

ತುಮಕೂರು : ಕ್ಯಾತಸಂದ್ರ ಟೋಲ್ ಬಳಿಯಿಂದ ನಗರ ಹೊರವಲಯದ ಊರುಕೆರೆವರೆಗೆ ಗುಂಡಿಗಳಿಂದ ತುಂಬಿರುವ ರಾಷ್ಟ್ರೀಯ ಹೆದ್ದಾರಿ ದುರಸ್ತಿಗೊಳಿಸುವಂತೆ ಶುಕ್ರವಾರ ಹೆದ್ದಾರಿ ತಡೆದ ಕಾಂಗ್ರೆಸ್ಸಿಗರು ಹೈಡ್ರಾಮ ಸೃಷ್ಟಿಸಿದರು.
ಕ್ಯಾತಸಂದ್ರ ಸರ್ಕಲ್ ಬಳಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿಹುಲಿಕುಂಟೆ ಮಠ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು, ಪ್ರತಿನಿತ್ಯ ಸಾವಿರಾರು ವಾಹನ ಸಂಚರಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದರೂ ರಿಪೇರಿ ಮಾಡಿಸದೆ ಇರುವುದರ ವಿರುದ್ಧ ಆಕ್ರೋಶ ಹೊರಹಾಕಿದರು. ಅಲ್ಲದೆ, ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷೃಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಏಕಾಏಕಿ ರಸ್ತೆ ತಡೆ: ಪ್ರತಿಭಟನಾನಿರತರು ಏಕಾಏಕಿ ರಸ್ತೆ ಬಂದ್‌ಗೆ ಮುಂದಾದಾಗ ಪೊಲೀಸರು ತಬ್ಬಿಬ್ಬಾದರು. ಈ ವೇಳೆ ಪೊಲೀಸರ ಮಾತು ಧಿಕ್ಕರಿಸಿ ಕೆಲಹೊತ್ತು ರಸ್ತೆ ಮಧ್ಯೆದಲ್ಲೇ ಕುಳಿತುಬಿಟ್ಟರು. ಸಂಚಾರ ಅಸ್ತವ್ಯಸ್ತವಾಗಿ, ಕ್ಷಣಾರ್ಧದಲ್ಲೇ ಕಿಲೋಮೀಟರ್ ಗಟ್ಟಲೆ ವಾಹನಗಳು ನಿಂತವು. ಇದರಿಂದ ಗಲಿಬಿಲಿಗೊಂಡ ಪೊಲೀಸರು ಪ್ರತಿಭಟನಾನಿರತರನ್ನು ಹೊತ್ತೊಯ್ದು ಪೊಲೀಸ್ ವಾಹನಕ್ಕೆ ತುಂಬಿದರು. ಹೆದ್ದಾರಿಯಲ್ಲಿ ಪೊಲೀಸರಿಂದ ಕಾಂಗ್ರೆಸ್ಸಿಗರು ತಪ್ಪಿಸಿಕೊಳ್ಳುವ ಸಂದರ್ಭದಲ್ಲಿ ಹೈಡ್ರಾಮಾವೇ ನಡೆಯಿತು.
ಕ್ಯಾತಸಂದ್ರ ಟೋಲ್‌ನಿಂದ ಊರುಕೆರೆವರೆಗೆ ರಾಷ್ಟ್ರೀಯ ಹೆದ್ದಾರಿ-48 ಚತುಷ್ಪಥ ರಸ್ತೆ ಸಂಪೂರ್ಣ ಹಾಳಾಗಿದೆ. ಇದೇ ಹೆದ್ದಾರಿಯಲ್ಲಿ ರಾಜ್ಯದ ಸಿಎಂ ಹಾಗೂ 16ಕ್ಕೂ ಹೆಚ್ಚು ಜಿಲ್ಲೆಗಳ ಜಿಲ್ಲಾ ಸಚಿವರು ಸಂಚರಿಸುತ್ತಾರೆ. ಆದರೆ, ಇವರ‌್ಯಾರ ಕಣ್ಣಿಗೂ ರಸ್ತೆ ಹಾಳಾಗಿರುವುದು ಕಂಡು ಬರುತ್ತಿಲ್ಲ. ಜಿಲ್ಲಾ ಸಚಿವ ಜೆ.ಸಿ.ಮಾಧುಸ್ವಾಮಿ, ಸಂಸದ ಜಿ.ಎಸ್.ಬಸವರಾಜು, ಶಾಸಕ ಜ್ಯೋತಿಗಣೇಶ್ ಅವರಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಶಿಹುಲಿಕುಂಟೆ ಮಠ್ ಆರೋಪಿಸಿದರು.
ಕಳೆದ 2 ತಿಂಗಳ ಹಿಂದೆಯೇ ಜಿಲ್ಲಾಡಳಿತ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಇತರ ಅಧಿಕಾರಿಗಳಿಗೆ ಹಾಳಾಗಿರುವ ರಸ್ತೆ ದುರಸ್ತಿಗೊಳಿಸುವಂತೆ ಮನವಿ ಮಾಡಿದ್ದರೂ ಯಾರೊಬ್ಬರೂ ಇತ್ತ ಗಮನಹರಿಸುತ್ತಿಲ್ಲ. ಅತಿವೇಗದಲ್ಲಿ ಚಲಿಸುವ ವಾಹನಗಳು, ರಸ್ತೆಯಲ್ಲಿರುವ ಗುಂಡಿಗಳಿಂದ ತಪ್ಪಿಸಿಕೊಳ್ಳಲು ಹೋಗಿ, ಬೇರೆ ವಾಹನಗಳಿಗೆ ಡಿಕ್ಕಿ ಹೊಡೆದ ಹಲವು ಪ್ರಕರಣಗಳಿವೆ. ಇಷ್ಟಾದರೂ ಜಿಲ್ಲಾಡಳಿತವಾಗಲಿ, ಹೆದ್ದಾರಿ ಪ್ರಾಧಿಕಾರವಾಗಲಿ ನಿರ್ಲಕ್ಷೃವಹಿಸಿದೆ. ಆಡಳಿತ ಪಕ್ಷದ ರಾಜಕಾರಣಿಗಳ ತಾಳಕ್ಕೆ ತಕ್ಕಂತೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದು, ಪ್ರತಿಪಕ್ಷಗಳು ಮಾಡಿದ ಮನವಿಗಳಿಗೆ ಬೆಲೆಯೇ ಇಲ್ಲದಂತಾಗಿದೆ ಎಂದು ಮಠ್ ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಖಂಡರಾದ ಕೆ.ಎಚ್.ಆನಂದ್, ಜಯರಾಮ್, ಆಟೋರಾಜು, ಮೋಹನ್, ಹನುಮಂತರಾಜು, ಸಿದ್ದರಾಜು, ಸೈಯದ್ ಪೀರ್, ಆಕಾಶ್, ಮಹಮದ್ ಅತೀಕ್, ಜಿ.ಆರ್.ರವಿ ಸೇರಿ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು ನಂತರ ಬಿಡುಗಡೆ ಮಾಡಿದರು.
ಸುಲಿಗೆ ಮಾಡುವ ಟೋಲ್ : ರಸ್ತೆ ದುರಸ್ತಿಗಾಗಿ ಪ್ರತಿಭಟನೆ ನಡೆಸುತ್ತೇವೆ, ಅನುಮತಿ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಿದರೆ, ನಮ್ಮ ಹೋರಾಟ ಶ್ಲಾಘಿಸುವ ಅಧಿಕಾರಿಗಳು, ಅನುಮತಿ ನೀಡಲು ಸಾಧ್ಯವಿಲ್ಲವೆಂಬ ಹಿಂಬರಹ ನೀಡುತ್ತಾರೆ. ಹೀಗಾದರೆ ಜನರ ಸಮಸ್ಯೆಗಳು ಸರ್ಕಾರಕ್ಕೆ ತಿಳಿಯುವುದು ಹೇಗೆ? ಇನ್ನು ಕ್ಯಾತಸಂದ್ರ ಬಳಿಯ ಜಾಸ್ ಟೋಲ್‌ನ ಗುತ್ತಿಗೆ ಅವಧಿ ಮುಗಿದ್ದಿದ್ದರೂ ವಾಹನ ಸವಾರರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಸರ್ವೀಸ್ ರೋಡ್ ಸಹ ನಿರ್ಮಿಸಿಲ್ಲ. ಫಾಸ್ಟ್ ಟ್ಯಾಗ್ ಮೂಲಕ ಕೇಂದ್ರ ಸರ್ಕಾರ ಜನರು ಕಷ್ಟಪಟ್ಟು ದುಡಿದ ಹಣವನ್ನು ದೋಚುತ್ತಿದೆ ಎಂದು ಶಶಿಹುಲಿಕುಂಟೆ ಮಠ್ ಆರೋಪಿಸಿದರು.