

ಚಾಮರಾಜನಗರ: ಸತ್ತರೆ ಹೆಣ ಹೂಳಲು ಸ್ಮಶಾನವಿಲ್ಲದೇ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದ ದಲಿತ ಸಮುದಾಯಗಳ ಗೋಳನ್ನು ಯಾರು ಕೇಳದಂತಾಗಿದೆ.
ನಗರದ 2ನೇ ವಾರ್ಡ್‌ನಲ್ಲಿ ಸುಮಾರು 50-60 ಭೋವಿ ಸಮುದಾಯದ ಕುಟುಂಬಗಳು ವಾಸ ಮಾಡುತ್ತಿದ್ದಾರೆ. ಈ ಸಮುದಾಯದಲ್ಲಿ ಯಾರಾದರೂ ಮೃತಪಟ್ಟರೇ ಸುಮಾರು 40 ವರ್ಷಗಳಿಂದಲೂ ಚಾಮರಾಜನಗರದ ಸರ್ವೇ ನಂ.721 ರಲ್ಲಿರುವ ಸ್ಮಶಾನದಲ್ಲಿ ಅಂತ್ಯಸಂಸ್ಕಾರವನ್ನು ನೆರವೇರಿಸಿಕೊಂಡು ಬರುತ್ತಿದ್ದರು. ಆದರೆ ಜ.21 ರಂದು ಭೋವಿ ಸಮುದಾಯದ ಒಬ್ಬರು ಮಹಿಳೆ ಮೃತಪಟ್ಟಾಗ ಅಂತ್ಯಸಂಸ್ಕಾರವನ್ನು ಮಾಡಲು ಸ್ಮಶಾನಕ್ಕೆ ಹೋದಾಗ ನಗರದ ದೇವಾಂಗ ಜನಾಂಗದವರು ದೇವಾಂಗ ಜನರ ರುದ್ರಭೂಮಿ ಎಂದು ನಾಮಲಕವನ್ನು ಹಾಕಿ ಸ್ಮಶಾನಕ್ಕೆ ಗೇಟ್ ಹಾಕಿದ್ದರು. ಈ ವೇಳೆ ದೇವಾಂಗ ಸಮುದಾಯದವರು ಇದೊಂದು ಬಾರಿ ಹೆಣ ಹೂಳಲು ಅವಕಾಶ ಮಾಡಿಕೊಡುತ್ತೇವೆ ಎಂದು ಹೇಳಿ ಶವಸಂಸ್ಕಾರಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಬಳಿಕ ಸಮುದಾಯದವರು ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಪ್ರತ್ಯೇಕ ಸ್ಮಶಾನ ನೀಡುವಂತೆ ಕೋರಿದ್ದರು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈವರೆಗೂ ಸ್ಮಶಾನವನ್ನು ಮಂಜೂರು ಮಾಡದ ಹಿನ್ನೆಲೆಯಲ್ಲಿ ಮತ್ತೆ ಭೋವಿ ಸಮುದಾಯದವರಿಗೆ ಸಮಸ್ಯೆ ಎದುರಾಗಿದೆ. ಸಮುದಾಯದ ಸರಸಮ್ಮ(65) ಎಂಬುವವರು ಶುಕ್ರವಾರ ಮೃತಪಟ್ಟಿದ್ದು, ಹೆಣವನ್ನು ಹೂಳಲು ಜಾಗವಿಲ್ಲದೇ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಬೇಸತ್ತಿರುವ ಭೋವಿ ಸಮುದಾಯದವರು ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ನಮ್ಮ ಸಮುದಾಯಕ್ಕೆ ಪ್ರತ್ಯೇಕವಾಗಿ ಸ್ಮಶಾನ ನೀಡದಿದ್ದರೇ ಹೆಣವನ್ನು ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿ ಇಟ್ಟು ಧರಣಿ ನಡೆಸಲಾಗುವುದು ಎಂದು ಸಮುದಾಯದವರು ಎಚ್ಚರಿಕೆ ನೀಡಿದ್ದಾರೆ.
ತಹಸೀಲ್ದಾರ್ ನಿರ್ಲಕ್ಷ್ಯ:
ನಗರದ 2 ನೇ ವಾರ್ಡ್‌ನಲ್ಲಿ ವಾಸವಾಗಿರುವ ಭೋವಿ ಸಮುದಾಯದವರು ಈ ಹಿಂದೆ ಹೆಣವನ್ನು ಹೂಳುತ್ತಿದ್ದ ಸ್ಮಶಾನಕ್ಕೆ ದೇವಾಂಗ ಸಮುದಾಯದವರು ಗೇಟ್ ಹಾಕಿಕೊಂಡ ಬಳಿಕ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತಕ್ಕೆ ಮನವಿಯನ್ನು ಸಲ್ಲಿಸಿದ್ದರು. ನಮಗೆ ಪ್ರತ್ಯೇಕವಾದ ಸ್ಮಶಾನಕ್ಕೆ ಜಾಗವನ್ನು ನಿಗದಿ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದರು. ಈ ವೇಳೆ ಯಡಬೆಟ್ಟದ ಬಳಿ ಕೋವಿಡ್ ಸಂದರ್ಭದಲ್ಲಿ ಹೆಣಗಳನ್ನು ಶವಸಂಸ್ಕಾರ ಮಾಡಿದ ಜಾಗದ ಪಕ್ಕದಲ್ಲೇ ಭೋವಿ ಸಮುದಾಯಕ್ಕೆ ಜಾಗವನ್ನು ನಿಗದಿ ಮಾಡಲಾಗಿದೆ ಎಂದು ತಹಸೀಲ್ದಾರ್ ಅವರು ತಿಳಿಸಿದ್ದರು. ಆದರೆ ಈ ವರೆವಿಗೂ ತಹಸೀಲ್ದಾರ್ ಆಗಲಿ, ಆರ್‌ಐ ಅಥವಾ ವಿಎ ಆಗಲಿ ಯಾರನ್ನು ಕೇಳಿದರೂ ಸಮುದಾಯದವರಿಗೆ ಸ್ಮಶಾನದ ಜಾಗವನ್ನು ತೋರಿಸುವ ಕೆಲಸವನ್ನು ಮಾಡುತ್ತಿಲ್ಲ. ಈ ಮೂಲಕ ತಹಸೀಲ್ದಾರ್ ನಿರ್ಲಕ್ಷ್ಯದಿಂದ ದಲಿತ ಕುಟುಂಬಗಳು ಸಂಕಷ್ಟ ಅನುಭವಿಸುವಂತಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಗಮನಹರಿಸಿ ಭೋವಿ ಸಮುದಾಯದವರಿಗೆ ಸ್ಮಶಾನಕ್ಕೆ ಜಾಗವನ್ನು ಗುರುತಿಸಿಕೊಡಬೇಕು ಎಂದು ವಾರ್ಡ್ ನಿವಾಸಿ ರವಿ ಅವರು ವಿಜಯವಾಣಿ ಮೂಲಕ ಒತ್ತಾಯಿಸಿದ್ದಾರೆ.
ಮಾದಿಗ ಸಮುದಾಯಕ್ಕೂ ಇದೇ ಸಮಸ್ಯೆ:
ಜಿಲ್ಲೆಯಲ್ಲಿರುವ ಪರಿಶಿಷ್ಟಜಾತಿ ಮಾದಿಗ ಸಮುದಾಯದ್ದೂ ಇದೇ ಸಮಸ್ಯೆಯಾಗಿದ್ದು, ಸಮುದಾಯದವರು ವಾಸಿಸುತ್ತಿರುವ ಹೆಚ್ಚಿನ ಗ್ರಾಮಗಳಲ್ಲಿ ಸ್ಮಶಾನವಿಲ್ಲದೇ ಜನರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಗುಂಡ್ಲುಪೇಟೆ ತಾಲೂಕಿನ ಕಗ್ಗಳ, ಕಗ್ಗಳಹುಂಡಿ, ಮಾಡ್ರಹಳ್ಳಿ, ಮಡಹಳ್ಳಿ, ಸಿಂಡನಪುರ, ಶೆಟ್ಟರಹುಂಡಿ, ತೆರಕಣಾಂಬಿಹುಂಡಿ, ಹಂಗಳ, ಹೊನ್ನೇಗೌಡನಹಳ್ಳಿ, ಭೀಮನಬೀಡು ಮತ್ತು ಬಾಚಹಳ್ಳಿಯಲ್ಲಿ ಮಾದಿಗ ಸಮುದಾಯಕ್ಕೆ ಸ್ಮಸಾನ ಭೂಮಿ ಇಲ್ಲದೇ ಸಂಕಷ್ಟ ಅನುಭವಿಸುತ್ತಿದ್ದಾರೆ. ಚಾಮರಾಜನಗರ ತಾಲೂಕಿನ ಗಣಗನೂರುಪುರ, ಮೂಡಹಳ್ಳಿ, ನಂಜಾಪುರ, ಸಿಂಗನಪುರ, ಉಗನದಹುಂಡಿ, ಕಾಗಲವಾಡಿ, ಅಮಚವಾಡಿ, ಬಿಸಲವಾಡಿ, ಹೆಣಗುಂಬ, ಬಡಗಲಪುರ, ನವಿಲೂರು ಮತ್ತು ಉಮ್ಮತ್ತೂರು. ಹನೂರು ತಾಲೂಕಿನ ಮಲ್ಲಯ್ಯನಪುರ, ಸತ್ತಿಗಾಲ, ಕಾಮಗೆರೆ, ವಡಕೆಹಳ್ಳ, ಅಂಬಿಕಪುರ, ಅಜ್ಜಿಪುರದೊಡ್ಡಿ, ಕೆಂಪಯ್ಯನಹಟ್ಟಿ, ವಡ್ಡರದೊಡ್ಡಿ, ಕೂಡ್ಲೂರು, ಸಂದನಪಾಳ್ಯ. ಯಳಂದೂರು ತಾಲೂಕಿನ ಗಂಗವಾಡಿ, ಬೂದಿತಿಟ್ಟು, ಇರಸವಾಡಿ ಹಾಗೂ ಕೊಳ್ಳೇಗಾಲ ತಾಲೂಕಿನ ಆಲಹಳ್ಳಿ, ಟಗರಪುರ, ಬಾಳಗುಣಸೆ, ಸರಗೂರು ಹಾಗೂ ಇನ್ನಿತರೆ ಗ್ರಾಮಗಳಲ್ಲಿ ಮಾದಿಗ ಸಮುದಾಯಕ್ಕೆ ಸ್ಮಶಾನವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಗಮನಹರಿಸಿ ಸ್ಮಶಾನ ಕಲ್ಪಿಸಿಕೊಡಬೇಕು ಎಂದು ದಸಂಸ ಮುಖಂಡ ಬೆಳ್ಳಿಯಪ್ಪ ವಿಜಯವಾಣಿ ಜತೆಗೆ ಅಭಿಪ್ರಾಯ ಹಂಚಿಕೊಂಡರು.
ಸುಮಾರು 40 ವರ್ಷಗಳಿಂದಲೂ ಭೋವಿ ಸಮುದಾಯದವರು ಮೃತಪಟ್ಟರೇ ಹೂಳುತ್ತಿದ್ದ ಸ್ಮಶಾನಕ್ಕೆ ದೇವಾಂಗ ಸಮುದಾಯದವರು ಬೀಗ ಹಾಕಿದ್ದಾರೆ. ವರ್ಷದಿಂದಲೂ ನಮಗೆ ಸ್ಮಶಾನಕ್ಕೆ ಜಾಗವನ್ನು ಕೊಡಿ ಎಂದು ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಜಿಲ್ಲಾಡಳಿತ ಆದಷ್ಟು ಬೇಗ ನಮಗೆ ಸ್ಮಶಾನ ಜಾಗವನ್ನು ಗುರುತಿಸಿಕೊಡಬೇಕು.
-ರವಿ, ಭೋವಿ ಸಮುದಾಯ, 2ನೇ ವಾರ್ಡ್, ಚಾಮರಾಜನಗರ
ಈ ಹಿಂದೆ ಭೋವಿ ಸಮುದಾಯದವರು ಮೃತಪಟ್ಟ ಸಂದರ್ಭದಲ್ಲಿ ಉಂಟಾಗಿದ್ದ ಸಮಸ್ಯೆಯನ್ನು ಮನಗಂಡು, ಚಾಮರಾಜನಗರದ ಸರ್ವೇ ನಂ. 117 ರಲ್ಲಿ ಭೋವಿ ಸಮುದಾಯಕ್ಕೆ ಪ್ರತ್ಯೇಕವಾಗಿ ಸ್ಮಶಾನವನ್ನು ಗುರುತಿಸಲಾಗಿದೆ.
-ಗಿರಿಜಾ, ತಹಸೀಲ್ದಾರ್, ಚಾಮರಾಜನಗರ
ಜಿಲ್ಲೆಯಲ್ಲಿ ಹಲವಾರು ದಲಿತ ಸಮುದಾಯದವರಿಗೆ ಸ್ಮಶಾನವಿಲ್ಲದೇ ಯಾರಾದರೂ ಮೃತಪಟ್ಟ ಸಂದರ್ಭದಲ್ಲಿ ಸಮಸ್ಯೆ ಅನುಭವಿಸುವಂತಾಗಿದೆ. ಇರುವಾಗಲೂ ಅಸಮಾನತೆಯ ನೋವು ಅನುಭವಿಸುವ ನಾವು ಸತ್ತ ಮೇಲೂ ಇಂತಹ ಪರಿಸ್ಥಿತಿ ಎದುರಿಸಬೇಕಾಗಿದೆ. ಈಗಲಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ದಲಿತ ಸಮುದಾಯದವರಿಗೆ ಸ್ಮಶಾನಕ್ಕೆ ಜಾಗವನ್ನು ಗುರುತುಮಾಡಬೇಕು.
-ಬೆಳ್ಳಿಯಪ್ಪ, ಸಂಚಾಲಕ, ದಸಂಸ, ಚಾಮರಾಜನಗರ