ಹೆಣ್ಣು ಭ್ರೂಣ ಹತ್ಯೆ ಶೋಚನೀಯ

11blrp6
ಬೇಲೂರಿನಲ್ಲಿ ಶಿಶು ಅಭಿವೃದ್ಧಿ ಇಲಾಖೆ, ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ, ತಾಲೂಕು ಶಿಲ್ಪಕಲಾ ಮಹಿಳಾ ಒಕ್ಕೂಟ ಮತ್ತು ತಾಲೂಕು ಅಂಗನವಾಡಿ ಕಾರ್ಯಕರ್ತರ ಮತ್ತು ನೌಕರ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಗಣ್ಯರನ್ನು ಸನ್ಮಾನಿಸಲಾಯಿತು.
Published on

ಬೇಲೂರು: ಹೆಣ್ಣಿಗೆ ಪೂಜ್ಯನೀಯ ಸ್ಥಾನ ನೀಡಿರುವ ಈ ದೇಶದಲ್ಲಿ ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿರುವುದು ನಿಜಕ್ಕೂ ಶೋಚನೀಯವಾಗಿದೆ ಎಂದು ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ವಿಷಾದಿಸಿದರು.

ಪಟ್ಟಣದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಶಿಶು ಅಭಿವೃದ್ಧಿ ಇಲಾಖೆ, ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ, ತಾಲೂಕು ಶಿಲ್ಪಕಲಾ ಮಹಿಳಾ ಒಕ್ಕೂಟ, ತಾಲೂಕು ಅಂಗನವಾಡಿ ಕಾರ್ಯಕರ್ತರ ಮತ್ತು ನೌಕರ ಸಂಘದ ಸಂಯುಕ್ತಾಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹೆಣ್ಣು ಭ್ರೂಣ ಹತ್ಯೆಯಿಂದ ಸಮಾಜದಲ್ಲಿ ಲಿಂಗಭೇದ ಉಂಟಾಗಿದೆ. ಇಂತಹ ಕೃತ್ಯದಲ್ಲಿ ಹೆಚ್ಚಾಗಿ ವಿದ್ಯಾವಂತರೇ ಭಾಗಿಯಾಗಿಯಾಗುತ್ತಿರುವುದು ವಿಷಾದನೀಯ. ಸರ್ಕಾರ ಎಷ್ಟೇ ಕಾನೂನು ಜಾರಿ ಮಾಡಿದರೂ ಭ್ರೂಣ ಹತ್ಯೆ ನಿಲ್ಲುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಮಹಿಳೆ ಎಲ್ಲ ಕ್ಷೇತ್ರದಲ್ಲೂ ಅದ್ವಿತೀಯ ಸಾಧನೆ ಮಾಡುತ್ತಿದ್ದಾರೆ. ಮಹಿಳೆಯರು ತಮ್ಮ ಆರೋಗ್ಯ ಬಗ್ಗೆ ಹೆಚ್ಚು ಕಾಳಜಿ ವಹಿಸಿಬೇಕಿದೆ ಎಂದು ಸಲಹೆ ನೀಡಿದರು.

ಕಸಾಪ ಮಾಜಿ ಗೌರವ ಕಾರ್ಯದರ್ಶಿ ಹೆಬ್ಬಾಳು ಹಾಲಪ್ಪ ಮಾತನಾಡಿ, ಭೂಮಿ, ನೀರು, ಪ್ರಕೃತಿ ಸೇರಿದಂತೆ ನಾನಾ ವಿಧದಲ್ಲಿ ಹೆಣ್ಣಿಗೆ ಪೂಜ್ಯನೀಯ ಸ್ಥಾನ ನೀಡುತ್ತಾ ಬಂದಿರುವ ಸಮಾಜದಲ್ಲಿ ಲೈಂಗಿಕ ಕಿರುಕುಳ, ಹೆಣ್ಣಿನ ಮೇಲೆ ದೌರ್ಜನ್ಯ, ದಬ್ಬಾಳಿಕೆ, ಅತ್ಯಾಚಾರ ನಿರಂತರವಾಗಿ ನಡೆಯುತ್ತಿದೆ. ಇತ್ತೀಚೆಗೆ ಕೆಲವರು ಮಹಿಳಾ ಸಮಾನತೆ ಬಗ್ಗೆ ಮಾತನಾಡುತ್ತಾರೆ. ಆದರೆ 12ನೇ ಶತಮಾನದಲ್ಲಿ ಬಸವಣ್ಣ ಮತ್ತು ಶಿವಶರಣರು ಹೆಣ್ಣಿಗೆ ಗೌರವ ನೀಡಿದ್ದರು. ಆದರೂ ಮಹಿಳೆಯರಿಗೆ ರಾಜಕೀಯ ಸಮಾನತೆ ಇನ್ನೂ ಮರಿಚೀಕೆಯಾಗಿದೆ. ಡಾ.ಅಂಬೇಡ್ಕರ್ ಬರೆದ ಸಂವಿಧಾನ ಯಥವತ್ತಾಗಿ ಜಾರಿಯಾದಾಗ ಮಾತ್ರ ಮಹಿಳಾ ದಿನಾಚರಣೆಗೆ ಅರ್ಥ ಬರುತ್ತದೆ ಎಂದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ದಿಲೀಪ್, ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷೆ ಭಾರತೀಗೌಡ, ಕಾರ್ಯದರ್ಶಿ ರತಿದೇವಿ, ತಾಪಂ ಮಾಜಿ ಅಧ್ಯಕ್ಷೆ ಕಮಲಚನ್ನಪ್ಪ, ಶಿಲ್ಪಕಲಾ ಮಹಿಳಾ ಒಕ್ಕೂಟದ ನಿರ್ದೇಶಕಿ ಅನುಸೂಯ, ಅಂಗನವಾಡಿ ಕಾರ್ಯಕರ್ತೆ ತುಳಸಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net