

ಸೋಮು ಲದ್ದಿಮಠ, ರೋಣ
ತಾಲೂಕಿನಾದ್ಯಂತ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಜನರು ಡೆಂಘೆ, ಚಿಕೂನ್ಗುನ್ಯಾದಂತಹ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ತಾಲೂಕು ಆಸ್ಪತ್ರೆ ಸೇರಿದಂತೆ ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ.
ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸದ ಕಾರಣ ಮಳೆಗಾಲದಲ್ಲಿ ಕೊಳಚೆ ನೀರು ರಸ್ತೆಗಳ ಮೇಲೆ ಹರಿಯುತ್ತಿದೆ. ಇದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿ ಸಾಂಕ್ರಾಮಿಕ ಕಾಯಿಲೆಗಳು ಬಾಧಿಸುತ್ತಿವೆ.
ರೋಣ ಪಟ್ಟಣದ ಸಂತೆ ಮಾರುಕಟ್ಟೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಂಜುಮನ್ ಪ್ರೌಢ ಶಾಲೆ, ನೀರಾವರಿ ಇಲಾಖೆಯ ವಸತಿ ಗೃಹಗಳ ಸುತ್ತ ಹಾಗೂ ಕಲ್ಯಾಣ ನಗರದಲ್ಲಿರುವ ಚೆನ್ನದಾಸರ ಗುಡಿಸಲುಗಳ ಸುತ್ತಲೂ ನೀರು ನಿಂತಿದ್ದು, ಸಂಚಾರಕ್ಕೆ ಅಡ್ಡಿಯಾಗಿದೆ. ಈ ಭಾಗದಲ್ಲಿ ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ಬಹುತೇಕರು ಜ್ವರದಿಂದ ಬಳಲುತ್ತಿದ್ದಾರೆ ಎಂದು ನಿವಾಸಿಗಳಾದ ಹಣಮಂತ ಚೆನ್ನದಾಸರ, ಮಾರೇಪ್ಪ ಚೆನ್ನದಾಸರ ಹೇಳಿದರು.
ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ ಶೌಚಗೃಹದ ಮಲಿನ ನೀರು ನೇರವಾಗಿ ಚರಂಡಿಗೆ ಸೇರುತ್ತದೆ. ಹೀಗಾಗಿ ಪಟ್ಟಣದಲ್ಲಿ ದುರ್ವಾಸನೆ ಹೆಚ್ಚಾಗಿದೆ. ಇತ್ತೀಚೆಗಂತೂ ಈ ಸಮಸ್ಯೆ ಮತ್ತಷ್ಟು ಉಲ್ಬಣಿಸಿದೆ. ಪುರಸಭೆ ಎಚ್ಚೆತ್ತುಕೊಂಡು ಚರಂಡಿಯನ್ನು ಸ್ವಚ್ಛಗೊಳಿಸಬೇಕು. ತಗ್ಗು ಪ್ರದೇಶದಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು. ಸೊಳ್ಳೆ ನಿಯಂತ್ರಣಕ್ಕೆ ಫಾಗಿಂಗ್ ಮಾಡಬೇಕು ಎನ್ನುವುದು ನಿವಾಸಿಗಳ ಆಗ್ರಹವಾಗಿದೆ.
ಸ್ವಚ್ಛತೆಗೆ ಆದ್ಯತೆ ನೀಡಿ: ಕಳೆದ ವಾರ ಸುರಿದ ಜಿಟಿಜಿಟಿ ಮಳೆಯಿಂದಾಗಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಅನೈರ್ಮಲ್ಯ ತಾಂಡವವಾಡುತ್ತಿತ್ತು. ಇದನ್ನು ಗಮನಿಸಿ ತಹಸೀಲ್ದಾರ್, ತಾಪಂ ಇಒ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳು ಸಭೆ ನಡೆಸಿ ‘ಮಳೆಯಿಂದ ಚರಂಡಿಯಲ್ಲಿ ನೀರು ನಿಲ್ಲದಂತೆ ಎಚ್ಚರವಹಿಸಬೇಕು. ಬ್ಲೀಚಿಂಗ್ ಪೌಡರ್ ಸಿಂಪಡಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಆರೋಗ್ಯ ಕೇಂದ್ರಗಳಲ್ಲಿ ಔಷಧ ದಾಸ್ತಾನಿಟ್ಟುಕೊಳ್ಳಬೇಕು ಎಂದು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆದರೆ, ಈ ಯಾವ ಕಾರ್ಯಗಳೂ ಪರಿಣಾಕಾರಿಯಾಗಿ ಆಗಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
ಜಿಟಿಜಿಟಿ ಮಳೆಯಿಂದಾಗಿ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಈಗಾಗಲೇ ತಾಲೂಕಿನಾದ್ಯಂತ 13 ಡೆಂಘೆ, 7 ಮಲೇರಿಯಾ ಹಾಗೂ ಒಬ್ಬರಲ್ಲಿ ಚಿಕೂನ್ಗುನ್ಯಾ ಪತ್ತೆಯಾಗಿದೆ. ನಿತ್ಯವೂ ನೂರಾರು ಜನರು ಕೆಮ್ಮು, ತಲೆ ನೋವು, ವೈರಲ್ ಪೀವರ್ನಿಂದ ಬಳಲುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.| ಡಾ. ಬಿ.ಎಸ್. ಭಜಂತ್ರಿ, ತಾಲೂಕು ವೈದ್ಯಾಧಿಕಾರಿ
ಪಟ್ಟಣದ ಸ್ವಚ್ಛತೆಗೆ ನಾಗರಿಕರ ಸಹಕಾರ ಮುಖ್ಯ. ಪುರಸಭೆ ಸಿಬ್ಬಂದಿ ತ್ಯಾಜ್ಯ ವಿಲೇವಾರಿ ಮಾಡಿದ ತಕ್ಷಣ ಮತ್ತೆ ಅಲ್ಲಿ ಕಸದ ರಾಶಿ ಇರುತ್ತದೆ. ಕಸದ ವಾಹನಗಳು ಬಂದರೂ ಕೆಲವರು ವಾಹನದಲ್ಲಿ ಕಸ ಹಾಕದೇ ಮನೆ ಮುಂದಿನ ಚರಂಡಿ ಹಾಗೂ ಖುಲ್ಲಾ ಜಾಗದಲ್ಲಿ ಎಸೆಯುತ್ತಾರೆ. ಹೀಗಾಗಿ ಸೊಳ್ಳೆಗಳು ಉತ್ಪತ್ತಿಯಾಗಿ ಕಾಯಿಲೆಗಳು ಹರಡುತ್ತಿವೆ.| ರಂಗವ್ವ ಭಜಂತ್ರಿ, ಪುರಸಭೆ ಅಧ್ಯಕ್ಷೆ