ಹೆಣ್ಣನ್ನು ಸುರಕ್ಷಿತವಾಗಿರಿಸಲು ಹಲವು ಕಾಯ್ದೆ

24 ckm 1
ಚಿಕ್ಕಮಗಳೂರು ತಾಲೂಕು ಮೈಲಿಮನೆ ಗ್ರಾಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಾಗಾರವನ್ನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ.ಹನುಮಂತಪ್ಪ ಉದ್ಘಾಟಿಸಿದರು. ಗುರುಸಜ್ಜನ್, ಸುಭಾಷ್ ಎಂ.ಆಲದಕಟ್ಟಿ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಹೆಣ್ಣು ಸಮಾಜದ ಕಣ್ಣು. ದೇಶದ ವಿವಿಧ ಸ್ಥರಗಳಲ್ಲಿ ಮಹಿಳೆಯರು ಗೌರವಾನ್ವಿತ ಹುದ್ದೆಗಳನ್ನು ಅಲಂಕರಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಹೆಣ್ಣನ್ನು ತಿರಸ್ಕರಿಸುವ ಅಥವಾ ಅಸಡ್ಡೆ ತೋರುವ ಆಲೋಚನೆ ಪಾಲಕರು ಬಿಡಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ.ಹನುಮಂತಪ್ಪ ತಿಳಿಸಿದರು.

ತಾಲೂಕಿನ ಮೈಲಿಮನೆ ಗ್ರಾಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಟಾಟಾ ಕಾಫಿ ಲಿಮಿಟೆ ಡ್ ಮೈಲಿಮನೆ, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ವಕೀಲರ ಸಂಘದಿAದ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹೆಣ್ಣು ಇಂದಿನ ಕಾಲಮಾನದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿ ಕಂಡಿದ್ದಾಳೆ. ರಾಷ್ಟçಪತಿ, ಪ್ರಧಾನಿ, ಐಪಿಎಸ್ ಹಾಗೂ ಐಎಎಸ್‌ನಂಥ ಪ್ರಮುಖ ಸ್ಥಾನವನ್ನು ಅಲಂಕರಿಸಿದ್ದಾರೆ. ಹಾಗಾಗಿ ಹೆಣ್ಣು ಮಕ್ಕಳನ್ನು ಅಲ್ಲಗೆಳೆಯದೇ ಗಂಡಿನAತೆ ಸರಿಸಮಾನವಾಗಿ ಗೌರವಿಸುವ ಪರಿಕಲ್ಪನೆ ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಇತ್ತೀಚೆಗೆ ಎಸ್ಟೇಟ್‌ನ ಕಾರ್ಮಿಕ ವಲಯದಲ್ಲಿ ಪೋಕ್ಸೋ, ಬಾಲ್ಯವಿವಾಹ ಪ್ರಕರಣಗಳು ದಾಖಲಾಗುತ್ತಿವೆ. ಹೆಣ್ಣುಮಕ್ಕಳನ್ನು ಪ್ರೌಢಾವಸ್ಥೆಗೆ ಮುಂಚೆಯೇ ಮದುವೆ ಮಾಡಿಸುವುದು, ಹೆಣ್ಣು-ಗಂಡೆAದು ತಿಳಿಯಲು ಬ್ರೂಣಲಿಂಗ ಪತ್ತೆ ಪ್ರಕರಣಗಳು ಕಾನೂನು ಚೌಕಟ್ಟಿನಲ್ಲಿ ಶಿಕ್ಷಾರ್ಹ ಅಪರಾಧ. ಇದಕ್ಕೆ ಜೈಲು ಶಿಕ್ಷೆಯ ಜೊತೆಗೆ ದಂಡ ವಿಧಿಸಲು ಅವಕಾಶವಿದೆ ಎಂದು ಎಚ್ಚರಿಕೆ ನೀಡಿದರು.

ಬಾಲ್ಯಾವಸ್ಥೆಯ ಹೆಣ್ಣು ಮಕ್ಕಳಿಗೆ ಲೈಂಗಿಕ ದೌರ್ಜನ್ಯ, ಬಾಲಗರ್ಭಿಣಿ ಪ್ರಕರಣಕ್ಕೆ ಕಡಿವಾಣ ಹಾಕಲು ಪಾಲಕರು ನಿಗಾವಹಿಸಬೇಕು. ಮದುವೆ ವಯಸ್ಸಿಗಿಂತ ಮೊದಲೇ ಪ್ರೇಮವಿವಾಹಕ್ಕೆ ಮುಂದಾದರೆ ಎರಡು ಕಡೆಯ ಇಡೀ ಕುಟುಂಬ, ಮದುವೆಯಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರ ಮೇಲು ಪ್ರಕರಣ ದಾಖಲಾಗುತ್ತವೆ ಎಂಬುದನ್ನು ಅರಿತುಕೊಳ್ಳಬೇಕು ಎಂದರು.

ಹೆಣ್ಣು ಸಮಾಜದಲ್ಲಿ ಶೋಷಣೆಗೆ ಒಳಗಾಗುತ್ತಿರುವ ಕಾರಣ ದೇಶದಲ್ಲಿ ಪ್ರತಿ ಎಂಟು ಗಂಟೆಗೊಮ್ಮೆ ಅತ್ಯಾಚಾರ ಪ್ರಕರಣ ದಾಖಲಾಗುತ್ತಿವೆ. ಸರ್ಕಾರಗಳು ಆ ನಿಟ್ಟಿನಲ್ಲಿ ಹೆಣ್ಣನು ಸುರಕ್ಷಿತವಾಗಿರಿಸಲು ಅನೇಕ ಕಾಯ್ದೆಗಳನ್ನು ರಚಿಸುವ ಮೂಲಕ ಮಹಿಳೆಯರಿಗೆ ಕಾನೂನಿನ ತಿಳಿವಳಿಕೆ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಬಡವರ್ಗದ ಜನರು ಶೋಷಣೆ, ದೌರ್ಜನ್ಯ ಅಥವಾ ಅನ್ಯಾಯಕ್ಕೆ ಒಳಗಾಗಿ ಪ್ರಕರಣ ಎದುರಿಸಲು ಆರ್ಥಿಕ ಶಕ್ತಿಯಿಲ್ಲದವರಿಗೆ ನ್ಯಾಯ ಒದಗಿಸಲು ಕಾನೂನು ಸೇವೆಗಳ ಪ್ರಾಧಿಕಾರ ಉಚಿತವಾಗಿ ವಕೀಲರನ್ನು ನೇಮಿಸುತ್ತದೆ. ಜೊತೆಗೆ ಪ್ರಕರಣ ಇತ್ಯರ್ಥಗೊಳ್ಳುವರೆಗೂ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿಕೊಡಲಿದೆ. ಹೆಣ್ಣಿಗೆ ಸಮಸ್ಯೆ ಕಂಡು ಬಂದಲ್ಲಿ ಮಹಿಳಾ ವಕೀಲರನ್ನು ನೇಮಿಸಲಾಗುವುದು ಎಂದು ಮನವರಿಕೆ ಮಾಡಿದರು.

ಕಾರ್ಮಿಕ ಇಲಾಖೆ ಚಿಕ್ಕಮಗಳೂರು ಉಪವಿಭಾಗದ ಸಹಾಯಕ ಆಯುಕ್ತ ಸುಭಾಷ್ ಎಂ. ಆಲದಕಟ್ಟಿ ಮಾತನಾಡಿ, ಕಾರ್ಮಿಕರ ಬದುಕಿಗಾಗಿ ಕೇಂದ್ರ ಸರ್ಕಾರ ೨೧ ಹಾಗೂ ರಾಜ್ಯಸರ್ಕಾರ ೪ ಪ್ರಮುಖ ಕಾರ್ಮಿಕ ಕಾಯ್ದೆಗಳನ್ನು ರೂಪಿಸಿ ಅನುಷ್ಟಾನಗೊಳಿಸುವ ಮೂಲಕ ಕಾರ್ಮಿಕ ಶ್ರೇಯೋಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿವೆ ಎಂದು ಮಾಹಿತಿ ನೀಡಿದರು.

ಕಾರ್ಮಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರಿಗೆ ಮಾಲೀಕರು ಕನಿಷ್ಟ ವೇತನ, ವೈದ್ಯಕೀಯ ಸೌಲಭ್ಯ, ನಿವಾಸದ ವ್ಯವಸ್ಥೆ ಕಲ್ಪಿಸಿಕೊಡಬೇಕು. ಪ್ರತಿದಿನವು ೯ ಗಂಟೆಗಳ ಕಾಲ ಮಾತ್ರ ಕೆಲಸ ಮಾಡಬೇಕು. ಹೆಚ್ಚು ಕೆಲಸ ನಿರ್ವಹಿಸಿದರೆ ಹೆಚ್ಚುವರಿ ವೇತನ ನಿಗಧಿಗೊಳಿಸುವುದು ಕಾನೂನಿನ ನಿಯಮವಾಗಿದೆ ಎಂದು ತಿಳಿಸಿದರು.

ಮಲ್ಲಂದೂರು ಠಾಣೆ ಸಬ್‌ಇನ್ಸ್ಪೆಕ್ಟರ್ ಗುರುಸಜ್ಜನ್ ಮಾತನಾಡಿ, ಮಲ್ಲಂದೂರು ವ್ಯಾಪ್ತಿಯಲ್ಲಿ ಹೆಚ್ಚು ಪೋಕ್ಸೋ ಪ್ರಕರಣ ಕಂಡುಬರುತ್ತಿವೆ. ಹೆಣ್ಣು ಮಕ್ಕಳು ಜೋಪಾನವಾಗಿರಿಸುವ ಜವಾಬ್ದಾರಿ ಪಾಲಕರು ಹೊರಬೇಕು. ಮಕ್ಕಳು ಶಿಕ್ಷಣವಂತರಾದರೆ ಮಾತ್ರ ಕಾನೂನು ತಿಳಿವಳಿಕೆ ಮೂಡಿ ಬರಲಿದೆ. ಹೀಗಾಗಿ ಮಕ್ಕಳ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಹಾಯಕ ಕಾನೂನು ಅಭಿರಕ್ಷಕ ಜಿ.ಆರ್. ರಮೇಶ್, ಕಾರ್ಮಿಕ ಇಲಾಖೆ ಚಿಕ್ಕಮಗಳೂರು ವಿಭಾಗದ ಅಧಿಕಾರಿ ಬಿ.ಸಿ.ಸುರೇಶ್, ಹಿರಿಯ ಕಾರ್ಮಿಕ ನಿರೀಕ್ಷಕರಾದ ಎಚ್.ಕೆ.ಪ್ರಭಾಕರ್, ಪ್ರವೀಣ್‌ಕುಮಾರ್, ಮೈಲಿಮನೆ ಎಸ್ಟೇಟ್‌ನ ಜನರಲ್ ಮ್ಯಾನೇಜರ್ ರೋಷನ್, ಕಟ್ಟಡ ಕಾರ್ಮಿಕ ಮಂಡಳಿ ಕಾರ್ಯನಿರ್ವಾಹಕ ಮಹಮ್ಮದ್ ಹ್ಯಾರಿಸ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net