ಹೆಣ್ಣು ಮಕ್ಕಳಿಗೆ ಗೌರವ ತೋರುವುದು ಅಗತ್ಯ

08-klr-006
Published on

ಕೋಲಾರ: ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಕರ್ತವ್ಯ ನಿರ್ವಹಿಸುತ್ತಿದ್ದು, ಎಲ್ಲರೂ ಹೆಣ್ಣುಮಕ್ಕಳನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಂಸದ ಎಸ್​.ಮುನಿಸ್ವಾಮಿ ಹೇಳಿದರು.

ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. 1975ರಲ್ಲಿ ಮೊದಲಿಗೆ ಈ ಮಹಿಳಾ ದಿನ ಆಚರಿಸಲಾಯಿತು. ಅಂದಿನಿಂದಲೂ ಮಾ.8ರಂದು ವಿಶ್ವಾದ್ಯಂತ ಮಹಿಳಾ ದಿನ ಆಚರಣೆ ಮಾಡಲಾಗುತ್ತಿದೆ. ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ರಾಜಕೀಯ ಸೇರಿ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಮಾಡಿರುವ ಸಾಧನೆ ಸ್ಮರಿಸುವ ದಿನ ಇದಾಗಿದೆ ಎಂದರು.

ದೇಶದಲ್ಲಿ ಮಹಿಳೆಯರ ಸಾಧನೆಗಳು ನಮಗೆಲ್ಲ ಸ್ಫೂರ್ತಿ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೆಣ್ಣು ಮಕ್ಕಳ ಶಿಕ್ಷಣವನ್ನು ಉತ್ತೇಜಿಸಲು ಭೇಟಿ ಬಚಾವೂ ಭೇಟಿ ಪಡಾವೂ ಎಂಬ ಕಾರ್ಯಕ್ರಮ ಜಾರಿಗೆ ತಂದಿದ್ದಾರೆ ಎಂದರು. ಕೋವಿಡ್​ ಸಮಯದಲ್ಲಿ ಹೆಣ್ಣು ಮಕ್ಕಳು ಕಷ್ಟಪಟ್ಟು ಕೆಲಸ ನಿರ್ವಹಿಸಿ ಸಂಸಾರ ನಿಭಾಯಿಸಿರುವುದು ಹೆಮ್ಮೆಯ ಸಂಗತಿ. ಕೇಂದ್ರ ಸರ್ಕಾರ ದೇಶದಲ್ಲಿ 80 ಕೋಟಿ ಜನರಿಗೆ ಉಚಿತವಾಗಿ ಪಡಿತರ ನೀಡುತ್ತಿದೆ ಎಂದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಮತ್ತು ಉತ್ತಮ ಕೆಲಸ ನಿರ್ವಹಿಸಿದ್ದ ಅಂಗನವಾಡಿ ಕಾರ್ಯಕರ್ತೆರನ್ನು ಸನ್ಮಾನಿಸಲಾಯಿತು. ಜಿಪಂ ಸಿಇಒ ಉಕೇಶ್​ ಕುಮಾರ್​, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಎಂ.ಜಿ.ಪಾಲಿ, ಜಿಪಂ ಯೋಜನಾ ನಿರ್ದೇಶಕಿ ಶ್ರುತಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಮೇಶ್​ ಇತರರಿದ್ದರು.

ನಾಲ್ಕೂವರೆ ಗಂಟೆ ತಡ!: ಸಂಸದ ಎಸ್​.ಮುನಿಸ್ವಾಮಿ ಹೆಸರು ಆಹ್ವಾನ ಪತ್ರಿಕೆಯಲ್ಲಿ ಇರಲಿಲ್ಲ. ಅವರು ಉದ್ಘಾಟನೆ ಮಾಡುವ ಕಾರ್ಯಕ್ರಮವೂ ಇದಾಗಿರಲಿಲ್ಲ. ಆದರೆ ಸಂಘಟಕರ ಮೇಲೆ ಅದ್ಯಾರು ಒತ್ತಡ ಹೇರಿದರೋ ತಿಳಿಯದು. ಸಂಸದರು ಇನ್ನೇನು ಈಗ ಬಂದು ಬಿಟ್ಟರು, ಆಗ ಬಂದರು ಎಂದು ಹೇಳುತ್ತಾ ಮಹಿಳೆ ಮತ್ತು ಮಕ್ಕಳಿದ್ದ ಕಾರ್ಯಕ್ರಮವನ್ನು ಬರೋಬ್ಬರಿ ನಾಲ್ಕೂವರೆ ಗಂಟೆ ತಡವಾಗಿ ಚಾಲನೆ ನೀಡಲಾಯಿತು. ಬೆಳಗ್ಗೆ 10ಕ್ಕೆ ಜಿಲ್ಲಾದಿಕಾರಿ ವೆಂಕಟ್​ ರಾಜಾ ಉದ್ಘಾಟಿಸಬೇಕಿದ್ದ ಕಾರ್ಯಕ್ರಮ ಸಂಸದ ಮುನಿಸ್ವಾಮಿ ಬರುವಿಕೆಯಿಂದ ತಡವಾಗಿ ಕಡೆಗೆ 2-.30ಕ್ಕೆ ಉದ್ಘಾಟನೆ ಭಾಗ್ಯ ಕಂಡಿತು. ಜಿಲ್ಲೆಯೆಲ್ಲೆಡೆಯಿಂದ ಬಂದಿದ್ದ ಮಹಿಳೆ ಮತ್ತು ಮಕ್ಕಳು ತಿಂಡಿ, ಕಾಫಿ, ನೀರಿಲ್ಲದೆ ಕಾದು ಬಸವಳಿದಿದ್ದರು. ಸಮಾರಂಭ ಮುಗಿದ ನಂತರ ಊಟದ ವ್ಯವಸ್ಥೆ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net