

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ಹೆದ್ದಾರಿಯಿಂದ ಕೊಳತೂರು ಗ್ರಾಮಕ್ಕೆ ಪ್ರವೇಶ ಮಾಡಲು ಸಮಸ್ಯೆಯಾಗಿದೆ ಎಂಬ ಗ್ರಾಮಸ್ಥರ ದೂರಿನ ಮೇರೆಗೆ ಸಂಸದ ಡಾ.ಕೆ.ಸುಧಾಕರ್ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಅಭಿವೃದ್ಧಿ ದೃಷ್ಟಿಯಿಂದ ಕೇಂದ್ರ ಸರ್ಕಾರ ರಸ್ತೆ ನಿರ್ಮಾಣ ಮಾಡುತ್ತಿದ್ದು, ಜನರಿಗೆ ಅನುಕೂಲವಾಗುತ್ತದೆ. 17.5 ಸಾವಿರ ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ಈ ಹೆದ್ದಾರಿ ಚೆನ್ನೈಗೆೆ ಸಂಪರ್ಕ ಕಲ್ಪಿಸಲಿದ್ದು, ಕೊಳತೂರು ಜಂಕ್ಷನ್ ಸಮೀಪ ಬಟರ್ ಪ್ಲೈ ಮೇಲ್ ಸೇತುವೆ ನಿರ್ಮಾಣ ಮಾಡಲಾಗಿದೆ. ಆದರೆ, ಹೊಸಕೋಟೆಯಿಂದ ಕೊಳತೂರಿಗೆ ಸಂಪರ್ಕ ರಸ್ತೆಯನ್ನು ಬಂದ್ ಮಾಡಿ ಹಲಸಳ್ಳಿ ಗೇಟ್ ಸಮೀಪ ಯೂಟರ್ನ್ ಪಡೆದುಕೊಂಡು
ಬಂದು ಕೊಳತೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಯೋಜನೆ ಸಿದ್ಧಪಡಿಸಿರುವುದರಿಂದ ಕೊಳತೂರು ಸೇರಿ
ಸುಮಾರು 30 ಗ್ರಾಮಗಳ ಗ್ರಾಮಸ್ಥರ ವಿರೋಧವಿದೆ ಎಂದು ಸಂಸದರು ತಿಳಿಸಿದರು.
ಸ್ಥಳ ಪರಿಶೀಲನೆ ಮಾಡಿದ್ದು, ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ, ಮಾಹಿತಿ ಕೇಳಿದ್ದೇನೆ. ಯೋಜನೆಯ ಬದಲಾವಣೆಗೆ ಹೆಚ್ಚಿನ ಹಣ ಖರ್ಚಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಮುಂದಿನ ಶುಕ್ರವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯ ವ್ಯವಸ್ಥಾಪಕರೊಂದಿಗೆ ಸಭೆ ನಡೆಸಿ,
ಗ್ರಾಮಸ್ಥರಿಗೆ ಅನುಕೂಲವಾಗುವಂತೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಮಾತನಾಡಿ, ರೈತರ ಭೂಮಿ ಪಡೆದ ಹೆದ್ದಾರಿ ಪ್ರಾಧಿಕಾರದವರು ರೈತರಿಗೆ ಅನುಕೂಲವಾಗುವಂತೆ ರಸ್ತೆ ನಿರ್ಮಾಣ ಮಾಡಬೇಕಿದೆ. ಜನರ ಬೇಡಿಕೆಗೆ ಅನುಕೂಲವಾಗುವಂತೆ ಪ್ರಾಧಿಕಾರ ಸ್ಪಂದಿಸಬೇಕು ಎಂದರು. ಮುಖಂಡರಾದ ಲಕ್ಷ್ಮಣ ಮೂರ್ತಿ, ರಮೇಶ್, ಎಮ್.ಬಸವರಾಜು, ಮುನಿರಾಜು, ಕೆ.ಎಚ್.ಸುರೇಶ್, ರವಿ, ಸೋಲೂರು ಮುನಿಯಪ್ಪ, ಮುನೇಗೌಡ, ಅಶ್ವತ್ಥ, ಬೈರೇಗೌಡ, ಭಾಸ್ಕರ್, ಪಟೇಲ್ ಶ್ರೀನಿವಾಸ್, ಕು.ಶ್ರೀನಿವಾಸ್, ಸುಬ್ರಾಯಪ್ಪ, ಪ್ರವೀಣ್, ಸುನೀಲ್ ಇದ್ದರು.