ಹೆಣ್ಣು ಮಕ್ಕಳು ಭವಿಷ್ಯವನ್ನು ರೂಪಿಕೊಳ್ಳಬೇಕು : ಕೆ.ಎಂ.ವಸುಂಧರ

ಹೆಣ್ಣು ಮಕ್ಕಳು ಭವಿಷ್ಯವನ್ನು ರೂಪಿಕೊಳ್ಳಬೇಕು : ಕೆ.ಎಂ.ವಸುಂಧರ
Published on

ಹಾಸನ: ಇತಿಹಾಸದ ಹೆಮ್ಮೆಯನ್ನು ಇಟ್ಟುಕೊಂಡು ಹೆಣ್ಣು ಮಕ್ಕಳು ತಮ್ಮ ಭವಿಷ್ಯವನ್ನು ರೂಪಿಕೊಳ್ಳಬೇಕು ಎಂದು ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ನಿಗಮ ನಿಯಮಿತಿಯ ವ್ಯವಸ್ಥಾಪಕ ನಿರ್ದೇಶಕಿ ಕೆ.ಎಂ.ವಸುಂಧರಾ ಹೇಳಿದರು.
ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ (ಎಂ.ಜಿ.ರಸ್ತೆ) ಮಹಿಳಾ ವೇದಿಕೆ, ಐಕ್ಯೂಎಸಿ ಮತ್ತು ಸಾಂಸ್ಕೃತ ವೇದಿಕೆಯ ಸಂಯುಕ್ತಾಶ್ರಯದಲ್ಲಿ ಗುರುವಾರ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು,ಸಮಾಜದಲ್ಲಿ ಒಂದು ಕಡೆ ಹೆಣ್ಣಿಗೆ ಅಧಿಕಾರ, ಸವಲತ್ತುಗಳನ್ನು ನೀಡುತ್ತಿದ್ದರೆ, ಮತ್ತೊಂದು ಕಡೆ ಹೆಣ್ಣಿನ ಮೇಲೆ ಶೋಷಣೆಗಳು ನಡೆಯುತ್ತಿವೆ, ಹೀಗಾಗಿ ಸಮಾಜದಲ್ಲಿ ನಮ್ಮ ಜವಾಬ್ದಾರಿ ಮತ್ತು ಕರ್ತವ್ಯಗಳೇನು ಮತ್ತು ಯಾವುದಕ್ಕಾಗಿ ನಾವು ಹೋರಾಟಗಳನ್ನು ನಡೆಸುತ್ತಿದ್ದೇವೆ ಎಂಬುದನ್ನು ಅರಿತು ಎಚ್ಚೇತ್ತುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಚುನಾವಣಾ ಪ್ರಣಾಳಿಕೆಗಳಲ್ಲಿ ಮತ್ತು ಸರ್ಕಾರದ ಬಜೆಟ್‌ಗಳಲ್ಲಿ ಹೆಣ್ಣು ಮಕ್ಕಳಿಗಾಗಿ ಯೋಜನೆಗಳನ್ನು ರೂಪಿಸುತ್ತಿದ್ದಾರೆ, ಹೀಗಾಗಿ ಹೆಣ್ಣು ಮಕ್ಕಳು ಮತದಾನದ ಸಂದರ್ಭದಲ್ಲಿ ಆಲೋಚಿಸಿ ಸೂಕ್ತವಾದ ವ್ಯಕ್ತಿಗಳನ್ನು ಆಯ್ಕೆ ಮಾಡುವ ಮೂಲಕ ಮತದಾನದ ಹಕ್ಕನ್ನು ಚಲಾಯಿಸಬೇಕು ಎಂದರು.
ಹೆಣ್ಣುಮಕ್ಕಳು ಯಾವುದೇ ಕಾರಣಕ್ಕು ಆರ್ಥಿಕ ಅವಕಾಶಗಳು ಮತ್ತು ಸ್ವಾತಂತ್ರ್ಯದಿಂದ ವಂಚಿತರಾಗಬಾರದು. ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದ ಅವರು, ಮಹಿಳೆಯುರು ಮನೆಯಿಂದಲೆ ಗಂಡುಮಕ್ಕಳಿಗೆ ಸಂಸ್ಕಾರ, ವಿವೇಕ ಮತ್ತು ವಿಚಾರವಂತರನ್ನಾಗಿ ಮಾಡುವುದರಿಂದ ಅನಾಚಾರಗಳನ್ನು ತಡೆಗಟ್ಟಬಹುದಾಗಿದೆ ಎಂದು ಹೇಳಿದರು.
ನಿವೃತ್ತ ಶಿಕ್ಷಕಿ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ಜಂಟಿ ಕಾರ್ಯದರ್ಶಿ ಎಚ್.ಜಿ.ಕಾಂಚನಮಾಲಾ ಮಾತನಾಡಿ, ಮನಸಿನೊಳಗಿನ ಅಜ್ಞಾನ, ಮಾಲಿನ್ಯ ತೊಲಗಿದರೆ ಮಾತ್ರ ಸಮಾಜ ಹಸನಾಗಲು ಸಾಧ್ಯವಾಗುತ್ತದೆ. ಹೆಣ್ಣು ಸ್ವಾಭಿಮಾನದಿಂದ ಬದುಕಬೇಕು ಹಾಗೂ ಸಂಸ್ಕಾರದಿಂದ ಇರಬೇಕು ಎಂದರು.
ಜೀವನದಲ್ಲಿ ಎಷ್ಟೇ ಕಷ್ಟಗಳು, ಸಮಸ್ಯೆಗಳು ಹಾಗೂ ಸವಾಲುಗಳು ಎದುರಾದರೂ ಅದಕ್ಕೆ ಎದೆಗುಂದದೆ, ಪಲಾಯನ ಮಾಡದೆ ಅದನ್ನು ಮೆಟ್ಟಿನಿಲ್ಲಬೇಕು. ದುರಾಸೆಯನ್ನು ಬಿಟ್ಟು ಸರಳ ಜೀವನವನ್ನು ನಡೆಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಜಿ.ಕವಿತಾ ಮಾತನಾಡಿ, ಪೋಷಕರು ಗಂಡು, ಹೆಣ್ಣು ಅಂತ ತಾರತಮ್ಯ ಮಾಡದೆ ಮಕ್ಕಳು ಅಂತ ನೋಡಬೇಕು. ಮನೆಯಲ್ಲೆ ಮಕ್ಕಳಿಗೆ ಸಂಸ್ಕಾರವನ್ನು ಪೋಷಕರು ಕಲಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಹಿಳಾ ವೇದಿಕೆ ಸಂಚಾಲಕಿ ಡಾ.ಶ್ರೀದೇವಿ, ಸಾಂಸ್ಕೃತಿಕ ವೇದಿಕೆ ಸಂಚಾಲಕ ಎಚ್.ಎನ್.ಹರೀಶ್, ಐಕ್ಯುಎಸಿ ಸಂಚಾಲಕ ಎಸ್.ಯೋಗೇಶ್, ಪ್ರಾಧ್ಯಾಪಕರಾದ ಡಾ.ಟಿ.ಜಿ.ಮೀನಾಕ್ಷಿ, ಡಾ.ಬಿ.ಪೂರ್ಣಿಮ, ಡಾ.ಕೆ.ವಿ.ರೂಪ, ಸಿ.ಎಸ್.ಮಂಜುಳ, ಆರ್.ಶಿಲ್ಪಶ್ರೀ, ಪದ್ಮಾವತಿ, ಹಾಗೂ ಕಾಲೇಜಿನ ಎಲ್ಲಾ ಅಧ್ಯಾಪಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net