ಹೆಚ್ಚುತ್ತಿರುವ ಚಿರತೆ ಹಾವಳಿ : ಮೈಸೂರಿನಲ್ಲಿ ‘ಲೆಪರ್ಡ್ ಟಾಸ್ಕ್ ಫೋರ್ಸ್’ ರಚನೆ

Leapord
Published on

ಮೈಸೂರು: ಚಿರತೆ ಹಾವಳಿ ನಿಯಂತ್ರಿಸಲು ಮೈಸೂರು ಅರಣ್ಯ ವೃತ್ತದ ವ್ಯಾಪ್ತಿಯಲ್ಲಿ ನೂತನ ‘ಲೆಪರ್ಡ್ ಟಾಸ್ಕ್ ಫೋರ್ಸ್’ ಅಸ್ತಿತ್ವಕ್ಕೆ ಬಂದಿದ್ದು, ಇನ್ನು ಮುಂದೆ ಚಿರತೆ ಹಾವಳಿ ಕಂಡುಬರುವ ಗ್ರಾಮಗಳಲ್ಲಿ ಟಾಸ್ಕ್ ಫೋರ್ಸ್ ತಂಡದಿಂದ ತುರ್ತು ಸ್ಪಂದನೆ ದೊರೆಯಲಿದೆ.

ಚಿರತೆ ಸೆರೆ ಕಾರ್ಯಾಚರಣೆಗೆ ಮುಖ್ಯವಾಗಿ ಸಿಬ್ಬಂದಿ ಹಾಗೂ ಅಗತ್ಯ ಉಪಕರಣಗಳ ಕೊರತೆ ಕಂಡು ಬರುತಿತ್ತು. ಈ ಹಿನ್ನೆಲೆಯಲ್ಲಿ ಟಾಸ್ಕ್ ಫೋರ್ಸ್ ರಚಿಸಬೇಕು ಎಂಬ ಜಿಲ್ಲೆಯ ಅರಣ್ಯ ಇಲಾಖೆಯ ಅಧಿಕಾರಿಗಳ ಕೋರಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಿದ್ದು, ಮಂಗಳವಾರ ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಗೀತಾ ಎಂ. ಪಾಟೀಲ ಆದೇಶ ಟಾಸ್ಕ್ ಫೋರ್ಸ್ ರಚಿಸಿ ಹೊರಡಿಸಿದರು.

ಮೈಸೂರು ಅರಣ್ಯ ವೃತ್ತದ ಮೈಸೂರು, ನಂಜನಗೂಡು, ಎಚ್.ಡಿ. ಕೋಟೆ, ಸರಗೂರು, ತಿ.ನರಸೀಪುರ, ಮಂಡ್ಯ, ಪಾಂಡವಪುರ, ನಾಗಮಂಗಲ ವ್ಯಾಪ್ತಿಯಲ್ಲಿ ಚಿರತೆ ಹಾವಳಿ ಹೆಚ್ಚಾಗಿ ಕಂಡು ಬಂದಿರುವ ಹಿನ್ನೆಲೆಯಲ್ಲಿ ಮೈಸೂರು ಅರಣ್ಯ ವೃತ್ತಕ್ಕೆ ಸೀಮಿತವಾಗಿ ಟಾಸ್ಕ್ ಫೋರ್ಸ್ ರಚಿಸಲಾಗಿದೆ.

ಟಾಸ್ಕ್ ಫೋರ್ಸ್ ಮೈಸೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಅವರ ನೇತೃತ್ವ ಹಾಗೂ ನಿರ್ದೇಶನದಡಿ ಕಾರ್ಯನಿರ್ವಹಿಸಲಿದೆ. ಈ ಟಾಸ್ಕ್ ಫೋರ್ಸ್ ಅಡಿಯಲ್ಲಿ ಉಪ ವಲಯ ಅರಣ್ಯಾಧಿಕಾರಿ ನೇತೃತ್ವದಲ್ಲಿ 4 ತಂಡಗಳನ್ನು ರಚಿಸಲಾಗುವುದು. ಪ್ರತಿ ತಂಡದಲ್ಲಿ ಇಬ್ಬರು ಗಸ್ತು ಅರಣ್ಯ ಪಾಲಕರು, ಒಬ್ಬರು ವಾಹನ ಚಾಲಕ, 10 ಹೊರಗುತ್ತಿಗೆ ನೌಕರರು ಇರುತ್ತಾರೆ.

ಪ್ರತಿ ತಂಡ ಚಿರತೆ ಹಾವಳಿ ಇರುವ ಗ್ರಾಮಗಳಲ್ಲಿ ಗಸ್ತು ತಿರುಗುವುದು, ಜನವಸತಿ ಪ್ರದೇಶಗಳಲ್ಲಿ ಅದರಲ್ಲೂ ಪ್ರಮುಖವಾಗಿ ಕಬ್ಬು ಬೆಳೆ ಇರುವ ಕೃಷಿ ಪ್ರದೇಶದಲ್ಲಿ ಚಿರತೆಗಳ ಹಾವಳಿ ಇರುವಿಕೆಯನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳಲಿದೆ. ಟಾಸ್ಕ್ ಫೋರ್ಸ್‌ನ ನಿಯಂತ್ರಣ ಕೊಠಡಿಯನ್ನು ಮೈಸೂರು ಅರಣ್ಯ ಭವನದಲ್ಲಿ ತೆರೆಯಲಾಗುವುದು. ಈ ನಿಯಂತ್ರಣ ಕೊಠಡಿ ದಿನದ 24 ಗಂಟೆ ಕಾರ್ಯನಿರ್ವಹಿಸಲಿದೆ.

ಟಾಸ್ಕ್ ಫೋರ್ಸ್‌ಗೆ ಅಗತ್ಯವಿರುವ ಸರ್ಚ್ ಲೈಟ್, ಸಾರ್ವಜನಿಕರಿಗೆ ಮಾಹಿತಿ ನೀಡಲು ಧ್ವನಿವರ್ಧಕ, 5 ವಾಹನಗಳನ್ನು ಒದಗಿಸಲಾಗುವುದು. ಈ ಟಾಸ್ಕ್ ಫೋರ್ಸ್ ತಂಡದ ಮುಖ್ಯಸ್ಥರು ಜಿಲ್ಲಾಡಳಿತದೊಂದಿಗೆ ಸಮನ್ವಯ ಸಾಧಿಸಿ ಅವಶ್ಯವಿರುವ ಅಗತ್ಯ ಸಹಾಯ ಪಡೆಯಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net