ಹೆಣ್ಣಿನ ಶೋಷಣೆ ನಿಲ್ಲಲಿ: ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಸಿ.ಮಂಜುಳಾ

mysore
Published on

ಮೈಸೂರು

ಆರ್ಥಿಕ, ಶೈಕ್ಷಣಿಕವಾಗಿ ಮಹಿಳೆಯರು ಸಶಕ್ತರಾಗಬೇಕು ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಸಿ.ಮಂಜುಳಾ ಹೇಳಿದರು.

ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ನಗರ ಬಿಜೆಪಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತದ ಸಂಸ್ಕೃತಿಯಲ್ಲಿ ಮಹಿಳೆಯರು ನಾರಿಶಕ್ತಿ ಎನ್ನಲಾಗುತ್ತದೆ. ಇವರ ಮೇಲಿನ ಶೋಷಣೆ ನಿಂತು ಸ್ವಾವಲಂಬನೆ ಬದುಕು ಬರಬೇಕು. ಈ ವರ್ಷದ ಮಹಿಳಾ ದಿನದ ಘೋಷವಾಕ್ಯ ಮಹಿಳೆ-ಪುರುಷ ಲಿಂಗ ತಾರತಮ್ಯ ಇರಬಾರದು. ಮಹಿಳಾ ಪರವಾದ ಕಾನೂನು ಇದ್ದರೂ ಹೋರಾಟ ಮುಂದುವರಿದಿದೆ ಎಂದರು.

ಶರೀರ ಶಾಸ್ತ್ರ, ಮನಸ್ಸಿನ ಶಾಸ್ತ್ರ ಒಗ್ಗದಿರುವ ಕಠಿಣವಾದ ಕೆಲಸಗಳನ್ನೂ ಮಹಿಳೆಯರು ಮಾಡುತ್ತಿದ್ದಾರೆ. ಮಮತೆ, ತ್ಯಾಗ, ಸಮರ್ಪಣೆ ಗುಣ ಕಳೆದುಹೋಗಬಾರದು. ಇವರ ಸೇವೆ ಸಮಾಜಕ್ಕೆ ಲಭ್ಯವಾಗಬೇಕು. ರಾಜಕೀಯದಲ್ಲೂ ಶೇ. 33ಮೀಸಲಾತಿ ಕೊಡಬೇಕು ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರ ಅನೇಕ ತಪ್ಪು ಮಾಡುತ್ತಿದೆ. ಬಜೆಟ್‌ನಲ್ಲಿಯೂ ಒಳ್ಳೆಯ ಕಾರ್ಯಕ್ರಮ ನೀಡಿಲ್ಲ. ಬಾಣಂತಿಯರ ಸಾವು ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳಿಂದ ತಲೆ ತಗ್ಗಿಸುವಂತಾಗಿದೆ ಎಂದು ಹೇಳಿದರು.

ಪೂರ್ಣಿಮಾ ಆಸ್ಪತ್ರೆಯ ಮುಖ್ಯಸ್ಥೆ ಡಾ.ಪೂರ್ಣಿಮಾ ಮಧುಸೂದನ್ ಮಾತನಾಡಿ, ಅಂಗಾಂಗ ದಾನದಿಂದ ಜೀವನ್ಮರಣದಿಂದ ಹೋರಾಡುತ್ತಿರುವವರಿಗೆ ನೆರವಾಗಬಹುದು ಎಂದು ತಿಳಿಸಿದರು.

ಕಿಡ್ನಿ, ಲಿವರ್‌ಗಾಗಿ ಸಾವಿರಾರು ಜನ ಕಾಯುತ್ತಿದ್ದಾರೆ. ಹೃದಯವನ್ನು ಬದಲಿಸುವ ಮಟ್ಟಿಗೆ ವೈದ್ಯಜ್ಞಾನ ಬೆಳೆದಿದೆ. ಅಕಾಲಿಕ ಮರಣ, ಮಿದುಳು ನಿಷ್ಕ್ರೀಯವಾದವರು ತಮ್ಮ ಅಂಗಾಂಗಗಳನ್ನು ದಾನ ಮಾಡಿದರೆ ನಾಲ್ಕಾರು ಜೀವಗಳು ಉಳಿಸಬಹುದು. ರಕ್ತ ದಾನ, ಕಣ್ಣು ದಾನ ಮಾಡಬಹುದು. 35 ವರ್ಷದೊಳಗಿನ ಮಹಿಳೆಯರು ತಮ್ಮ ಗರ್ಭಕೋಶ ದಾನ ಮಾಡಬಹುದು. ಪ್ರಸ್ತುತ ಬಂಜೆತನದ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಮೊಟ್ಟೆಗಳನ್ನು ದಾನ ಮಾಡಿದರೆ ಮಕ್ಕಳನ್ನು ಪಡೆಯುವ ದಂಪತಿಗೆ ನೆರವಾಗಬಹುದು ಎಂದು ಹೇಳಿದರು.

ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಮಹಿಳೆಯರಿಗಾಗಿ ಕೇಂದ್ರ ಸರ್ಕಾರ ನಾನಾ ಕಾರ್ಯಕ್ರಮಗಳನ್ನು ರೂಪಿಸಿದೆ. ಆಸಕ್ತರಿಗೆ ಟೈಲರಿಂಗ್ ತರಬೇತಿ ಕೊಡಲಾಗುತ್ತಿದೆ. ವಿಶ್ವಕರ್ಮ ಯೋಜನೆಯಡಿ 2900 ಕೋಟಿ ರೂ. ಸಾಲ ಕೊಡಲಾಗಿದೆ. 4 ವರ್ಷಗಳಲ್ಲಿ 9 ಸಾವಿರ ಕೋಟಿ ರೂ. ಸಾಲ ದೊರೆತು 90 ಸಾವಿರ ಜನರಿಗೆ ಉದ್ಯೋಗ ದೊರೆತಿದೆ ಎಂದು ಮಾಹಿತಿ ನೀಡಿದರು.

ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ ಮಾತನಾಡಿ, ಮಹಿಳೆಯರಲ್ಲಿ ಪ್ರಾಮಾಣಿಕತೆ, ಬದ್ಧತೆ, ಪ್ರೀತಿ, ವಿಶ್ವಾಸ ಅಪಾರವಾಗಿದೆ. ನಗರ ಪಾಲಿಕೆಯ ಸದಸ್ಯರಾಗಿ ಕರ್ತವ್ಯ ನಿರ್ವಹಿಸಿದ ಮಹಿಳೆಯರು ಪುರುಷರಿಗಿಂತ ಉತ್ತಮ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಸಾಧಕ ಮಹಿಳೆಯರ ಸನ್ಮಾನ:

ಕೇಂದ್ರದ ಸರ್ಕಾರದ ಯೋಜನೆಗಳಿಂದ ಸ್ವಾವಲಂಬಿ ಬದುಕು ಕಟ್ಟಿಕೊಂಡ ವಿನುತಾ ಕೇಶವ್, ಕಲ್ಪನಾ, ಅಶ್ವಿನಿ ಪ್ರಕಾಶ್, ಲಲಿತಾಂಬ, ಐಶ್ವರ್ಯ, ಉಮಾ ನಾಗರಾಜ್, ಕಾವೇರಮ್ಮ, ಸೌಮ್ಯ ಅವರನ್ನು ಸನ್ಮಾನಿಸಲಾಯಿತು.

ಮಹಿಳಾ ಮೋರ್ಚಾ ನಗರ ಅಧ್ಯಕ್ಷೆ ರೇಣುಕಾ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ, ಮುಖಂಡರಾದ ಬಿ.ಎಂ.ರಘು, ಕೇಬಲ್ ಮಹೇಶ್, ಶಾರದಾ, ಡಾ.ರೂಪಾ, ಶಾಂತಮ್ಮ ಈಶ್ವರ್, ರತ್ನ ಲಕ್ಷ್ಮಣ್, ಸವಿತಾ ವಿ.ಪಿ, ನರಸಿಂಹರಾಜ ಕ್ಷೇತ್ರದ ಮಹಿಳಾ ಮೋರ್ಚಾದ ಅಧ್ಯಕ್ಷೆ ಮಾಲಿನಿ ಪ್ರಕಾಶ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net