ಹೆಚ್ಚು ಶಾಲೆ ದತ್ತು ಪಡೆದು ಅಭಿವೃದ್ಧಿಪಡಿಸಿ

h16-Innerwheel 3
Published on

ಹುಬ್ಬಳ್ಳಿ: ಸೌಲಭ್ಯಗಳಿಲ್ಲದ ಶಾಲೆಗಳನ್ನು ಗುರುತಿಸಿ ದತ್ತು ಪಡೆಯುವ ಮೂಲಕ ಅಲ್ಲಿ ಹೆಚ್ಚು ಹೆಚ್ಚು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕೆಂದು ಇನ್ನರ್​ವ್ಹೀಲ್ ಕ್ಲಬ್ ಹುಬ್ಬಳ್ಳಿ ಮಿಡ್​ಟೌನ್ ಜಿಲ್ಲಾ ಚೇರ್ಮನ್ ನಂದಾ ಜಾಡಬುಕೆ ಹೇಳಿದರು.

ಇಲ್ಲಿಯ ಎಪಿಎಂಸಿ ಆವರಣದಲ್ಲಿ ಗುರುವಾರ ಬಾಳನಗೌಡ್ರ ಸರ್ಕಾರಿ ಪ್ರಾಥಮಿಕ ಶಾಲೆಗೆ ಇನ್ನರ್​ವ್ಹೀಲ್ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್​ಟೌನ್ ವತಿಯಿಂದ 2.50 ಲಕ್ಷ ರೂ. ವೆಚ್ಚದ ಕಂಪ್ಯೂಟರ್, ಶೌಚಗೃಹ, ಗ್ರಂಥಾಲಯ ಸೇರಿ ವಿವಿಧ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಿದ ‘ಇನ್ನರ್​ವ್ಹೀಲ್ ಸ್ಕೂಲ್’ ಉದ್ಘಾಟಿಸಿ ಅವರು ಮಾತನಾಡಿದರು.

ಎಪಿಎಂಸಿ ಆವರಣದಲ್ಲಿ ಹಮಾಲಿ ಕಾರ್ವಿುಕರಿಗಾಗಿ ಆರಂಭಿಸಿದ ಶಾಲೆಯನ್ನು ಪತ್ತೆ ಹಚ್ಚಿ ಸೌಲಭ್ಯ ಒದಗಿಸಿರುವುದು ಉತ್ತಮ ಕಾರ್ಯ. ಇದೇ ರೀತಿ ಇನ್ನಷ್ಟು ಶಾಲೆಗಳನ್ನು ದತ್ತು ಪಡೆದು ಸುಧಾರಣೆ ಮಾಡಿ. ಈವರೆಗೆ 35 ಶಾಲೆಗಳನ್ನು ಕ್ಲಬ್ ದತ್ತು ಪಡೆದಿದೆ ಎಂದರು.

ಕ್ಲಬ್​ನ ಜಿಲ್ಲಾ ಶೈಕ್ಷಣಿಕ ಸಂಯೋಜಕಿ ರುಕ್ಸಾನಾ ಕಿತ್ತೂರ, ಆಧುನಿಕ ಸೌಲಭ್ಯಗಳು ಇಲ್ಲದ ಶಾಲೆಗೆ ಸವಲತ್ತುಗಳನ್ನು ನೀಡುವ ಮೂಲಕ ಕ್ಲಬ್ ಒಳ್ಳೆಯ ಕೆಲಸ ಮಾಡಿದೆ ಎಂದರು.

ಕ್ಲಬ್ ಅಧ್ಯಕ್ಷೆ ಕಾಜಲ್ ವಾಡ್ವಾ ಮಾತನಾಡಿ, ಕಂಪ್ಯೂಟರ್ ಹಾಗೂ ಗ್ರಂಥಾಲಯ, ಪುಸ್ತಕದ ವ್ಯವಸ್ಥೆ ಮಾಡಲಾಗಿದೆ. ಶೌಚಗೃಹ ನಿರ್ವಣ, ಕುಡಿಯುವ ನೀರಿನ ವ್ಯವಸ್ಥೆ, ಕ್ರೀಡಾ ಸಾಮಗ್ರಿಗಳನ್ನು ನೀಡಲಾಗಿದೆ. ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.

ಇಂಜಿನಿಯರ್ ಕರಣ ಅಗರವಾಲ್, ಸುರೇಶ ವಾಡ್ವಾ, ನಾಗರಾಜ ನಡಕಟ್ಟಿ ಇತರರ ಮೇಲ್ವಿಚಾರಣೆಯಲ್ಲಿ ಶಾಲೆಗೆ ಎಲ್ಲ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಕಾರ್ಯದರ್ಶಿ ಪ್ರೀತಿ ಅಗರವಾಲ್, ಶೈಕ್ಷಣಿಕ ಸಂಯೋಜಕಿ ರಾಜೇಶ್ವರಿ ವಾಸುಕಿ, ಪಿಡಿಸಿ ಜ್ಯೋತಿ ಮಡಿಮನ್, ರಾಧಿಕಾ ಗೋಖಲೆ, ಉಷಾ ಗೌಡರ, ಜ್ಯೋತಿ ನಡಕಟ್ಟಿ ಸೇರಿ ಅನೇಕ ದಾನಿಗಳು ಉಪಸ್ಥಿತರಿದ್ದರು.

ಡಾ. ರಾಮು ಮೂಲಗಿ ಪ್ರಾಸ್ತಾವಿಕ ಮಾತನಾಡಿದರು. ಸಿಆರ್​ಪಿ ತಡಸದ, ಮುಖ್ಯಾಧ್ಯಾಪಕಿ ಎ.ಪಿ. ಬಿಡೇಕರ, ತುಕಾರಾಮ ರಾಠೋಡ, ಎಂ.ಎಚ್. ಕಲ್ಲಯ್ಯನವರ, ಪ್ರೇಮಾ ದೊಡ್ಡಮನಿ, ಉಮಾ ದೊಡ್ಡೂರ, ಎಸ್.ಎಂ. ಸಾಲಿಮಠ, ಅಯ್ಯಪ್ಪ ದೇವರಮನಿ, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net