ಹೆಚ್ಚುವರಿ ಬಸ್ ಸೇವೆಗೆ ಶಾಸಕ ಹರೀಶ್‌ಗೌಡ ಚಾಲನೆ

HUN-AUG-7-3{ KSRTC BUS SERVICE}
ಹುಣಸೂರು ನಗರದ ಬಸ್‌ನಿಲ್ದಾಣದಲ್ಲಿ ಹೆಚ್ಚುವರಿ ಬಸ್‌ಗಳ ಸೇವೆಗೆ ಶಾಸಕ ಜಿ.ಡಿ.ಹರೀಶ್ ಗೌಡ ಚಾಲನೆ ನೀಡಿದರು. ಡಿಪೋ ಮ್ಯಾನೇಜರ್ ಸುಬ್ರಮಣ್ಯ, ರಾಜೇಶ್ವರಿ, ಬಾಲಸುಬ್ರಮಣ್ಯ ಇತರರು ಇದ್ದರು.
Published on

ಹುಣಸೂರು: ತಾಲೂಕಿನ ಗಡಿಗ್ರಾಮ ಹನುಮಂತಪುರ ಹಾಗೂ ಇತರ ಕಡೆಗೆ ಹೆಚ್ಚುವರಿಯಾಗಿ ನಾಲ್ಕು ಬಸ್‌ಗಳ ಸಂಚಾರಕ್ಕೆ ಶಾಸಕ ಜಿ.ಡಿ.ಹರೀಶ್‌ಗೌಡ ಸೋಮವಾರ ನಗರದ ಬಸ್‌ನಿಲ್ದಾಣದಲ್ಲಿ ಚಾಲನೆ ನೀಡಿದರು.

ರಾಜ್ಯ ಸರ್ಕಾರದ ‘ಶಕ್ತಿ’ ಗ್ಯಾರಂಟಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಸೇವೆಯಿಂದಾಗಿ ಗ್ರಾಮೀಣ ವಿದ್ಯಾರ್ಥಿಗಳು ಸಕಾಲಕ್ಕೆ ಶಾಲೆ, ಕಾಲೇಜಿಗೆ ತಲುಪಲಾಗುತ್ತಿಲ್ಲ ಎಂಬ ದೂರು ಕೇಳಿಬಂದಿದ್ದವು. ಈ ಸಮಸ್ಯೆಗೆ ಪರಿಹಾರವಾಗಿ ಹೆಚ್ಚುವರಿಯಾಗಿ ನಾಲ್ಕು ಬಸ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಅದರಲ್ಲೂ ನಾನು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹುಣಸೂರು-ಎಚ್.ಡಿ.ಕೋಟೆ ಗಡಿಯಲ್ಲಿರುವ ಕೊನೆಯ ಗ್ರಾಮ ಹನುಮಂತಪುರಕ್ಕೆ ತೆರಳಿದ್ದ ವೇಳೆ ಅಲ್ಲಿನ ಜನರು ದಶಕಗಳಿಂದ ಬಸ್ ಬರುತ್ತಿಲ್ಲ, 5-6 ಕಿ.ಮೀ.ನಡೆದುಕೊಂಡು ಗೇಟ್‌ಗೆ ಹೋಗಬೇಕಿದೆ ಎಂದು ಅವಲತ್ತುಕೊಂಡಿದ್ದರು. ಇಂದು ಆ ಗ್ರಾಮಕ್ಕೂ ಬಸ್‌ಸೇವೆ ನೀಡುತ್ತಿರುವುದು ನನಗೆ ಸಮಾಧಾನ ತಂದಿದೆ ಎಂದರು.

ಗ್ರಾಮಾಂತರ ಭಾಗಗಳಾದ ಹೊಸೂರು ಗೇಟ್, ನಲ್ಲೂರು ಪಾಲ, ಗುರುಪುರ, ಗೋವಿಂದನಹಳ್ಳಿ ಗ್ರಾಮಗಳಿಂದ ಎಚ್.ಡಿ.ಕೋಟೆಗೆ ಸಂಚರಿಸುವ ಬಸ್ ಕಡ್ಡಾಯವಾಗಿ ಆಯಾ ಗ್ರಾಮಗಳಲ್ಲಿ ನಿಲ್ಲಿಸಲು ಕ್ರಮವಹಿಸಲಾಗಿದೆ. ಮಾಕೋಡು, ಕಟ್ಟೆಮಳಲವಾಡಿ, ಬನ್ನಿಕುಪ್ಪೆ, ಮಾದಹಳ್ಳಿ, ಹಿರಿಕ್ಯಾತನಹಳ್ಳಿ, ಹರವೆ, ಮರೂರು ಮತ್ತು ಗಾವಡಗೆರೆ ಮಾರ್ಗದಲ್ಲಿ ಬಸ್ ಸಮಸ್ಯೆ ಇದ್ದು, ಅತಿ ಶೀಘ್ರದಲ್ಲೇ ಸಮಸ್ಯೆ ಬಗೆಹರಿಯಲಿದೆ ಎಂದರು.

ನಗರ ಬಸ್ ಡಿಪೋ ವ್ಯವಸ್ಥಾಪಕ ಸುಬ್ರಹ್ಮಣ್ಯ ಮಾತನಾಡಿ, ಹುಣಸೂರು ಡಿಪೋದಲ್ಲಿ 104 ಬಸ್ ಇದ್ದು, ಎಲ್ಲವೂ ಸುವ್ಯವಸ್ಥೆಯಲ್ಲಿವೆ. 3 ಅಂತಾರಾಜ್ಯ ಮಾರ್ಗದೊಂದಿಗೆ ತಾಲೂಕಿನ ಎಲ್ಲ ಗ್ರಾಮಗಳಿಗೂ ಬಸ್ ವ್ಯವಸ್ಥೆ ಕಲ್ಪಿಸಿದ್ದೇವೆ. ರಾಜ್ಯ ಸರ್ಕಾರದ ಉಚಿತ ಬಸ್ ಪ್ರಯಾಣದಿಂದ ಶೇ. 30ರಷ್ಟು ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಉಚಿತ ಬಸ್ ಪ್ರಯಾಣ ಜಾರಿಗೂ ಮುನ್ನ 12.5 ಲಕ್ಷ ಜನರು ಪ್ರಯಾಣಿಸಿದ್ದರು. ಇದೀಗ ಅದು 16 ಲಕ್ಷಕ್ಕೆ ಮುಟ್ಟಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖಂಡ ಹೊನ್ನಪ್ಪರಾವ್ ಕಾಳಿಂಗೆ, ಕೆಎಸ್‌ಆರ್‌ಟಿಸಿಯ ಎಟಿಎಸ್ ರಾಜೇಶ್ವರಿ, ಮೇಲ್ವಿಚಾರಕ ಬಾಲಸುಬ್ರಮಣ್ಯ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net