

ಮೈಸೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಹೆಚ್ಚುವರಿ ಹುದ್ದೆಗಳನ್ನು ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿ ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾನ ಸಮಿತಿಯಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.
ಕೋರ್ಟ್ ಎದುರಿನ ಗಾಂಧಿ ಪುತ್ಥಳಿ ಬಳಿ ಜಮಾವಣೆಗೊಂಡ ಪ್ರತಿಭಟನಾಕಾರರು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. 7 ವರ್ಷಗಳ ಬಳಿಕ ಈ ನೇಮಕಾತಿ ನಡೆಯುತ್ತಿದೆ. ಆದರೆ, ಈ ಹಿಂದಿನಿಗಿಂತ ಕಡಿಮೆ ಹುದ್ದೆಗಳಿವೆ. ಅಭ್ಯರ್ಥಿಗಳ ಸಂಖ್ಯೆ ಅಧಿಕವಾಗಿದೆ. ಇದೀಗ ಫಲಿತಾಂಶ ಪ್ರಕಟಗೊಂಡು ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಮೆರಿಟ್ ಪಟ್ಟಿಯಲ್ಲಿ ಉತ್ತಮ ರ‌್ಯಾಂಕ್ ಹೊಂದಿದ್ದರೂ ಹುದ್ದೆ ದೊರೆಯುವುದು ಮರೀಚಿಕೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು
.
2015ರ ನೇಮಕಾತಿಯಲ್ಲಿ 2160 (ನಂತರ 800 ಹುದ್ದೆಗಳನ್ನು ಸೇರಿಸಲಾಗಿತ್ತು) ಹುದ್ದೆಗಳಿಗೆ 16,952 ಅಭ್ಯರ್ಥಿಗಳಿದ್ದರು. ಈಗ 1242 ಹುದ್ದೆಗಳಿಗೆ 33,339 ಅಭ್ಯರ್ಥಿಗಳಿದ್ದಾರೆ. ಹೆಚ್ಚಿನ ಅಂಕ ಗಳಿಸಿದರೂ ಹುದ್ದೆ ಸಿಗುವುದಿಲ್ಲ. ಈ ನೇಮಕಾತಿಯಲ್ಲಿ ವಯೋಮಿತಿ ಮೀರುವ ಅಭ್ಯರ್ಥಿಗಳು ಮುಂದಿನ ಪರೀಕ್ಷೆಗಳಿಗೆ ಅರ್ಹರಾಗಿರುವುದಿಲ್ಲ. ಈ ವಿಷಯದಲ್ಲಿ ನ್ಯಾಯ ಕಲ್ಪಿಸಿಕೊಡಬೇಕು. ಖಾಲಿ ಇರುವ ಹುದ್ದೆಗಳನ್ನೂ ನೇಮಕಾತಿಗೆ ಹೆಚ್ಚುವರಿಯಾಗಿ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿದರು.
ಸಮಿತಿಯ ಎಂ.ಚಂದ್ರಶೇಖರ್, ಜಾಕೀರ್ ಹುಸೇನ್, ಪ್ರಶಾಂತ್ ಆರ್ಯ, ಕಮಲಾ ಅನಂತರಾಮ್, ರದಿವುಲ್ಲ, ಪಿ.ರಾಜು, ಎ.ಆರ್.ಕಾಂತರಾಜು ಇನ್ನಿತರರು ಪಾಲ್ಗೊಂಡಿದ್ದರು