊಂಡಿತ್ತು.

ಇಲ್ಲಿ ಷಟ್ಪಥ ರಸ್ತೆ ನಿರ್ವಣದ ಹಿನ್ನೆಲೆಯಲ್ಲಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಪಕ್ಕದ ಗಬ್ಬೂರ ಹಳ್ಳ ತುಂಬಿ ರಸ್ತೆಯ ಮೇಲೆ ನೀರು ಹರಿದು ಬಂದಿದೆ. ಅಂದಾಜು 300 ಮೀಟರ್ ಉದ್ದಕ್ಕೂ ರಸ್ತೆಯಲ್ಲಿ ಒಂದು-ಒಂದೂವರೆ ಅಡಿಯಷ್ಟು ನೀರು ನಿಂತಿತ್ತು.

ಇದರಿಂದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಜೆ 4.30ರಿಂದ ಸಂಚಾರ ಬಂದ್ ಆಗಿತ್ತು. ಎರಡೂ ಕಡೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸಂಜೆ 6 ಗಂಟೆಯ ವೇಳೆಗೆ ಒಂದು ಪಥದಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಈ ವೇಳೆ ಸಾವಿರಾರು ವಾಹನಗಳು ರಸ್ತೆಯಲ್ಲಿ ಸಾಲುಗಟ್ಟಿ ನಿಂತಿದ್ದರಿಂದ ಸುಗಮ ಸಂಚಾರ ಸಾಧ್ಯವಾಗಲಿಲ್ಲ. ತಾ ಮುಂದು ನಾ ಮುಂದು ಎಂದು ವಾಹನಗಳನ್ನು ನುಗ್ಗಿಸಿದ್ದರಿಂದ ಸಂಚಾರ ವ್ಯವಸ್ಥೆ ಇನ್ನಷ್ಟು ಜಟಿಲವಾಗಿತ್ತು. ಮಳೆ ನಿಂತು ನೀರು ಇಳಿಮುಖವಾದ ಬಳಿಕ ರಾತ್ರಿ ವೇಳೆ ಸಂಚಾರ ಪುನರಾರಂಭಗೊಂಡಿತು.

ಹುಬ್ಬಳ್ಳಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಜೆ ವೇಳೆ ಬಿಟ್ಟು ಬಿಟ್ಟು ಜೋರಾಗಿ ಮಳೆ ಸುರಿದಿದೆ.

ಮಳೆ ನೀರಿನಿಂದಾಗುವ ಸಮಸ್ಯೆ ನಿವಾರಿಸಿ

ಹುಬ್ಬಳ್ಳಿ: ಇಲ್ಲಿನ ದಾಜಿಬಾನ ಪೇಟೆಯ ಶ್ರೀ ತುಳಜಾ ಭವಾನಿ ದೇವಸ್ಥಾನದ ಆವರಣಕ್ಕೆ ಮಳೆ ನೀರು ನುಗ್ಗುತ್ತಿರುವುದನ್ನು ಎಸ್​ಎಸ್​ಕೆ ಸಮಾಜದ ಮುಖಂಡರು, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರ ಗಮನಕ್ಕೆ ತಂದರು.

ದೊಡ್ಡ ನಾಲಾದ ರಾಡಿ ನೀರಿನಿಂದ ಬಹಳಷ್ಟು ಸಮಸ್ಯೆ ಆಗುತ್ತಿದೆ. ಇದಕ್ಕೆ ಪರಿಹಾರ ಕಲ್ಪಿಸುವಂತೆ ವಿನಂತಿಸಿದರು. ಸಚಿವ ಜಗದೀಶ ಶೆಟ್ಟರ್, ಪಾಲಿಕೆ ಆಯುಕ್ತರಿಗೆ ಮೊಬೈಲ್ ಫೋನ್ ಮೂಲಕ ಮಾತನಾಡಿ, ಕೂಡಲೆ ಸಮಸ್ಯೆ ನಿವಾರಿಸುವಂತೆ ಸೂಚಿಸಿದರು.

ಧರ್ಮದರ್ಶಿ ನೀಲಕಂಠ ಜಡಿ, ಟ್ರಸ್ಟಿ ಭಾಸ್ಕರ ಜಿತೂರಿ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಮಾಜಿ ಮಹಾಪೌರ ಡಿ.ಕೆ. ಚವ್ಹಾಣ, ರಾಜು ಜರತಾರಘರ, ಮಿಥುನ ಚವ್ಹಾಣ ಇತರರು ಇದ್ದರು.

ಅಬ್ಬಯ್ಯಗೆ ಮನವಿ: ನಾಲಾ ನೀರಿನಿಂದ ದೇವಸ್ಥಾನದಲ್ಲಿ ಆಗುತ್ತಿರುವ ಸಮಸ್ಯೆ ನಿವಾರಿಸುವಂತೆ ಎಸ್​ಎಸ್​ಕೆ ಸಮಾಜ ಚಿಂತನ ಮಂಥನ ಸಮಿತಿ ಸದಸ್ಯರು, ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ಮನವಿ ಮಾಡಿದರು. ಸ್ಥಳದಲ್ಲಿದ್ದ ಪಾಲಿಕೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಅಬ್ಬಯ್ಯ, ಆಯುಕ್ತರಿಗೆ ಕರೆ ಮಾಡಿ ನಾಳೆಯಿಂದಲೇ ಕೆಲಸ ಆರಂಭಿಸಬೇಕು. ಮತ್ತೊಮ್ಮೆ ಮಳೆ ನೀರಿನಿಂದ ಅವಾಂತರ ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net