

ಜಗಳೂರು: ಜನ್ಮ ನೀಡಿದ ತಾಯಿ ಮತ್ತು ನಮ್ಮೆಲ್ಲರ ಭಾರ ಹೊತ್ತಿರುವ ಭೂಮಿ ಇಬ್ಬರ ಋಣ ತೀರಿಸಲು ಸಾಧ್ಯವಿಲ್ಲ ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಹೇಳಿದರು.
ಇಲ್ಲಿನ ತಾಲೂಕು ಪಂಚಾಯಿತಿ ಆವರಣದಲ್ಲಿ ಸೋಮವಾರ ಪಟ್ಟಣ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಆಯೋಜಿಸಿದ್ದ ನನ್ನ ಮಣ್ಣು, ನನ್ನ ದೇಶ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶಕ್ಕಾಗಿ ಪ್ರಾಣವನ್ನೇ ಅರ್ಪಿಸಿದ ವೀರ ಯೋಧ ಹಾಗೂ ಮಹಿಳೆಯರನ್ನು ಗೌರವಿಸುವ ಹಿನ್ನೆಲೆ ನನ್ನ ಮಣ್ಣು, ನನ್ನ ದೇಶ ಅಭಿಯಾನ ಪ್ರಾರಂಭವಾಗಿದೆ. ಇದು ದೇಶಾದ್ಯಂತ ನಡೆಯುತ್ತಿರುವುದು ವಿಶೇಷ ಎಂದರು.
ದೇಶದ ಭದ್ರತೆ ಕಾಪಾಡಿ, ಹೋರಾಟದ ನಡುವೆ ಪ್ರಾಣ ತ್ಯಾಗ ಮಾಡಿದ ಸೈನಿಕರಿಗೆ ಪ್ರತಿಯೊಬ್ಬ ಭಾರತೀಯ ಗೌರವಿಸಲೇಬೇಕು. ಯೋಧರ ಪ್ರಾಣ ತ್ಯಾಗ, ಬಲಿದಾನದಿಂದ ನಾವಿಂದು ನೆಮ್ಮದಿಯಿಂದ ದ್ದೇವೆ ಎಂಬುದರಲ್ಲಿ ಅನುಮಾನವೇ ಇಲ್ಲ ಎಂದರು.
ಆ.15ರಂದು ಬಯಲು ರಂಗಮಂದಿರಲ್ಲಿ ಹಮ್ಮಿಕೊಂಡಿರುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಬೇಕು. ಅದಕ್ಕೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು. ಯಾವೊಬ್ಬ ಅಧಿಕಾರಿಗಳು ತಪ್ಪಿಸಿಕೊಳ್ಳುವಂತಿಲ್ಲ. ನಿರ್ಲಕ್ಷೃ ಮಾಡಿದರೆ ಸುಮ್ಮನಿರುವುದಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಗ್ರೇಡ್-2 ತಹಸೀಲ್ದಾರ್ ಮಂಜಾನಂದ, ತಾ.ಪಂ ಇಒ ಚಂದ್ರಶೇಖರ್, ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ತಾಲೂಕು ಆರೋಗ್ಯಾಧಿಕಾರಿ ಡಾ. ನಾಗರಾಜ್, ಜಿಪಂ ಎಇಇ ಶಿವಮೂರ್ತಿ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಎಇ ಸಾದಿಕ್‌ವುಲ್ಲಾ, ನಿವೃತ್ತ ಸಮಾಜ ಕಲ್ಯಾಣಾಧಿಕಾರಿ ಬಿ. ಮಹೇಶ್ವರಪ್ಪ, ಪಪಂ ಮಾಜಿ ಅಧ್ಯಕ್ಷ ಮಂಜುನಾಥ್, ಆರೋಗ್ಯ ನಿರೀಕ್ಷಕ ಕಿಫಾಯಿತ್ ಸೇರಿದಂತೆ ಮತ್ತಿತರರಿದ್ದರು.