ಹೆಚ್ಚುವರಿ ವಿದ್ಯುತ್ ಸರಬರಾಜಿಗೆ ಅನುಮತಿ

Published on

ಬೇಲೂರು: ತಾಲೂಕಿನ ಮಲೆನಾಡು ಭಾಗದ ಸಾಕಷ್ಟು ಗ್ರಾಮಗಳಲ್ಲಿದ್ದ ವಿದ್ಯುತ್ ಅಭಾವವನ್ನು ನೀಗಿಸುವ ನಿಟ್ಟಿನಲ್ಲಿ ಗೆಂಡೇಹಳ್ಳಿಯಲ್ಲಿ 6.22 ಕೋಟಿ ರೂ. ವೆಚ್ಚದಲ್ಲಿ 66/11 ಕೆವಿ ಎಂಯುಎಸ್‌ಎಸ್ ಮೂಲಕ ಹೆಚ್ಚುವರಿಯಾಗಿ ವಿದ್ಯುತ್ ಸರಬರಾಜು ಮಾಡಲು ಸರ್ಕಾರ ಮಂಜೂರು ನೀಡಿದೆ ಎಂದು ಮಾಜಿ ಸಚಿವ ಬಿ.ಶಿವರಾಮ್ ಹೇಳಿದರು.

ತಾಲೂಕಿನ ಗೆಂಡೆಹಳ್ಳಿ ಭಾಗದಲ್ಲಿ ನಿರಂತರವಾದ ವಿದ್ಯುತ್ ಅಭಾವವಿದೆ. ಇದನ್ನು ಸರಿಪಡಿಸುವಲ್ಲಿ ಹಿಂದಿನ ಜನಪ್ರತಿನಿಧಿಗಳು ವಿಫಲರಾಗಿದ್ದರು. ಆದರೆ, ಈ ಹಿಂದೆ ಸಬ್ ಸ್ಟೇಷನ್‌ನಿಂದ 8000 ಸಾವಿರ ಗ್ರಾಹಕರಿಗೆ ವಿದ್ಯುತ್ ಪೂರೈಸುವ ಸಾಮರ್ಥ್ಯ ಇತ್ತು. ಮಳೆಗಾಲದಲ್ಲಿ ದಿನಕ್ಕೆ ಎರಡು ಗಂಟೆ ವಿದ್ಯುತ್ ನೀಡಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಗಮನಿಸಿ ಸರ್ಕಾರದ ಮಟ್ಟದಲ್ಲಿ ಉನ್ನತ ಅಧಿಕಾರಿಗಳು ಮತ್ತು ಮಂತ್ರಿಗಳೊಂದಿಗೆ ಚರ್ಚಿಸಿ 15,000 ಗ್ರಾಹಕರಿಗೆ ವಿದ್ಯುತ್ ಪೂರೈಸುವ ಸಾಮರ್ಥ್ಯದ ಸ್ಟೇಷನ್‌ಗೆ ಅನುಮೋದನೆ ದೊರೆತಿದೆ. ಇದರಿಂದ ಗೆಂಡೆಹಳ್ಳಿ, ತೋಳಲು, ಚೀಕನಹಳ್ಳಿ, ನಾಗೇನಹಳ್ಳಿ ಸೇರಿದಂತೆ ಇತರೆ ಭಾಗಗಳ ಸಮಸ್ಯೆ ಬಗೆಹರಿಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಎತ್ತಿನಹೊಳೆ ಯೋಜನೆಯಡಿ 5 ಕೋಟಿ ರೂ. ರಸ್ತೆ ಅಭಿವೃದ್ಧಿಗಾಗಿ ಹಣ ಬಿಡುಗಡೆಯಾಗಿದೆ. ತಾಲೂಕಿನ ಗಂಗೂರು, ಹನಿಕೆ, ಬಿಕ್ಕೋಡು ಸೇರಿದಂತೆ ಕೆಲ ಭಾಗಗಳಲ್ಲಿ ಸಬ್ ಸ್ಟೇಷನ್ ತೆರೆಯುವ ಅವಕಾಶವಿದ್ದು ಜಾಗದ ಕೊರತೆ ಇದ್ದು ಸದ್ಯದಲ್ಲೇ ಸಮಸ್ಯೆ ಭಗೆಹರಿಯಲಿದೆ ಎಂದರು.

ಕಾಂಗ್ರೆಸ್ ಕಸಬಾ ಹೋಬಳಿ ಅಧ್ಯಕ್ಷ ಗೆಂಡೆಹಳ್ಳಿ ಶ್ರೀನಿವಾಸ್, ಕಿಸಾನ್ ಘಟಕದ ಉಪಾಧ್ಯಕ್ಷ ಮಲ್ಲೇಶ್, ಪುರಸಭೆ ಮಾಜಿ ಸದಸ್ಯ ಜುಬೆರ್ ಅಹಮದ್ ಇದ್ದರು.

ನಾವೇ ನೈತಿಕ ಹೊಣೆ ಹೊರಬೇಕಾಗುತ್ತದೆ: ಪುರಸಭೆ ಅಧ್ಯಕ್ಷರ ವಿಚಾರದಲ್ಲಿ ವಿಪ್ ಜಾರಿಯಾಗಿದ್ದು, ಅವಿಶ್ವಾಸ ನಿರ್ಣಯದ ಸಂದರ್ಭ ಅವಿಶ್ವಾಸವಾಗದಿದ್ದರೆ ನಾವೇ ನೈತಿಕ ಹೊಣೆ ಹೊರಬೇಕಾಗುತ್ತದೆ. ಪಕ್ಷದ ನಾಯಕರ ಹಾಗೂ ಸದಸ್ಯರ ಅಭಿಪ್ರಾಯ ಪಡೆಯದೆ ವಿರೋಧ ಪಕ್ಷದವರ ಮಾತು ಕೇಳುತ್ತಿದ್ದಾರೆ. ಮಾತಿನಂತೆ ಐದೂವರೆ ತಿಂಗಳ ಅವಧಿಗೆಂದು ಪತ್ರಕ್ಕೆ ಸಹಿ ಹಾಕಿದ್ದ ಅಶೋಕ್ ರಾಜೀನಾಮೆ ಕೇಳಿದ ತಕ್ಷಣದಿಂದ ಉಲ್ಟಾ ಹೊಡೆಯುತ್ತಿದ್ದಾರೆ.

ಹನುಮಂತನಗರದಲ್ಲಿ ಯಾರಿಗೋ ರಸ್ತೆ ಮಾಡಿಕೊಡಲು ಹೋಗಿ ಮನೆ ಒಡೆದು ಹಾಕಿದರು. ಅದನ್ನು ನಾವು ಕೇಳಿದ್ದು ತಪ್ಪಾ? ನಮ್ಮ ಪಕ್ಷ ಯಾರಿಗೂ ಅನ್ಯಾಯ ಮಾಡುವುದನ್ನು ಸಹಿಸಲ್ಲ. ಸಾರ್ವಜನಿಕ ವಲಯದಲ್ಲಿ ಬೇರೆ ರೀತಿಯ ಚರ್ಚೆ ನಡೆಯುತ್ತಿದೆ. ಅದಕ್ಕೆ ವಿರೋಧ ಪಕ್ಷವೇ ಕಾರಣ. ನಾನು ಯಾವುದೇ ವರ್ಗಾವಣೆ ದಂಧೆಯಲ್ಲಿ ಭಾಗಿಯಾಗಿಲ್ಲ. ಸಾಕ್ಷಿ ಇದ್ದರೆ ಇಡಲಿ ಎಂದರು.

ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಶಾಂತ್ ಮಾತನಾಡಿ, ಕೆಪಿಸಿಸಿ ಅಧ್ಯಕ್ಷರ ಆದೇಶದ ಮೇರೆಗೆ ನಮ್ಮ ಪಕ್ಷದ ಪುರಸಭೆ ಸದಸ್ಯರಿಗೆ ಅವಿಶ್ವಾಸ ನಿರ್ಣಯದ ಪರ ಮತ ಚಲಾಯಿಸುವಂತೆ ವಿಪ್ ಜಾರಿ ಮಾಡಲಾಗಿದೆ. ವಿಪ್ ಉಲ್ಲಂಘಿಸಿದ ಸದಸ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net