ಹೆಚ್ಚುವರಿ ವೆಂಟಿಲೇಟರ್, ಆಕ್ಸಿಜನ್ ಬೆಡ್‌ಗಳ ವ್ಯವಸ್ಥೆಗೆ ಸಚಿವ ಸುಧಾಕರ್ ಸೂಚನೆ

12cmy8
Published on

ಚಿಂತಾಮಣಿ:  ಸಿಬ್ಬಂದಿ ಕೊರತೆ ನೀಗಿಸಲು 780 ಮಂದಿಯನ್ನು ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು ಆದ್ಯತೆ ಮೇಲೆ ಆಸ್ಪತ್ರೆಗಳಿಗೆ ನಿಯೋಜಿಸಲಾಗುವುದು ಎಂದು ಆರೋಗ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ.ಸುಧಾಕರ್ ಹೇಳಿದರು.

ನಗರದ ಸಾರ್ವಜನಿಕ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಆಸ್ಪತ್ರೆಯಲ್ಲಿ ಹಾಲಿ ಇರುವ 50 ಆಕ್ಸಿಜನ್ ಹಾಸಿಗೆಗಳ ಜತೆಗೆ ಒಟ್ಟು 100 ಹಾಸಿಗೆಗಳ ಆಕ್ಸಿಜನ್ ಒದಗಿಸುವುದರ ಜತೆಗೆ ಹೆಚ್ಚುವರಿಯಾಗಿ 10 ಸಿಲೆಂಡರ್ ಮತ್ತೆ 3 ವೆಂಟಿಲೇಟರ್ ವ್ಯವಸ್ಥೆ ಮಾಡಲಾಗುವುದು ಹಾಗೂ ಅದಕ್ಕನುಗುಣವಾಗಿ ಸಿಬ್ಬಂದಿ ನಿಯೋಜಿಸುವುದಾಗಿ ತಿಳಿಸಿದರು.

ಜಿಲ್ಲೆಯಲ್ಲಿ ಆಂಬುಲೆನ್ಸ್‌ಗಳ ಕೊರತೆಯಾಗದಂತೆ ಈಗಿರುವ 16 ಆಂಬುಲೆನ್ಸ್‌ಗಳ ಜತೆಗೆ ಇನ್ನು 15 ಆಂಬುಲೆನ್ಸ್ ಖರೀದಿಸಲು ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ. ಪ್ರತಿ ತಾಲೂಕಿನಲ್ಲಿ 5-6 ಆಂಬುಲೆನ್ಸ್‌ಗಳು ಇರುವಂತೆ ನೋಡಿಕೊಳ್ಳುವಂತೆ ಸೂಚನೆ ನೀಡಿದರು.ಚಿಂತಾಮಣಿಯಲ್ಲಿ ಆಕ್ಸಿಜನ್ ಪ್ಲಾಂಟ್ ಸ್ಥಾಪನೆ ಮಾಡಲು ಮಂಜೂರಾತಿ ನೀಡಿರುವುದಾಗಿ ತಿಳಿಸಿದ ಸಚಿವರು, ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಆಕ್ಸಿಜನ್ ಪ್ಲಾಂಟ್ ಇರುವಂತೆ ನೋಡಿಕೊಳ್ಳುವುದಾಗಿ ಅಭಯವಿತ್ತರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್, ಜಿಪಂ ಸಿಇಒ ಶಿವಕುಮಾರ್, ಉಪವಿಭಾಗಾಧಿಕಾರಿ ರಘುನಂದನ್, ತಹಸೀಲ್ದಾರ್ ಹನುಮಂತರಾಯಪ್ಪ, ತಾಪಂ ಇಒ ಮಂಜುನಾಥ್, ಡಿವೈಎಸ್ಪಿ ಲಕ್ಷ್ಮಯ್ಯ ಮತ್ತಿತರರಿದ್ದರು.

ಅಸ್ಕರ್ ಆಸ್ಪತ್ರೆಯಲ್ಲಿ 112 ಬೆಡ್ : ಚಿಕ್ಕಬಳ್ಳಾಪುರ ಜಿಲ್ಲೆಯ ಸೋಂಕಿತರಿಗೆ ಬೆಂಗಳೂರಿನ ಮೂರು ಆಸ್ಪತ್ರೆಗಳಲ್ಲಿ ಸರ್ಕಾರಿ ಕೋಟಾದಲ್ಲಿ ಶೇ.15 ಬೆಡ್‌ಗಳನ್ನು ಮೀಸಲಿರಿಸಲಾಗಿತ್ತು, ಆದರೆ ತಾಂತ್ರಿಕದೋಷದಿಂದ ಸಮಸ್ಯೆಯಾಗಿದ್ದು ಈಗ ಅಸ್ಕರ್ ಆಸ್ಪತ್ರೆಯೊಂದರಲ್ಲೇ ಆಕ್ಸಿಜನ್ 112 ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನತೆಗೆ ಎಂವಿಜೆ ಮತ್ತು ಆಕಾಶ್ ವೈದ್ಯಕೀಯ ಆಸ್ಪತ್ರೆಗಳಲ್ಲಿ ದ್ವಿತೀಯ ಚಿಕಿತ್ಸೆಗೆ ಅವಕಾಶ ಮಾಡಲಾಗಿದೆ ಎಂದು ತಿಳಿಸಿದರು.

ಖಾಸಗಿ ಸಹಕಾರದಲ್ಲಿ ಆಕ್ಸಿಜನ್ ಪ್ಲಾಂಟ್:  ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಾಗದಂತೆ ಹೆಚ್ಚುವರಿ ಸಿಲಿಂಡರ್‌ಗಳನ್ನು ತರಲು ಪ್ರಯತ್ನಿಸಲಾಗುತ್ತಿದೆ. ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಆಕ್ಸಿಜನ್ ಘಟಕ ಹಾಗೂ ಆಕ್ಸಿಜನ್ ಜನರೇಟರ್‌ಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ಸಿಎಸ್‌ಆರ್ ಅನುದಾನದಲ್ಲಿ ಜಿಲ್ಲಾಕೇಂದ್ರದಲ್ಲಿ, ಎಸಿಸಿ ಕಂಪನಿ ವತಿಯಿಂದ ಗೌರಿಬಿದನೂರಿನಲ್ಲಿ, ಟೈಟಾನ್ ಕಂಪನಿ ವತಿಯಿಂದ ಬಾಗೇಪಲ್ಲಿಯಲ್ಲಿ ಆಕ್ಸಿಜನ್ ಪ್ಲಾಂಟ್ ಸ್ಥಾಪಿಸಲಾಗುತ್ತಿದ್ದು, ಶಿಡ್ಲಘಟ್ಟಕ್ಕಾಗಿ ಯಾವುದಾದರೊಂದು ಸಂಸ್ಥೆಯ ಸಹಕಾರ ಪಡೆಯಲಾಗುವುದು ಎಂದು ಸಚಿವರು ತಿಳಿಸಿದರು.

ನೆಪ ಹೇಳದೆ ವೆಂಟಿಲೇಟರ್ ಅಳವಡಿಸಿ: ತಾಲೂಕುಮಟ್ಟದಲ್ಲಿಯೇ ವೆಂಟಿಲೇಟರ್‌ಗಳು ಇರಬೇಕೆನ್ನುವುದು ನಮ್ಮ ಉದ್ದೇಶ. ಆದರೆ ಕಳೆದ ವರ್ಷ ನೀಡಿರುವ 6 ವೆಂಟಿಲೇಟರ್‌ಗಳನ್ನೇ ಇನ್ನೂ ಅಳವಡಿಸಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ ಸಚಿವ ಡಾ.ಸುಧಾಕರ್, ಸಿಬ್ಬಂದಿ ಕೊರತೆ ನೆಪ ಹೇಳದೆ ಶೀಘ್ರವೇ ಅಳವಡಿಸುವಂತೆ ಆರೋಗ್ಯಾಧಿಕಾರಿಗಳಿಗೆ ತಾಕೀತು ಮಾಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಆರೋಗ್ಯ ಇಲಾಖೆ ಸಿಬ್ಬಂದಿಯೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ, ನಮ್ಮಲ್ಲಿ ವೆಂಟಿಲೇಟರ್‌ಗಳ ಕೊರತೆಯಿಲ್ಲ. ಆದರೆ ವೈದ್ಯರು ಮತ್ತು ತಾಂತ್ರಿಕ ಸಿಬ್ಬಂದಿ ಇಲ್ಲ, ಶೀಘ್ರದಲ್ಲೇ ಸಿಬ್ಬಂದಿಯನ್ನು ನೇರ ನೇಮಕಾತಿ ಮಾಡಿಕೊಂಡು ಸೂಕ್ತ ಸ್ಥಳಗಳಿಗೆ ನಿಯೋಜನೆ ಮಾಡಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net