

ಮದ್ದೂರು: ಕೆಆರ್‌ಎಸ್ ಅಣೆಕಟ್ಟೆಯಿಂದ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ-ಹಸಿರು ಸೇನೆ ವತಿಯಿಂದ ಬುಧವಾರ ಮದ್ದೂರು ಪಟ್ಟಣದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು.
ರೈತ ಸಂಘದ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಮುಖಂಡ ಅಣ್ಣೂರು ಮಹೇಂದ್ರ ಮಾತನಾಡಿ, ಮಂಡ್ಯ ಜಿಲ್ಲೆಯ ಜನರು ಕೆಆರ್‌ಎಸ್ ನೀರನ್ನು ನಂಬಿಕೊಂಡು ವಿವಿಧ ಬೆಳೆಗಳನ್ನು ಬೆಳೆಯಲು ಪ್ರಾರಂಭಿಸಿದ್ದಾರೆ. ಇಲ್ಲಿನ ರೈತರಿಗೆ ನೀರಿಲ್ಲದ ಪರಿಸ್ಥಿತಿ ಇದ್ದರೂ ತಮಿಳುನಾಡಿಗೆ ಕೆಆರ್‌ಎಸ್ ನೀರು ಬಿಟ್ಟಿರುವುದು ಎಷ್ಟು ಸರಿ? ರೈತರು ಬೆಳೆದಿರುವ ಎಲ್ಲ ಬೆಳೆಗಳಿಗೂ ಸಮರ್ಪಕವಾಗಿ ನೀರು ಕೊಡಬೇಕು. ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ವಹಿಸಬೇಕು. ಅಂತರ್ಜಲ ಮಟ್ಟ ಹೆಚ್ಚಿಸಬೇಕು. ಕೂಡಲೇ ತಮಿಳುನಾಡಿಗೆ ಬಿಟ್ಟಿರುವ ನೀರನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಹಿರಿಯ ಮುಖಂಡ ಕೀಳಘಟ್ಟ ನಂಜುಂಡಯ್ಯ ಮಾತನಾಡಿ, ಯಾವುದೇ ಸರ್ಕಾರಗಳು ಅಧಿಕಾರಕ್ಕೆ ಬರುವ ಮುನ್ನ ರೈತರನ್ನು ಓಲೈಕೆ ಮಾಡುತ್ತಾರೆ. ಅಧಿಕಾರಕ್ಕೆ ಬಂದ ನಂತರ ರೈತ ವಿರೋಧಿ ಧೋರಣೆ ಅನುಸರಿಸುತ್ತಾರೆ. ರೈತ ದೇಶದ ಬೆನ್ನೆಲುಬು ಎನ್ನುತ್ತಾರೆ, ಆದರೆ ರೈತನ ಬೆನ್ನು ಮುರಿಯುವ ಕೆಲಸ ಮಾಡುತ್ತಿದ್ದಾರೆ. ಈ ಪರಿ ಪಾಠವನ್ನು ಸರ್ಕಾರ ನಿಲ್ಲಿಸಬೇಕು ಎಂದು ಕಿಡಿಕಾರಿದರು.
ಯರಗನಹಳ್ಳಿ ರಾಮಕೃಷ್ಣ, ನಾಗರಾಜು, ರಾಂಪುರ ಸೀತಾರಾಮ, ಪ್ರಕಾಶ, ಪ್ರಭುಲಿಂಗ, ಪುಟ್ಟಸ್ವಾಮಿ, ಚೆನ್ನಪ್ಪ, ನವೀನ, ಜಗದೀಶ, ಮರಲಿಂಗ, ಅರಗಿನಮೇಳೆ ರಾಮೇಗೌಡ, ವೆಂಕಟೇಶ, ರಾಜೇಶ, ಉಮೇಶ, ರಮೇಶ ಇತರರು ಇದ್ದರು.