ಹೆಣ್ಣು ಮಕ್ಕಳ ಅಭಿವೃದ್ಧಿಗಾಗಿ ಜ್ಞಾನವಿಕಾಸ ಕೇಂದ್ರ

HUN-NOV-26-1(DHARMASTALA YOJNANE PROGRAMME)
Published on

ಹುಣಸೂರು: ದೇಶದ ಪ್ರತಿಯೊಬ್ಬ ಪ್ರಜೆ ನಮ್ಮ ನೆಲದ ಪರಂಪರೆ, ಸಂಸ್ಕೃತಿಯನ್ನು ಅರಿತು ಜೀವನ ನಡೆಸಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೈಸೂರು ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕ ಬಿ.ಜಯರಾಂ ನೆಲ್ಲಿತ್ತಾಯ ಅಭಿಪ್ರಾಯಪಟ್ಟರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನವಿಕಾಸ ಕೇಂದ್ರದಿಂದ ನಗರದ ಗುರುಬೂದಿ ಮಂಗಳ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಮಹಿಳಾ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು. ಭಾರತೀಯ ಪರಂಪರೆಯಲ್ಲಿ ಹೆಣ್ಣಿಗೆ ದೇವರ ಸ್ಥಾನ ನೀಡಲಾಗಿದೆ. ಹೆಣ್ಣಮಗು ಹುಟ್ಟಿದಲ್ಲಿ ಆಕೆಯನ್ನು ತಾಯಿ ಬಂದಳು ಎನ್ನುತ್ತಾರೆ. ಕುಟುಂಬವೊಂದರ ಹೆಣ್ಣು ಮಗು ಸಂಸ್ಕಾರಯುತವಾಗಿ ಬೆಳೆದಲ್ಲಿ ಆಕೆ ಇಡೀ ಕುಟುಂಬವನ್ನೇ ಸಂಸ್ಕಾರಯುತವಾಗಿ ಮಾಡಬಲ್ಲಳು. ಹೆಣ್ಣಿಲ್ಲದ ಮನೆ ಸ್ಮಶಾನದಂತೆ ಎಂದು ಹಿರಿಯರು ತಿಳಿಸಿದ್ದಾರೆ. ಪೂಜ್ಯ ಹೇಮಾವತಿ ಅಮ್ಮನವರ ಆಶಯದಂತೆ ಯೋಜನೆಯ ವತಿಯಿಂದ ಹೆಣ್ಣು ಮಕ್ಕಳ ಅಭಿವೃದ್ಧಿಗಾಗಿ ಜ್ಞಾನವಿಕಾಸ ಕೇಂದ್ರ ಸ್ಥಾಪಿಸಲಾಗಿದೆ ಎಂದರು.

ಜ್ಞಾನವಿಕಾಸ ಕೇಂದ್ರ ಸ್ಥಾಪನೆ ಮೂಲಕ ಗ್ರಾಮೀಣ ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸುವ, ಜ್ಞಾನದೀಪ ಬೆಳಗುವ, ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸುವ, ಮಹಿಳಾ ಸಬಲೀಕರಣದಂತಹ ಕಾರ್ಯಗಳನ್ನು ನಡೆಸಲಾಗುತ್ತಿದೆ. ಇದರ ಫಲವಾಗಿ ಪ್ರಸ್ತುತ ರಾಜ್ಯದಲ್ಲಿ 8 ಲಕ್ಷಕ್ಕೂ ಅಧಿಕ ಕುಟುಂಬಗಳು ಇಂದು ನವೋಲ್ಲಾಸದಿಂದ ಬೆಳಗುತ್ತಿವೆ. ಭಾರತವನ್ನು ಹೊರತುಪಡಿಸಿ ವಿಶ್ವದ ಯಾವುದೆ ದೇಶವು ತಮ್ಮ ದೇಶವನ್ನು ತಾಯಿ ಎಂದು ಪರಿಗಣಿಸಿಲ್ಲ. ಯಾವುದೆ ದೇಶವನ್ನು ಹೆಣ್ಣನ್ನು ಮಾತೃ ಸಮಾನಳೆಂದು ಪೂಜಿಸುವುದಿಲ್ಲ. ಅದೇ ಭಾರತೀಯ ಸಂಸ್ಕೃತಿಯಾಗಿದೆ ಎಂದರು.

ನಗರಸಭೆ ಪೌರಾಯುಕ್ತೆ ಕೆ.ಮಾನಸಾ ಮಾತನಾಡಿ, ಧರ್ಮಸ್ಥಳ ಯೋಜನೆಯು ಹಲವು ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಮಹಿಳೆಯರ ಅಭಿವೃದ್ಧಿಗೆ ಪಣತೊಟ್ಟಿದೆ ಎಂದು ಹೇಳಿದರು.

ಮಾದಳ್ಳಿ ಉಕ್ಕಿನಕಂತೆ ಮಠದ ಶ್ರೀ ಸಾಂಬಸದಾಶಿವ ಸ್ವಾಮೀಜಿ ಆಶೀರ್ವಚನ ನೀಡಿದರು. ಮೈಸೂರು ಮತ್ತು ಮಂಡ್ಯದ ಸ್ಪಂದನ ಆಸ್ಪತ್ರೆಯ ವೈದ್ಯರಾದ ಡಾ.ಆದಿತ್ಯಗೌಡ, ಡಾ.ಅವಿನಾಶ್ ಅವರು, ಸ್ತನ ಮತ್ತು ಗರ್ಭಕೋಶ ಕ್ಯಾನ್ಸರ್ ಕುರಿತು ಮಾಹಿತಿ ಒದಗಿಸಿದರು. ಯೋಜನೆಯ ಜಿಲ್ಲಾ ನಿರ್ದೇಶಕ ಎಚ್.ಎಲ್.ಮುರಳೀಧರ್, ಹುಣಸೂರು ಘಟಕ 1ರ ಯೋಜನಾಧಿಕಾರಿ ನಾರಾಯಣಶೆಟ್ಟಿ, ಜ್ಞಾನ ವಿಕಾಸಕೇಂದ್ರದ ಸಮನ್ವಯಾಧಿಕಾರಿ ರೂಪಾ, ಮೇಲ್ವಿಚಾರಕರು, ಸಂಯೋಜಕಿಯರು, ಸಂಘಗಳ ಸದಸ್ಯರು ಹಾಜರಿದ್ದರು. ರಂಗೋಲಿ ಸ್ಪರ್ಧೆ, ಪುಷ್ಪಗುಚ್ಛ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net