

ಆಲೂರು: ತಾಲೂಕಿನಲ್ಲಿ ಹೆಚ್ಚುವರಿ ವಿದ್ಯುತ್ ವಿತರಣಾ ಘಟಕ ನಿರ್ಮಿಸುವಂತೆ ಒತ್ತಾಯಿಸಿ ಬಿಜೆಪಿ ರೈತ ಮೋರ್ಚಾ ಹಾಗೂ ವಿದ್ಯುತ್ ಗುತ್ತಿಗೆದಾರ ಸಂಘದ ವತಿಯಿಂದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಆಲೂರು ಶಾಖೆ ಮುಂಭಾಗ ಮಂಗಳವಾರ ಪ್ರತಿಭಟನೆ ನಡಸಲಾಯಿತು.
ಆಲೂರು-ಕಟ್ಟಾಯ ಮಂಡಲದ ಬಿಜೆಪಿ ಅಧ್ಯಕ್ಷ ನಾಗರಾಜ್ ಹುಲ್ಲಹಳ್ಳಿ ಮಾತನಾಡಿ, ತಾಲೂಕಿನಲ್ಲಿ ವಿದ್ಯುತ್ ವಿತರಣಾ ಘಟಕ ನಿರ್ಮಾಣಕ್ಕೆ ರೈತರು ನೀಡಿರುವ ಜಾಗಕ್ಕೆ ಸರಿಯಾದ ದರ ನೀಡಲು ಆಗದೆ ಹಾಗೂ ಸರ್ಕಾರಿ ಜಾಗ ನೀಡುವಲ್ಲಿಯೂ ವಿಫಲವಾಗಿದೆ ಎಂದು ದೂರಿದರು.
ಕುಮಾರಸ್ವಾಮಿ ಮೂರು ಬಾರಿ ಶಾಸಕರಾಗಿದ್ದರೂ ಕ್ಷೇತ್ರದಲ್ಲಿನ ವಿದ್ಯುತ್ ಸಮಸ್ಯೆ ಬಗೆಹರಿಸಲು ಸಂಪೂರ್ಣ ವಿಫಲರಾಗಿದ್ದಾರೆ. ತಾಲೂಕಿನಲ್ಲಿ ಮಗ್ಗೆ ಗ್ರಾಮದಲ್ಲಿ ಒಂದೇ ಒಂದು ವಿದ್ಯುತ್ ವಿತರಣಾ ಘಟಕವಿದ್ದು, ಬೇಸಿಗೆಯಲ್ಲಿ ರೈತರು ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ. ಅದರೂ ಶಾಸಕರು ಇದುವರೆವಿಗೂ ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ವಿಧಾನ ಸಭೆಯಲ್ಲಿ ಇದುವರೆಗೂ ಪ್ರಶ್ನಿಸಿಲ್ಲ. ತಕ್ಷಣ ಕ್ರಮ ತಗೆದುಕೊಂಡು ತ್ವರಿತವಾಗಿ ಪರಿಹಾರ ನೀಡಲು ಮುಂದಾಗಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ನಾಗರಾಜ್ ಕಟ್ಟೆಪುರ ಮಾತನಾಡಿ, ತಾಲೂಕಿನಾದ್ಯಂತ ನಾಲ್ಕು ಹೋಬಳಿಗಳಿವೆ. ಆದರೆ ಕೇವಲ ಒಂದು ವಿದ್ಯುತ್ ವಿತರಣಾ ಘಟಕ ಇದೆ. ವಿದ್ಯುತ್ ಅಭಾವದಿಂದ ರೈತರು ಸಂಕಷ್ಟಕ್ಕೆ ಸಿಲುಕಿ ಅಪಾರ ನಷ್ಟ ಅನುಭವಿಸುತ್ತಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಪಟ್ಟಣ ಪಂಚಾಯತಿ ನಾಮ ನಿರ್ದೇಶನ ಸದಸ್ಯ ರಮೇಶ್, ಕ್ಯಾಂಟೀನ್ ನಾಗರಾಜ್, ಬಿಜೆಪಿ ರೈತ ಮೋರ್ಚಾದ ಮುಖಂಡರಾದ ಮಹೇಶ್, ಸಂಜು, ವಿನಯ್ ಇದ್ದರು.