

ಪಾಂಡವಪುರ: ಶಾಲಾ ಕಾಲೇಜುಗಳಿಗೆ ತೆರಳಲು ಅನುಕೂಲವಾಗುವಂತೆ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ನೀಡಿದ್ದ ಭರವಸೆ ಹುಸಿಯಾಗಿದ್ದು, ಸಮಸ್ಯೆ ಬಗೆಹರಿಸುವಲ್ಲಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಹೆದ್ದಾರಿ ಸಂಚಾರ ತಡೆದು ಗುರುವಾರ ಪ್ರತಿಭಟನೆ ನಡೆಸಿದರು.
ಶಾಲಾ ಕಾಲೇಜುಗಳಿಗೆ ತೆರಳಲು ತಾಲೂಕಿನ ಕೋಡಹಳ್ಳಿ ಹೊಸೂರು ಗ್ರಾಮದ ಗೇಟ್‌ನಲ್ಲಿ ಜಮಾವಣೆಗೊಂಡಿದ್ದ ನೂರಾರು ವಿದ್ಯಾರ್ಥಿಗಳು ಸಾಕಷ್ಟು ಸಮಯ ಕಾದರೂ ಬಸ್ ಸಿಗದ ಕಾರಣ ಏಕಾಏಕಿ ಪ್ರತಿಭಟನೆಗೆ ಇಳಿದು ಸುಮಾರು ಅರ್ಧ ತಾಸುಗಳ ಕಾಲ ಹೆದ್ದಾರಿ ಸಂಚಾರ ತಡೆದು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಬಸ್ ರೂಟ್ ವ್ಯವಸ್ಥೆ ಕಲ್ಪಿಸುವುದಾಗಿ ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕ ಅಪ್ಪಿರೆಡ್ಡಿ ಭರವಸೆ ನೀಡುವ ಜತೆಗೆ ನಾಗಮಂಗಲ, ತುಮಕೂರಿನಿಂದ ಆಗಮಿಸುವ ಎಲ್ಲ ಬಸ್‌ಗಳನ್ನು ಗ್ರಾಮದ ಗೇಟ್‌ನಲ್ಲಿ ನಿಲುಗಡೆ ನೀಡಲು ಕ್ರಮ ತೆಗೆದುಕೊಳ್ಳುವುದಾಗಿ ಇತ್ತೀಚೆಗೆ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ತಿಳಿಸಿದ್ದರು. ಆದರೆ ಈ ಬಗ್ಗೆ ಗಮನ ಹರಿಸಿಲ್ಲ. ವಿದ್ಯಾರ್ಥಿಗಳು ಮೊಬೈಲ್ ಕರೆ ಮಾಡಿ ವಿಚಾರಿಸಿದರೆ ಬೇಜವಾಬ್ದಾರಿಯಿಂದ ಮಾತನಾಡುತ್ತಾರೆ. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಬಸ್ ವ್ಯವಸ್ಥೆ ಕಲ್ಪಿಸಲು ಮೇಲಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕಾಮಿಸಿದ ಡಿಪೋ ಮ್ಯಾನೇಜರ್ ಅಪ್ಪಿರೆಡ್ಡಿ, ಕೆಲವು ತಾಂತ್ರಿಕ ಕಾರಣಗಳಿಂದ ಈ ಹಿಂದೆ ಕೊಟ್ಟ ಭರವಸೆ ಈಡೇರಿಸಲು ಸಾಧ್ಯವಾಗಲಿಲ್ಲ. ಜು.21 ರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಈ ಮಾರ್ಗವಾಗಿ ಸಂಚರಿಸುವ ಎಲ್ಲ ಬಸ್‌ಗಳು ಗ್ರಾಮದ ಗೇಟ್‌ನಲ್ಲಿ ನಿಲುಗಡೆ ನೀಡಲು ಕ್ರಮವಹಿಸುವುದಾಗಿ ತಿಳಿಸಿದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟರು.