

ಮೈಸೂರು : ಹೆಣ್ಣುಭ್ರೂಣ ಹತ್ಯೆಯಿಂದ ಮಹಿಳಾ ಮತ್ತು ಪುರುಷರ ನಡುವಿನ ಅನುಪಾತದ ಅಂತರ ಗಣನೀಯವಾಗಿ ಹೆಚ್ಚಾಗುತ್ತಿದೆ ಎಂದು ಗರ್ಭಪೂರ್ವ ಮತ್ತು ಪ್ರಸನಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆ(ಪಿಸಿಪಿಎನ್‌ಡಿಟಿ) ಪ್ರಾಧಿಕಾರದ ಉಪನಿರ್ದೇಶಕ ಡಾ. ವಿವೇಕ್ ದೊರೈ ಕಳವಳ ವ್ಯಕ್ತಪಡಿಸಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ಪಿಸಿಪಿಎನ್‌ಡಿಟಿ ಕಾಯ್ದೆ ಕುರಿತ ವಿಭಾಗೀಯ ಕಾರ್ಯಾಗಾರದಲ್ಲಿ ಮಾತನಾಡಿದರು.
ಹೆಣ್ಣುಭ್ರೂಣ ಹತ್ಯೆ ಪ್ರಮಾಣವನ್ನು ಶೂನ್ಯಗೊಳಿಸಬೇಕಾಗಿದೆ. ಇದರೊಂದಿಗೆ ಸಾಮಾನ್ಯ ಸ್ಥಿತಿ ನಿರ್ಮಾಣ ಮಾಡಬೇಕಿದೆ. ಅದಕ್ಕಾಗಿ ಈ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿ ತರಬೇಕಾಗಿರುವುದು ಅವಶ್ಯವಾಗಿದೆ ಎಂದರು.
ಹೆಣ್ಣುಭ್ರೂಣ ಹತ್ಯೆಯಿಂದ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಮಹಾಭಾರತದಲ್ಲಿ ದ್ರೌಪದಿ ಸ್ಥಿತಿ ಆಧುನಿಕ ಕಾಲದಲ್ಲೂ ಪುನರಾವರ್ತನೆಯಾಗುವ ಲಕ್ಷಣಗಳು ರಾಜ್ಯದಲ್ಲೇ ಗೋಚರವಾಗುತ್ತಿದೆ. ಮಂಡ್ಯದಲ್ಲಿ ನಡೆದ ವಧು-ವರರ ಸಮಾವೇಶದಲ್ಲಿ 11,700 ಪುರುಷರು ಹಾಜರಾಗಿದ್ದರೆ, ಕೇವಲ 200 ಹೆಣ್ಣು ಮಕ್ಕಳು ಬಂದಿದ್ದರು. ಇದು ವಧುಗಳ ಕೊರತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಗಂಡು-ಹೆಣ್ಣಿನ ನಡುವಿನ ಅನುಪಾತ ಅಂತರ ಹೆಚ್ಚುತ್ತಿದೆ. ಇದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಭ್ರೂಣಲಿಂಗ ಪತ್ತೆಗೆ ಸಂಪೂರ್ಣವಾಗಿ ಕಡಿವಾಣ ಹಾಕಬೇಕಿದೆ ಎಂದರು.
ಲಿಂಗ ಅನುಪಾತ ಅಂತರ ಗಂಭೀರ ಸಮಸ್ಯೆ. ಇದನ್ನು ತಡೆಯಲು ಪಿಸಿಪಿಎನ್‌ಡಿಟಿ ಕಾಯ್ದೆ ಅನುಷ್ಠಾನಕ್ಕೆ ತರಲಾಗಿದೆ. ಆದರೆ ವಿಧಾನಸಭೆಯಲ್ಲಿ 224 ಶಾಸಕರಿದ್ದಾರೆ. ಈ ಕಾಯ್ದೆಯನ್ನು ಪರಿಣಾಮಕಾರಿ ಜಾರಿ ಮಾಡಲು ರಾಜ್ಯದಲ್ಲಿ ಬರೀ 62 ಅಧಿಕಾರಿಗಳು ಮಾತ್ರ ಇದ್ದಾರೆ. 31 ಜಿಲ್ಲಾ ಆರೋಗ್ಯಾಧಿಕಾರಿಗಳು(ಡಿಎಚ್), 31 ಎಫ್‌ಡಬ್ಲುೃಒಗಳು ಕಾಯ್ದೆ ಜಾರಿಗೊಳಿಸುವುದು ಕಷ್ಟಕರವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಗರ್ಭಪೂರ್ವ, ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಮಾಡುವುದು ಅಪರಾಧ. ಕಾಯ್ದೆ ಉಲ್ಲಂಘಿಸುವವರಿಗೆ ಶಿಕ್ಷೆ ಹಾಗೂ ದಂಡ ವಿಧಿಸಬೇಕು. ಸಾರ್ವಜನಿಕರಿಗೂ ಈ ಕುರಿತು ಅರಿವು ನೀಡಬೇಕು ಎಂದು ಹಾಜರಿದ್ದ ಡಿಎಚ್‌ಒಗಳಿಗೆ ಸೂಚಿಸಿದರು.
ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಚ್. ಪ್ರಸಾದ್ ಮಾತನಾಡಿ, ಸ್ತ್ರೀ-ಪುರುಷರ ಲಿಂಗಾನುಪಾತ ಅಸಮತೋಲನಕ್ಕೆ ಸಾಮಾಜಿಕ ಮತ್ತು ಆರೋಗ್ಯ ಸಮಸ್ಯೆಗಳು ಕಾರಣವಾಗಿವೆ ಎಂದರು.
ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆ ಪ್ರಕಾರ ಮೈಸೂರು ಜಿಲ್ಲೆಯ ಪ್ರತಿ 1,000 ಸಂಖ್ಯೆಯ ಪುರುಷರಿಗೆ 1,001 ಮಹಿಳೆಯರಿದ್ದಾರೆ. ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಮಂಡ್ಯ, ಕೊಡಗು ಜಿಲ್ಲೆಯಲ್ಲೂ ಪುರುಷರಿಗಿಂತ ಮಹಿಳೆಯರು ಹೆಚ್ಚಿದ್ದಾರೆ. ಆದರೆ ಬೇರೆ ಜಿಲ್ಲೆಗಳಲ್ಲಿ ಮಹಿಳೆಯರ ಸಂಖ್ಯೆ ಬಹಳ ಕಡಿಮೆಯಾಗುತ್ತಿದೆ ಎಂದರು.
ಲಿಂಗಾನುಪಾತದಲ್ಲಿ ವ್ಯತ್ಯಾಸವನ್ನು ಕಡಿಮೆ ಮಾಡಬೇಕಿದೆ. ಅದಕ್ಕಾಗಿ ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ಪ್ರಕರಣವನ್ನು ಕಡಿಮೆ ಮಾಡಬೇಕು. ಅದಕ್ಕಾಗಿ ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ಅನಿರೀಕ್ಷಿತವಾಗಿ ದಾಳಿ ಮಾಡಿ ಪರಿಶೀಲನೆ ಮಾಡಬೇಕು. ಈ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡಬೇಕಿದೆ ಎಂದರು.
ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಎಂ.ಎಸ್. ಜಯಂತ್ ಸೇರಿದಂತೆ ಮೈಸೂರು ವಿಭಾಗದ 8 ಜಿಲ್ಲೆಗಳ ಡಿಎಚ್‌ಒಗಳು ಹಾಜರಿದ್ದರು.