ಹೆಣ್ಣು ಒಂದು ಕುಲವನ್ನೇ ಉದ್ಧಾರ ಮಾಡುವವಳು

12 ckm 6
ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ನಡೆದ ಜಿಲ್ಲಾ ಕುರುಹಿನ ಶೆಟ್ಟಿ (ನೇಕಾರ) ಮಹಿಳಾ ಸಂಘದ ಎಂಟನೇ ವರ್ಷದ ವಾರ್ಷಿಕೋತ್ಸವದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಅವಧೂತ ವಿನಯ್ ಗುರೂಜಿ, ಸಿ.ಟಿ.ರವಿ, ಗಾಯತ್ರಿ ಶಾಂತೇಗೌಡ, ಪುಷ್ಪಾ ರಾಜೇಂದ್ರ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಹೆಣ್ಣು ಎಂದರೆ ಒಂದು ಕುಲವನ್ನು ಉದ್ಧಾರ ಮಾಡುವವಳು. ಹೆಣ್ಣುತನಕ್ಕೆ ಪಾವಿತ್ರö್ಯತೆ ಇದೆ. ಹೆಣ್ಣು ತನದ ಜವಾಬ್ದಾರಿಯನ್ನು ಅರಿತು ಬದುಕಿದ ಪ್ರತಿ ದಿನವೂ ನಿಜವಾದ ಮಹಿಳಾ ದಿನಾಚರಣೆ ಆಗುತ್ತದೆ ಎಂದು ಹರಿಹರಪುರ ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ತಿಳಿಸಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಜಿಲ್ಲಾ ಕುರುಹಿನ ಶೆಟ್ಟಿ (ನೇಕಾರ) ಮಹಿಳಾ ಸಂಘದ ಎಂಟನೇ ವರ್ಷದ ವಾರ್ಷಿಕೋತ್ಸವ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪ್ರವಚನ ನೀಡಿದ ಅವರು, ಜಗತ್ತಿನಲ್ಲಿ ಬಿಡುವಿಲ್ಲದ ಚಕ್ರವೊಂದಿದ್ದರೆ ಅದು ಕಾಲ ಚಕ್ರ. ಅದನ್ನು ಹೊರತು ಪಡಿಸಿದರೆ ಮನೆಗಳಲ್ಲಿರುವ ತಾಯಂದಿರು. ಒಬ್ಬ ಪುರುಷನ ಬೆಳವಣಿಗೆಗೆ ಮಹಿಳೆ ಐದು ರೀತಿ ಸಹಾಯ ಮಾಡುತ್ತಾಳೆ. ನಮಗೆ ಈ ಜಗತ್ತನ್ನು ತೋರಿಸಿದ್ದು ತಾಯಿ ಎಂದರು.

ಏಳು ಮಕ್ಕಳನ್ನು ಹೆತ್ತ ತಾಯಿಗೆ ಅದು ಭಾರವಾಗಲಿಲ್ಲ. ಆ ಏಳು ಮಂದಿ ಮಕ್ಕಳು ಕೆಲಸಕ್ಕೆ ಸೇರಿದ ಮೇಲೆ ಹೆತ್ತ ತಾಯಿ ಭಾರವಾಗದಿರಲಿ. ಬಿಪಿ, ಶುಗರ್ ಮಾತ್ರೆ ಕೊಡದೆ ವೃದ್ಧಾಶ್ರಮಕ್ಕೆ ಬಿಡಲಾಗುತ್ತಿದೆ. ಆಕೆಗೆ ನೀವು ಎಷ್ಟೇ ಹಣ ಕೊಟ್ಟರು ಭಾವನೆ ಕೊಟ್ಟಂತಾಗುವುದಿಲ್ಲ ಎಂದು ಹೇಳಿದರು.

ಹೆತ್ತ ತಾಯಿಯ ಬಳಿ ಬೆಳೆಯದೆ, ಅಜಿಯ ತೊಡೆಯ ಮೇಲೆ ಮಲಗದೆ, ಹಬ್ಬಗಳಲ್ಲಿ ತಿಂಡಿ ತಿನಿಸುಗಳನ್ನು ಮಾಡಿಸಿಕೊಂಡು ತಿನ್ನುವಂತಹ ಸಹಜತೆಯೇ ಹೊರಟು ಹೋಗಿದೆ. ಈ ಹಿನ್ನೆಲೆಯಲ್ಲಿ ಎಷ್ಟೋ ಮಂದಿ ನಗರದ ಮಕ್ಕಳಿಗೆ ಸಂಸ್ಕಾರವೇ ಇಲ್ಲದಂತಾಗಿದೆ. ಏನೇ ಕೃತಕತೆ ಮಾಡಿದರೂ ಅಮ್ಮ ಎನ್ನುವ ಶಬ್ಧಕ್ಕೆ ಪರ್ಯಾಯವಿಲ್ಲ. ಎಷ್ಟೇ ದೊಡ್ಡ ರೌಡಿಯಾಗಿದ್ದರೂ ತಾಯಿ ತೀರಿಕೊಂಡಾಗ ಅಳುವುದನ್ನು ನಾವು ನೋಡಿz್ದೆÃವೆ ಎಂದರು.

ನಮ್ಮ ಪ್ರಧಾನಿಗಳು ತಾಯಿ ತೀರಿಕೊಂಡಾಗ ಸಾಮಾನ್ಯ ಮನುಷ್ಯರಂತೆ ಶವ ಸಂಸ್ಕಾರದ ಗೌರವವನ್ನು ಕೊಟ್ಟು ತಾಯಿಯ ಎದುರು ಎಲ್ಲರೂ ಚಿಕ್ಕವರು ಎನ್ನುವುದನ್ನು ತೋರಿಸಿಕೊಟ್ಟರು. ನಾವು ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿರುತ್ತೇವೆ. ಆದರೆ ಪ್ರಗತಿ ವಿಚಾರದಲ್ಲಿ ಸಕ್ರೀಯರಾಗುವುದಿಲ್ಲ ಎಂದು ವಿಷಾಧಿಸಿದರು.

ಮಹಿಳಾ ದಿನಾಚರಣೆ ಆಚರಿಸುವಾಗ ಮೊದಲು ಮಹಿಳೆಯರು ಮಹಿಳೆಯರನ್ನು ದ್ವೇಷ ಮಾಡುವುದನ್ನು ಬಿಡಬೇಕು. ಉತ್ತರ ಕರ್ನಾಟಕದ ಭಾಗದಲ್ಲಿ ವೃದ್ಧಾಶ್ರಮಗಳು ಕಡಿಮೆ ಒಟ್ಟು ಕುಟುಂಬಗಳು ಅಲ್ಲಿ ಹೆಚ್ಚು. ಎಲ್ಲರೂ ಒಂದೇ ಮನೆಯಲ್ಲಿ ಜೋಳದ ರೊಟ್ಟಿ ತಟ್ಟಿ ಊಟ ಮಾಡುತ್ತಾರೆ. ಅಲ್ಲಿ ಭಾರೀ ದೊಡ್ಡದಾದ, ಸವಲತ್ತುಗಳಿರುವ ಮನೆಗಳಿಲ್ಲದಿದ್ದರು ಒಗ್ಗಟ್ಟಿದೆ. ಅವರಲ್ಲಿ ವಿದ್ಯಾಭ್ಯಾಸ ಕಡಿಮೆ ಇದೆ. ನಮ್ಮಲ್ಲಿ ಎಂಬಿಬಿಎಸ್, ಎಂಬಿಎ ಎಲ್ಲ ಮಾಡಿದವರಿದ್ದಾರೆ. ಆದರೂ ಆ ರೀತಿ ಒಗ್ಗಟ್ಟಿಲ್ಲ. ಎಲ್ಲಿ ತಪ್ಪಾಗುತ್ತಿದೆ. ವಿದ್ಯೆಯೇ ಅಹಂಕಾರಕ್ಕೆ ದಾರಿಯಾಗುತ್ತಿದೆಯೇ ಎನ್ನುವುದನ್ನು ಆಲೋಚಿಸಬೇಕಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಮನೆಯೊಂದಿಗೆ ಮನಶಾಂತಿ, ಹಸಿವಿನೊಂದಿಗೆ ಭೋಜನ ಸಿಗುವಂತಾಗಲಿ, ಧನದೊಂದಿಗೆ ದಾನದ ಗುಣ ಬರಲಿ, ಹಾಸಿಗೆಯೊಂದಿಗೆ ನಿದ್ದೆಯೂ ಇರಬೇಕೆನ್ನುವ ರೀತಿ ಬದುಕು ಬೇಕೆನ್ನುವುದಾದರೆ ನಾವು ನಮಗೋಸ್ಕರ ಮಾತ್ರ ಎಂದು ಯೋಚಿಸದೆ ನಮ್ಮ ಬದುಕಿನ ಜೊತೆಗೆ ನೆರೆ ಹೊರೆಯವರ ಬದುಕಿನಲ್ಲೂ ನೆರವಾಗಬೇಕು ಎಂದು ಹೇಳಿದರು.

ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಸಂಘಟನೆಗೆ ಹೆಚ್ಚು ಶಕ್ತಿ ಇರುವುದರಿಂದ ಮಹಿಳೆಯರು ಸಂಘಟಿತರಾಗಿ ಹೋರಾಟ ಮಾಡಿ ತಮ್ಮ ಹಕ್ಕು ಪಡೆಯಬೇಕು. ಪುರುಷರಷ್ಟೇ ಮಹಿಳೆಯರಿಗೂ ಎಲ್ಲ ಅವಕಾಶಗಳನ್ನು ಕೊಟ್ಟಿರುವುದರಿಂದ ಮುಂದೆ ಬರಲು ಸಾಕಷ್ಟು ಸಾಧ್ಯತೆಗಳಿವೆ. ಆ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್ ಮಾತನಾಡಿ, ಎಲ್ಲ ಕಾಲಘಟ್ಟದಲ್ಲೂ ಮಹಿಳೆಯರು ಈ ದೇಶದ ಉನ್ನತಿಯಲ್ಲಿ ತನ್ನ ಪಾತ್ರವನ್ನು ನಿರಂತರವಾಗಿ ವಹಿಸುತ್ತಾ ಬಂದಿದ್ದಾರೆ. ಆಧುನಿಕ ಕಾಲದಲ್ಲೂ ಭಾರತಕ್ಕೆ ಹೊಸದಿಕ್ಕನ್ನು ಕೊಡುತ್ತಾ ಮಹಿಳೆಯರು ಪುರುಷನಿಗೆ ಸಮಾನರಾಗಿ ಬೆಳೆಯಬೇಕು ಎನ್ನುವುದನ್ನು ತೋರಿಸುತ್ತಿದ್ದಾರೆ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ನಮ್ಮ ಕೈಲಾದ ಸಹಾಯವನ್ನು ಹಿಂದುಳಿದ ಸಮಾಜಕ್ಕೆ ನೀಡಿ ಮುಂದೆ ತರುವ ಕೆಲಸ ಎಲ್ಲ ರಾಜಕಾರಣಿಗಳಿಂದಾಗಬೇಕು ಎಂದು ಹೇಳಿದರು.

ಜಿಲ್ಲಾ ಕುರುಹಿನ ಶೆಟ್ಟಿ(ನೇಕಾರ) ಮಹಿಳಾ ಸಂಘದ ಅಧ್ಯಕ್ಷೆ ಸಿ.ಎಸ್.ಪುಷ್ಪಾ ರಾಜೇಂದ್ರ ಆಧ್ಯಕ್ಷತೆ ವಹಿಸಿದ್ದರು. ಕೇಂದ್ರ ಕುರುಹಿನ ಶೆಟ್ಟಿ ಸಂಘದ ಅಧ್ಯಕ್ಷ ಬೆಂಗಳೂರಿನ ಅಂಬಾದಾಸ್ ಕಾಮೂರ್ತಿ, ಉಪಾಧ್ಯಕ್ಷ ಜಿ.ಟಿ.ಸೋಮಶೇಖರ್, ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್, ನೇಯ್ಗೆ ನುಡಿ ಮಾಸ ಪತ್ರಿಕೆ ಸಂಪಾದಕ ಡಿ.ಸಿ.ಬೆಳ್ಳಿಚುಕ್ಕಿ ವೀರೇಂದ್ರ, ಉಪನ್ಯಾಸಕಿ ನಾಗಶ್ರೀ ತ್ಯಾಗರಾಜ್, ಜಿಲ್ಲಾ ಶ್ರೀ ನೀಲಕಂಠೇಶ್ವರ ಕುರುಹಿನ ಶೆಟ್ಟಿ ಸಂಘದ ಅಧ್ಯಕ್ಷ ಎಚ್.ಇಂದುಕುಮಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net