ಹೆದ್ದಾರಿ ಸಂಚಾರ ತಡೆದು ಆಕ್ರೋಶ

SRP_09-01jpg
ಶ್ರೀರಂಗಪಟ್ಟಣದ ಕುವೆಂಪು ವೃತ್ತದಲ್ಲಿ ಶುಕ್ರವಾರ ಪಾಲಹಳ್ಳಿ ಗ್ರಾಮದ ಹಾಲು ಉತ್ಪಾದಕರು ಹಾಗೂ ರೈತ ಸಂಘದ ಕಾರ್ಯಕರ್ತರು ಮಾನವ ಸರಪಳಿ ಪ್ರತಿಭಟನೆ ನಡೆಸಿದರು. ಪಾಂಡು, ಮರಳಗಾಲ ಕೃಷ್ಣೇಗೌಡ, ಾಲಹಳ್ಳಿ ರಾಮೇಗೌಡ, ಕಡತನಾಳು ಬಾಲಕೃಷ್ಣ, ಪಿ.ಡಿ.ಕುಮಾರ್, ಸೋಮಣ್ಣ, ಕಿರಣ್, ನಿವೃತ್ತ ಪ್ರೋ.ಪಿ.ಡಿ.ತಿಮ್ಮಪ್ಪ, ಚಂದ್ರಶೇಖರ್ ಇದ್ದರು.
Published on

ಶ್ರೀರಂಗಪಟ್ಟಣ: ಕಬ್ಬು ಹಾಗೂ ಹಾಲಿಗೆ ವೈಜ್ಞಾನಿಕ ದರ ನಿಗದಿ ಮಾಡುವಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಕಬ್ಬಿಗೆ 50 ರೂ. ದರ ಏರಿಸಿ ಬೆಂಬಲ ಬೆಲೆ ನೀಡಿದ್ದೇವೆ ಎನ್ನುವ ರಾಜ್ಯ ಸರ್ಕಾರದ ನಡೆ ಖಂಡನೀಯ ಎಂದು ಹಾಲು ಉತ್ಪಾದಕರು ಹಾಗೂ ರೈತ ಸಂಘದ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.

ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ಕುವೆಂಪು ವೃತ್ತದಲ್ಲಿ ಶುಕ್ರವಾರ ಪಾಲಹಳ್ಳಿ ಗ್ರಾಮದ ಹಾಲು ಉತ್ಪಾದಕರು ಹಾಗೂ ರೈತ ಸಂಘದ ಕಾರ್ಯಕರ್ತರು ಕೆಲ ನಿಮಿಷ ಮಾನವ ಸರಪಳಿ ನಿರ್ಮಿಸಿ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ಪಿಎಸ್‌ಎಸ್‌ಕೆ ಮಾಜಿ ನಿರ್ದೇಶಕ ಪಾಂಡು ಮಾತನಾಡಿ, ಕಬ್ಬು ಮತ್ತು ಹಾಲಿಗೆ ವೈಜ್ಞಾನಿಕ ದರ ನಿಗದಿಗೆ ಒತ್ತಾಯಿಸಿ ರೈತರು ಹಲವು ದಿನಗಳಿಂದ ಮಂಡ್ಯದಲ್ಲಿ ನಿರಂತರ ಧರಣಿ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ರೈತರ ಒತ್ತಾಯ ಪುರಸ್ಕರಿಸಿ ಬೆಂಬಲ ಬೆಲೆಯ ಸಿಹಿ ಸುದ್ದಿ ನೀಡುವುದಾಗಿ ತಿಳಿಸಿ ಭಿಕ್ಷೆಯಂತೆ 50.ರೂಗಳನ್ನು ಹೆಚ್ಚಿಸಿದ್ದಾರೆ. ಅವರ 50 ರೂ. ಬೆಂಬಲ ಬೆಲೆಗೆ ರೈತರೇ 1 ರೂ. ಸೇರಿಸಿ ಪುನಃ ಸರ್ಕಾರಕ್ಕೆ 51 ರೂ.ಗಳನ್ನು ಮನಿ ಆರ್ಡರ್ ಮಾಡಲಾಗುತ್ತದೆ ಎಂದು ಆಕ್ರೋಶ ಹೊರಹಾಕಿದರು.

ರೈತಸಂಘದ ತಾಲೂಕು ಅಧ್ಯಕ್ಷ ಮರಳಗಾಲ ಕೃಷ್ಣೇಗೌಡ ಮಾತನಾಡಿ, ಸರ್ಕಾರದ ನಡೆ ವಿರೋಧಿಸಿ ಪಾಲಹಳ್ಳಿ ಹಾಲು ಉತ್ಪಾದಕರ ಸಂಘ ರೈತರ ಧರಣಿಗೆ ಬೆಂಬಲಿಸಿದೆ. ಇಂತಹ ಹೋರಾಟ ತಾಲೂಕಿನ ಎಲ್ಲ ಒಕ್ಕೂಟದಿಂದಲೂ ಮುಂದೆ ನಡೆಯಬೇಕು ಎಂದು ಮನವಿ ನೀಡಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಪಾಲಹಳ್ಳಿ ರಾಮೇಗೌಡ, ಕಡತನಾಳು ಬಾಲಕೃಷ್ಣ, ಪಿ.ಡಿ.ಕುಮಾರ್, ಸೋಮಣ್ಣ, ಪಾಲಹಳ್ಳಿ ಹಾಲು ಒಕ್ಕೂಟದ ಅಧ್ಯಕ್ಷ ಕಿರಣ್, ನಿವೃತ್ತ ಪ್ರೊ.ಪಿ.ಡಿ.ತಿಮ್ಮಪ್ಪ, ಚಂದ್ರಶೇಖರ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net