ಹೆಚ್ಚುತ್ತಿದೆ ಬೆಳೆ ಹಾನಿ ಪ್ರಮಾಣ

14 vikram 8
Published on

ಧಾರವಾಡ: ಪ್ರಸಕ್ತ ವರ್ಷದಲ್ಲಿ ಸುರಿದ ಮಳೆಯಿಂದ ಜಿಲ್ಲೆಯಲ್ಲಿ ಭಾರಿ ಪ್ರಮಾಣದ ಬೆಳೆ ಹಾನಿಯಾಗಿದ್ದು, ಕಳೆದ ಒಂದು ವಾರದಲ್ಲಿ ನಷ್ಟದ ಪ್ರಮಾಣ ಹೆಚ್ಚುತ್ತಿದೆ. ಸಾವಿರಾರು ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಆಗಸ್ಟ್​ನಿಂದ ಅಕ್ಟೋಬರ್​ವರೆಗೆ ಸುರಿದ ಮಳೆಯಿಂದ ಜಿಲ್ಲೆಯ 1,71,236.60 ಹೆಕ್ಟೇರ್ ಪ್ರದೇಶದ ಕೃಷಿ ಬೆಳೆ ಹಾಗೂ 25,112.61 ಹೆಕ್ಟೇರ್ ಪ್ರದೇಶದ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಅಕ್ಟೋಬರ್​ನಲ್ಲಿ ನಿರಂತರ ಸುರಿದ ಮಳೆಯಿಂದ 51,104 ಹೆಕ್ಟೇರ್ ಕೃಷಿ ಹಾಗೂ 5088.4 ಹೆಕ್ಟೇರ್ ಪ್ರದೇಶದ ತೋಟಗಾರಿಕೆ ಬೆಳೆ ಹಾನಿಯಾಗಿದೆ.

ಕೃಷಿ ಬೆಳೆಯಲ್ಲಿ ಹೆಸರು, ಗೋವಿನಜೋಳ, ಸೋಯಾಬಿನ್ ಹಾಗೂ ಶೇಂಗಾ ಹೆಚ್ಚು ಹಾನಿಗೀಡಾಗಿದ್ದರೆ, ತೋಟಗಾರಿಕೆಯಲ್ಲಿ ಉಳ್ಳಾಗಡ್ಡಿ, ಆಲೂಗಡ್ಡೆ, ಕೆಂಪು ಮೆಣಸಿನಕಾಯಿ ಬೆಳೆಗಳು ಹೆಚ್ಚಿನ ಪ್ರಮಾಣದಲ್ಲಿ ಹಾನಿಗೀಡಾಗಿವೆ.

ನಷ್ಟಕ್ಕೀಡಾದ ಕೃಷಿ ಬೆಳೆಗಳಿಗೆ ಎನ್​ಡಿಆರ್​ಎಫ್ ಹಾಗೂ ಎಸ್​ಡಿಆರ್​ಎಫ್ ಮಾರ್ಗಸೂಚಿ ಪ್ರಕಾರ ಒಣ ಬೇಸಾಯ ಕೃಷಿ ಬೆಳೆಗೆ ಹೆಕ್ಟೇರ್​ಗೆ 6800 ರೂ. ಹಾಗೂ ನೀರಾವರಿಗೆ 13600 ರೂ. ಪರಿಹಾರ ನೀಡಲಾಗುತ್ತದೆ. ಹಾನಿಗೀಡಾದ ಬೆಳೆಗಳ ಸಮೀಕ್ಷೆ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಆನ್​ಲೈನ್ ಮೂಲಕ ನಮೂದು ಮಾಡುವ ಕೆಲಸ ನಡೆದಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕೃಷಿ ಬೆಳೆ ಹಾನಿ ವಿವರ: ಭತ್ತ 2485 ಹೆಕ್ಟೇರ್, ಗೋವಿನ ಜೋಳ (37193.48 ಹೆಕ್ಟೇರ್), ಜೋಳ (2.4 ಹೆ), ಸೋಯಾಬಿನ್ (32950 ಹೆ), ಹೆಸರು (44245.10 ಹೆ), ಉದ್ದು (5083 ಹೆ), ತೊಗರಿ (83.64 ಹೆ), ಶೇಂಗಾ (21360.86 ಹೆ), ಹತ್ತಿ (27468.20 ಹೆ), ಕಬ್ಬು (356 ಹೆ) ಹಾಗೂ ಇತರೆ ಬೆಳೆಗಳು (8.92 ಹೆ) ಹೆಕ್ಟೇರ್ ಪ್ರದೇಶದಲ್ಲಿ ಹಾನಿಗೀಡಾಗಿವೆ. ತೋಟಗಾರಿಕೆ ಬೆಳೆಗಳಾದ ಉಳ್ಳಾಗಡ್ಡಿ (10522 ಹೆ), ಕೆಂಪು ಮೆಣಸಿನಕಾಯಿ (8750 ಹೆ), ಆಲೂಗಡ್ಡೆ (810 ಹೆ), ಹಾಗಲಕಾಯಿ (9 ಹೆ), ಸವತೆಕಾಯಿ (7ಹೆ), ಟೊಮ್ಯಾಟೊ (55.9 ಹೆ), ಬೆಂಡೆಕಾಯಿ (58 ಹೆ), ಹೀರೆಕಾಯಿ (48 ಹೆ), ಕ್ಯಾಬೇಜ್ (55 ಹೆ), ಕಾಲಿಫ್ಲಾವರ್ (17 ಹೆ), ಹಸಿಮೆಣಸಿನಕಾಯಿ (55.5 ಹೆ), ಪೇರಲ (33 ಹೆ), ಬಾಳೆ (1ಹೆ), ಪಪ್ಪಾಯ (2 ಹೆ) ಹಾಗೂ ಹೂವು, ಕಾಯಿಪಲ್ಲೆ 10 ಹೆ. ಪ್ರದೇಶದಲ್ಲಿ ಹಾನಿಗೀಡಾಗಿವೆ.</

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net