ಹೆಣ್ಣಿಗೆ ಯಾವುದೂ ಅಸಾಧ್ಯವಲ್ಲ

15vtp1 Sabe Udgatane
Published on

ವಿರಾಜಪೇಟೆ: ಹೆಣ್ಣಿಗೆ ಅಸಾಧ್ಯ ಎನ್ನುವುದು ಯಾವುದೂ ಇಲ್ಲ. ಹಾಗಾಗಿಯೇ ಆಕೆ ಎಲ್ಲ ಕ್ಷೇತ್ರಗಳಲ್ಲೂ ಮುಂದೆ ಇದ್ದಾಳೆ ಎಂದು ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ರಮೇಶ್ ಅಭಿಪ್ರಾಯಪಟ್ಟರು.


ವಿರಾಜಪೇಟೆ ಮಹಿಳಾ ಸಮಾಜದಲ್ಲಿ ಬಿಜೆಪಿ ಮಹಿಳಾ ಮೋರ್ಚಾದಿಂದ ಬುಧವಾರ ಆಯೋಜಿಸಿದ್ದ ಮಹಿಳಾ ಸಮಾವೇಶದಲ್ಲಿ ಮಾತನಾಡಿ, ತಾಯಿ ಎನ್ನುವ ಪದಕ್ಕೆ ಅಸಾಧ್ಯ ಎನ್ನುವುದೇ ಇಲ್ಲ. ಅಸಾಧ್ಯ ಎನ್ನುವ ಪದ ತಾಯಿಗಿದ್ದಿದ್ದರೆ ಮಗುವಿಗೆ ಜನ್ಮ ನೀಡುತ್ತಿರಲಿಲ್ಲ. ಯಾವ ಹೆಣ್ಣೂ ತಾಯಿಯಾಗುತ್ತಿರಲಿಲ್ಲ. ಮಗು-ಸಂಸಾರವನ್ನು ನಿಭಾಯಿಸುವ ಶಕ್ತಿಯೂ ಅವಳಿಗೆ ಇರುತ್ತಿರಲಿಲ್ಲ. ಅಸಾಧ್ಯವನ್ನು ಸಾಧ್ಯ ಮಾಡುವುದೇ ಹೆಣ್ಣಿನ ಗುಣ. ಅದನ್ನು ಮನೆ, ಸಂಸಾರ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ನಿರೂಪಿಸಿದ್ದಾಳೆ ಎಂದರು.


ಕೊಡಗು ಜಿಲ್ಲೆ ಕಾವೇರಿಯ ಪುಣ್ಯಭೂಮಿ. ಕೊಡಗಿನ ನೆಲದಲ್ಲಿ ಜಾತಿ, ಮತ, ಧರ್ಮ ಭೇದವಿಲ್ಲ. ಭಾರತೀಯ ಸಂಸ್ಕೃತಿಯನ್ನು ಬಿಂಬಿಸಿ ನೆಲ-ಜಲವನ್ನು ಉಳಿಸುವ ಶಕ್ತಿ ಈ ಮಣ್ಣಿಗಿದೆ. ನಾವು ಜಾತಿಯಿಂದ ರಾಜಕಾರಣ ಮಾಡುತ್ತಿಲ್ಲ. ಮತದಿಂದ ರಾಜಕಾರಣ ಮಾಡುವವರು. ಪಾಕಿಸ್ತಾನ ಧ್ವಜದ ಪರ ವಕಾಲತ್ತು ವಹಿಸಿದವರು, ಕೊಡವರ ಕುಲದೈವ ತಲಕಾವೇರಿಯಲ್ಲಿ ತೀರ್ಥಉದ್ಬವ ಹಾಗೂ ಶಬರಿಮಲೆಯಲ್ಲಿನ ಮಕರ ಜ್ಯೋತಿಯನ್ನು ಸುಳ್ಳು ಎಂದು ಪ್ರತಿಪಾದಿಸಿದ ಕಡೆಯವರ ಬಗ್ಗೆ ಜಿಲ್ಲೆಯ ಮತದಾರರು ಜಾಗೃತರಾಗಿರಬೇಕು ಎಂದು ಕಿವಿಮಾತು ಹೇಳಿದರು.


ರಾಜ್ಯ, ದೇಶದಲ್ಲಿ ಅಭಿವೃದ್ಧಿ ಆಗಿಲ್ಲ. ಬಿಜೆಪಿ ನೇತೃತ್ವದ ಸರ್ಕಾರಗಳು ಏನೂ ಮಾಡಿಲ್ಲವೆಂದು ಬೊಬ್ಬೆ ಹೊಡೆಯುವವರು ಆತ್ಮವಲೋಕನ ಮಾಡಿಕೊಳ್ಳಬೇಕು. 70 ವರ್ಷ ಅವಕಾಶ ಇದ್ದರೂ ಏನು ಮಾಡಲು ಸಾಧ್ಯಾವಾಗದವರು ಬೆಂಗಳೂರು-ಮೈಸೂರಿನ ದಶಪಥ ರಸ್ತೆಯ ಬಗ್ಗೆ ಚಕಾರ ಎತ್ತುತ್ತಿದ್ದಾರೆ. ಅಭಿವೃದ್ಧಿ ಕಾರ್ಯ ಒಂದೇ ಬಿಜೆಪಿ ಸರ್ಕಾರದ ಗುರಿ. ಪ್ರಕೃತಿ ವಿಕೋಪ ಸಂದರ್ಭದಲ್ಲಿ ಇಡೀ ರಾಜ್ಯಕ್ಕೆ 121 ಕೋಟಿ ಹಣ ಬಿಡುಗಡೆ ಮಾಡಿದರೆ ಕೊಡಗು ಜಿಲ್ಲೆಗೆ 138 ಕೋಟಿ ರೂ. ಪರಿಹಾರ ನೀಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡಿದ ಪಡಿತರ ಅಕ್ಕಿಯನ್ನು ನಮ್ಮದು ಎನ್ನದೆ ಬೇರೆಯವರು ನೀಡಿದ್ದಾರೆ ಎನ್ನಲು ಸಾಧ್ಯವೇ? ರಾಜ್ಯಕ್ಕೆ ಬಾಂಬ್ ಹಾಕಿದವರು ದೇಶದ್ರೋಹಿಗಳಲ್ಲ ದೇಶಪ್ರೇಮಿಗಳು ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳುವಾಗ ಅವರ ಮನಸ್ಥಿತಿ ಯಾವ ರೀತಿ ಇರಬಹುದೆಂದು ನೀವೇ ಊಹಿಸಿಕೊಳ್ಳಿ. ರಾಜ್ಯದಲ್ಲಿ ಈ ಬಾರಿಯು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದರಲ್ಲಿ ಸಂದೇಹ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಈ ಬಾರಿಯ ಚುನಾವಣೆ ಪ್ರತಿಷ್ಠೆಯಾಗಿದೆ. ಅಭಿವೃದ್ಧಿ ಏನಾಗಿದೆ ಎನ್ನುವವವರೇ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅನುದಾನದಲ್ಲಿ ಒಂದಲ್ಲ ಒಂದು ರೀತಿಯಿಂದ ಯೋಜನೆಯಡಿ ನೆರವು ಪಡೆದುಕೊಂಡಿದ್ದಾರೆ. ಬಿಜೆಪಿ ಜನರ ವಿಶ್ವಾಸವನ್ನು ಉಳಿಸಿಕೊಂಡಿದೆ. ಮುಂದಿನ ಬಾರಿಯೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದರು.


ಜಿಲ್ಲಾಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ ಮಾತನಾಡಿ, ಜಿಲ್ಲೆಯಲ್ಲಿ ಬಿಜೆಪಿಯ ವಿವಿಧ ಮೋರ್ಚಾಗಳ ಸಮಾವೇಶವನ್ನು ನಡೆಸಲಾಗುತ್ತಿದೆ. ಭಾರತೀಯ ಜನತಾ ಪಕ್ಷ ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ. ಹಿಂದುತ್ವ ಉಳಿದರೆ ಮಾತ್ರ ದೇಶ ಉಳಿವು ಸಾಧ್ಯ ಎಂದರು.

ತಾಲೂಕು ಅಧ್ಯಕ್ಷೆ ಕವಿತಾ ಬೋಜಪ್ಪ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಮಡಿಕೇರಿ ಶಾಸಕ, ವಿಧಾನ ಪರಿಷತ್ ಸದಸ್ಯ ಸುಜಾಕುಶಾಲಪ್ಪ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶರೀನ್ ಸುಬ್ಬಯ್ಯ, ರಾಜ್ಯ ಶಿಸ್ತು ಸಮಿತಿ ಸದಸ್ಯ ರೀನಾ ಪ್ರಕಾಶ್, ತಾಲೂಕು ಅಧ್ಯಕ್ಷ ಚಲನ್, ಪಶ್ಚಿಮಘಟ್ಟ ಕಾರ್ಯಪಡೆ ಮಾಜಿ ಅಧ್ಯಕ್ಷ ರವಿ ಕುಶಾಲಪ್ಪ, ಯಮುನಾ ಚಂಗಪ್ಪ ಇರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net