ಹೆದ್ದಾರಿ ದರೋಡೆಕೋರರ ಗ್ಯಾಂಗ್ ಚುರುಕು

Thief
Published on

ಹುಬ್ಬಳ್ಳಿ: ಲಾರಿಗಳನ್ನೇ ಟಾರ್ಗೆಟ್ ಮಾಡಿಕೊಂಡಿರುವ ಖತರ್ನಾಕ್ ಹೆದ್ದಾರಿ ದರೋಡೆಕೋರರ ಗುಂಪೊಂದು ಕಾರವಾರ ರಸ್ತೆಯಲ್ಲಿ ಮಾರಕಾಸ್ತ್ರ ತೋರಿಸಿ ಸ್ಟೆಪ್ನಿ, ಬ್ಯಾಟರಿ ಮತ್ತಿತರ ಬೆಲೆಬಾಳುವ ವಸ್ತುಗಳನ್ನು ರಾಜಾರೋಷವಾಗಿ ಲೂಟಿ ಮಾಡುತ್ತಿರುವುದಾಗಿ ತಿಳಿದುಬಂದಿದೆ.

ಕಾರವಾರ ರಸ್ತೆಯ ಬೈಪಾಸ್ ಸೇತುವೆಯಿಂದ ಅಂಚಟಗೇರಿಯವರೆಗೆ ಹಾಗೂ ಗಬ್ಬೂರ ಬೈಪಾಸ್ ಬಳಿ ರಾತ್ರಿ ಬೀಡು ಬಿಡುವ 7-8 ಯುವಕರ ಗ್ಯಾಂಗ್ ಲಾರಿಗಳನ್ನೇ ಟಾರ್ಗೆಟ್ ಮಾಡುತ್ತಿದೆ. ರಾತ್ರಿ 8ರಿಂದ ಬೆಳಗಿನಜಾವ 3 ಗಂಟೆಯವರೆಗೆ ಸಕ್ರಿಯವಾಗಿರುವ ಈ ಗ್ಯಾಂಗ್​ನಿಂದಾಗಿ ಲಾರಿಗಳ ಚಾಲಕರು ಬೆಚ್ಚಿಬಿದ್ದಿದ್ದಾರೆ.

ಇಷ್ಟಾದರೂ ತಮಗೂ ದರೋಡೆಗೂ ಸಂಬಂಧವೇ ಇಲ್ಲವೆನ್ನುವಂತಿದೆ ಪೊಲೀಸರ ವರ್ತನೆ. ಲಾರಿ ದರೋಡೆ ಬಗ್ಗೆ ಹಲವಾರು ದೂರುಗಳು ಬಂದಿದ್ದರೂ ಇದುವರೆಗೆ ತಡೆಯುವ ಕಠಿಣ ಕ್ರಮಕ್ಕೆ ಮುಂದಾಗಿಲ್ಲ. ರಾತ್ರಿ ಹೊತ್ತಿನಲ್ಲಿ ಸಂಚರಿಸುವ ಲಾರಿಗಳ ಗಾಜುಗಳಿಗೆ ಕಲ್ಲು ಹೊಡೆದು ನಿಲ್ಲಿಸುವ ಈ ಗ್ಯಾಂಗ್, ಲಾರಿಯ ಬಿಡಿಭಾಗಗಳು, ಚಾಲಕನ ಹಣ, ಮೊಬೈಲ್ ಮತ್ತಿತರ ವಸ್ತುಗಳನ್ನು ದೋಚಿ ಪರಾರಿಯಾಗುತ್ತದೆ. ಸರಕು ಸಾಗಣೆ ಲಾರಿಗಳಲ್ಲಿ ಬೆಲೆ ಬಾಳುವ ವಸ್ತುಗಳಿದ್ದರೆ ಅವುಗಳನ್ನೂ ದೋಚುತ್ತಾರೆ.

ಲಾರಿಗಳ ಬ್ಯಾಟರಿಯೊಂದರ ಬೆಲೆ 20ರಿಂದ 30 ಸಾವಿರ ರೂ. ಇದೆ. ಚಾಲಕರು ತಮ್ಮ ಜೇಬಿನಿಂದ ಮತ್ತೆ ಹೊಸ ಬ್ಯಾಟರಿ ಖರೀದಿಸಿ, ಜೋಡಿಸುವವರೆಗೆ ಲಾರಿ ಮುಂದಕ್ಕೆ ಚಲಿಸುವುದಿಲ್ಲ.

ಬೈಕ್​ನಲ್ಲಿ ಬರುವ ದರೋಡೆಕೋರರು :

ಬೈಕ್​ಗಳಲ್ಲಿ ಬರುವ ಈ ಗ್ಯಾಂಗ್​ನ ಯುವಕರು ಮುಖಕ್ಕೆ ಬಟ್ಟೆ , ಸೊಂಟಕ್ಕೆ ಚೈನ್ ಕಟ್ಟಿಕೊಂಡಿರುತ್ತಾರೆ. ಬೈಕ್​ಗಳ ನಂಬರ್ ಪ್ಲೇಟ್​ಗಳಿಗೆ ಬಟ್ಟೆ ಕಟ್ಟಿರುತ್ತಾರೆ. ಗ್ಯಾಂಗ್​ನ ಪ್ರತಿಯೊಬ್ಬರ ಕೈಯಲ್ಲಿ ಬಟನ್ ಚಾಕು ಸಾಮಾನ್ಯ ಎಂಬಂತಾಗಿದೆ.

ಹೊರ ರಾಜ್ಯಗಳ ಲಾರಿಗಳನ್ನು ಈ ಮೊದಲು ಟಾರ್ಗೆಟ್ ಮಾಡುತ್ತಿದ್ದ ಗ್ಯಾಂಗ್, ಇತ್ತೀಚೆಗೆ ಸ್ಥಳೀಯ ಲಾರಿಗಳನ್ನೂ ದೋಚುತ್ತಿದೆ. ರಾತ್ರಿಯಷ್ಟೇ ಸಕ್ರಿಯವಾಗಿರುತ್ತಿದ್ದ ಈ ಗ್ಯಾಂಗ್, ಇತ್ತೀಚೆಗೆ ಹಗಲು ಹೊತ್ತಿನಲ್ಲಿಯೂ ಲೂಟಿ ಪ್ರಾರಂಭಿಸಿದೆ.

ಗಬ್ಬೂರ ಬೈಪಾಸ್ ಬಳಿಯೂ ಇವರದ್ದೇ ಆದ ಮತ್ತೊಂದು ಗ್ಯಾಂಗ್ ಆಕ್ಟಿವ್ ಆಗಿದೆ. ಈ ಗ್ಯಾಂಗ್​ನವರೇ ಅಲ್ಲಿಯೂ ಲೂಟಿ ಮಾಡುತ್ತಿರಬಹುದಾದ ಶಂಕೆ ಇದೆ. ಕಾರವಾರ ರಸ್ತೆಯಲ್ಲಿ ದೋಚಲು ಏನೂ ಸಿಗದಿದ್ದರೆ ಗಬ್ಬೂರ ಬೈಪಾಸ್ ಬಳಿ ಲೂಟಿ ನಡೆಸಿರುವ ಶಂಕೆ ಅಲ್ಲಗಳೆಯುವಂತಿಲ್ಲ.

ನಿತ್ಯ 2ರಿಂದ 4 ಲಾರಿಗಳು ಈ ಗ್ಯಾಂಗ್​ನ ಟಾರ್ಗೆಟ್. ಕಾರವಾರ ರಸ್ತೆ ಮೂಲಕ ಗೋವಾಕ್ಕೆ ಹೋಗಿಬರುವ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಮತ್ತಿತರ ರಾಜ್ಯಗಳ ಲಾರಿಗಳಲ್ಲಿ ಮೌಲ್ಯಯುತ ಸರಕು ಸಾಗಿಸುವುದು ಹೆಚ್ಚು. ಹೊರ ರಾಜ್ಯಗಳ ಜತೆಗೆ ಸ್ಥಳೀಯ ಲಾರಿಗಳನ್ನೂ ದೋಚಿರುವ ಬಗ್ಗೆ ಹಳೇ ಹುಬ್ಬಳ್ಳಿ, ಕಸಬಾಪೇಟ ಹಾಗೂ ಬೆಂಡಿಗೇರಿ ಠಾಣೆಗಳಲ್ಲಿ ಹಲವಾರು ದೂರು ದಾಖಲಾಗಿದ್ದರೂ ದರೋಡೆಕೋರರ ಹಾವಳಿ ನಿಂತಿಲ್ಲ.

15 ದಿನಗಳ ಹಿಂದಷ್ಟೇ ಟ್ರಾನ್ಸ್​ಪೋರ್ಟ್​ನ ಕೆಲವರು ಈ ಗ್ಯಾಂಗ್​ನ ಒಬ್ಬನನ್ನು ಹಿಡಿದು ಥಳಿಸಿ, ಬೈಕ್ ಸಮೇತ ಹಳೇಹುಬ್ಬಳ್ಳಿ ಠಾಣೆ ಪೊಲೀಸರಿಗೆ ಒಪ್ಪಿಸಿದ್ದರು. ಪೊಲೀಸರು ಬೈಕ್ ಜಪ್ತಿ ಮಾಡಿದರಾದರೂ, ಆ ಗ್ಯಾಂಗ್ ಪತ್ತೆಗೆ ಮುಂದಾಗಲಿಲ್ಲ.

ಹಿಂದಿನ ಡಿಸಿಪಿ ಎಂ.ವೈ. ಬಾಲದಂಡಿ ಇದ್ದಾಗ ಪೊಲೀಸರು ರಾತ್ರಿ ಗಸ್ತು ತಿರುಗುತ್ತಿದ್ದರು. ಬಾಲದಂಡಿ ವರ್ಗವಾದ ನಂತರ ಹೆದ್ದಾರಿ ದರೋಡೆ ಮತ್ತೆ ಚುರುಕಾಗಿದೆ ಎಂಬ ಮಾತು ಕೇಳಿಬರುತ್ತಿದೆ.

ಹಿಂದೆ ಒಂದು ಬಾರಿ ಗ್ಯಾಂಗ್​ಅನ್ನು ಪೊಲೀಸರು ಹಿಡಿದಿದ್ದರು. ಆದರೆ ಪೊಲೀಸರು ಆ ಗ್ಯಾಂಗ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ನಂತರದ ಕೆಲದಿನಗಳಿಂದ ಲಾರಿಗಳ ಲೂಟಿ ಮುಂದುವರಿದಿದೆ. ಈ ಬಗ್ಗೆ ಲಾರಿಗಳ ಚಾಲಕರು, ಮಾಲೀಕರು ಪೊಲೀಸ್ ಠಾಣೆಗೆ ದೂರುಗಳನ್ನೂ ನೀಡಿದ್ದಾರೆ. ಆದರೆ ಪೊಲೀಸರ ನಿರ್ಲಕ್ಷ್ಯನ ದರೋಡೆಕೋರರಿಗೆ ಮೃಷ್ಟಾನ್ನವಾದಂತಾಗಿದೆ.

ನಿತ್ಯ ನಡೆಯುತ್ತಿರುವ ದರೋಡೆಯಿಂದಾಗಿ ವ್ಯವಹಾರ ಮಾಡುವುದೇ ದುಸ್ತರವಾಗಿದೆ ಎಂಬ ಗೋಳು ಕೆಲ ಟ್ರಾನ್ಸ್​ಪೋರ್ಟ್ ಮಾಲೀಕರದ್ದು. ಸಾವಿರಾರು ರೂ. ಮೌಲ್ಯದ ಬ್ಯಾಟರಿ, ತಾಡಪತ್ರಿ, ಹಗ್ಗ, ಸ್ಟೆಪ್ನಿಗಳನ್ನು ಲೂಟಿ ಮಾಡುತ್ತಿರುವುದರಿಂದ 2-3 ದಿನ ಲಾರಿಗಳು ಮುಂದಕ್ಕೆ ಸಾಗುವುದೇ ಇಲ್ಲ. ಲಾರಿಗಳಲ್ಲಿನ ಮೌಲ್ಯಯುತ ವಸ್ತುಗಳ ಲೂಟಿಯ ನಷ್ಟದ ಜತೆಗೆ ಸರಕು ಸಾಗಣೆಯ ನಷ್ಟವನ್ನೂ ಭರಿಸಬೇಕಾಗಿದೆ ಎಂಬ ಅಳಲು ಅವರದ್ದು.

ರಸ್ತೆ ಬದಿ ನಿಂತಿದ್ದ ಲಾರಿಗಳ ಬ್ಯಾಟರಿ ಕದ್ದಿರುವ ಹಲವಾರು ದೂರುಗಳು ದಾಖಲಾಗಿವೆ. ಆದರೆ ಸಂಚರಿಸುತ್ತಿದ್ದ ಲಾರಿ ತಡೆದು ದರೋಡೆ ಮಾಡಿದ ಯಾವುದೇ ಪ್ರಕರಣ ದಾಖಲಾಗಿಲ್ಲ. ರಾತ್ರಿಯಿಡಿ ಹೈವೆ ಪೆಟ್ರೋಲಿಂಗ್ ವಾಹನ ಗಸ್ತಿನಲ್ಲಿರುತ್ತದೆ. | ಮಾರುತಿ ಗುಳ್ಳಾರಿ, ಇನ್ಸ್​ಪೆಕ್ಟರ್, ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net