ಹೆಚ್ಚೆಚ್ಚು ಗಿಡ ನೆಟ್ಟು ಪೋಷಣೆ ಮಾಡಿ: ಶಾಸಕ ಸ್ವರೂಪ್ ಸಲಹೆ

ಹೆಚ್ಚೆಚ್ಚು ಗಿಡ ನೆಟ್ಟು ಪೋಷಣೆ ಮಾಡಿ: ಶಾಸಕ ಸ್ವರೂಪ್ ಸಲಹೆ
Published on

ಹಾಸನ: ಉತ್ತಮ ಪರಿಸರಕ್ಕಾಗಿ ಮತ್ತು ಆರೋಗ್ಯಕ್ಕಾಗಿ ಹೆಚ್ಚೆಚ್ಚು ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಣೆ ಮಾಡಬೇಕು ಎಂದು ಶಾಸಕ ಎಚ್.ಪಿ. ಸ್ವರೂಪ್ ತಿಳಿಸಿದರು.

ನಗರದ ಮಹಾರಾಜ ಪಾರ್ಕ್ ಆವರಣದಲ್ಲಿರುವ ಭಾರತ ಸೇವಾದಳ ಕಚೇರಿ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ ಮತ್ತು ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕರು, ಎಲ್ಲರು ಅಣ್ಣ-ತಮ್ಮಂದಿರಂತೆ ಬಾಳವುದು ಭಾರತ ಸೇವಾದಳದ ಉದ್ದೇಶವಾಗಿದೆ. ಪರಿಸರ ದಿನದ ಅಂಗವಾಗಿ ಸೇವಾದಳದ ಎಲ್ಲ ಸದಸ್ಯರು ಗಿಡ ನೆಡುವ ಮೂಲಕ ಪರಿಸರದ ರಕ್ಷಣೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಮನುಷ್ಯನ ಸ್ವಾರ್ಥಕ್ಕೆ ಇಂದು ಗಿಡ- ಮರಗಳೆಲ್ಲಾ ನಾಶವಾಗುತ್ತಿವೆ. ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಂಚಾರ ಸಮಸ್ಯೆ ಜತೆಗೆ ವಾಯು ಮಾಲಿನ್ಯ ಹೆಚ್ಚಾಗುತ್ತಿದೆ. ಇದನ್ನು ತಡೆಯಬೇಕಾದರೆ ಹೆಚ್ಚು ಗಿಡಗಳ ನೆಟ್ಟು ಪೋಷಿಸಬೇಕು. ಹೊಗೆ ರಹಿತ ವಾಹನ ಬಳಕೆ ಮಾಡಬೇಕು. ನಮ್ಮ ಪರಿಸರ ಉಳಿಸಬೇಕಾದರೇ ವರ್ಷಪೂರ್ತಿ ನಾವುಗಳು ಗಿಡಗಳನ್ನು ನೆಡುತ್ತಲೇ ಇರಬೇಕು ಎಂದು ಕರೆ ನೀಡಿದರು.

ಭಾರತ ಸೇವಾದಳದ ಜಿಲ್ಲಾ ಅಧ್ಯಕ್ಷರಾದ ಎಂ.ಕೆ. ಕಮಲ್ ಕುಮಾರ್ ಮಾತನಾಡಿ, ಇಂದು ಜಾಗತಿಕ ತಾಪಮಾನ ವಿಪರೀತ ಹೆಚ್ಚಾಗುತ್ತಿದೆ. ಪರಿಸರದ ಮೇಲೆ ದೌರ್ಜನ್ಯ ನಡೆಯುತ್ತಿರುವ ಈ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮಗಳು ವರ್ಷಪೂರ್ತಿ ನಡೆಯಬೇಕು. ಮುಂದಿನ ದಿನಗಳಲ್ಲಿ ಈ ಪರಿಸರದ ಬಗ್ಗೆ ಶಾಲಾ-ಕಾಲೇಜುಗಳಲ್ಲಿ ಕಾರ್ಯಕ್ರಮವನ್ನು ವರ್ಷಪೂರ್ತಿ ಮಾಡಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಚನ್ನವೀರಪ್ಪ, ನಗರಸಭೆ ಆಯುಕ್ತರಾದ ಸತೀಶ್ ಕುಮಾರ್, ನಗರಸಭೆ ಮಾಜಿ ಉಪಾಧ್ಯಕ್ಷ ಇರ್ಷಾದ್ ಪಾಷ, ನಗರಸಭೆ ಸದಸ್ಯ ಮಂಜುನಾಥ್, ಚಂದ್ರೇಗೌಡ, ಮಹೇಶ್, ಸಿಟಿ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ವಾಸುದೇವ್, ಸಹಾಯಕ ಆಯುಕ್ತ ಆನಂದ್, ಭಾರತ ಸೇವಾದಳದ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಚನ್ನವೀರಪ್ಪ, ಸ್ವಾತಂತ್ರೃ ಹೋರಾಟಗಾರ ಎಚ್.ಎಂ. ಶಿವಣ್ಣ, ವಲಯ ಸಂಘಟಕರಾದ ವಿ.ಎಸ್. ರಾಣಿ, ಕುಮಾರ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net