

ಮೈಸೂರು: ನಾನು ಸಂಸದನಾದ ಬಳಿಕ ರಾಜಮನೆತನ ಹೆಚ್ಚು ಟಾರ್ಗೆಟ್ ಆಗುತ್ತಿದೆ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಬೇಸರವ್ಯಕ್ತಪಡಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನಿಂದಲೂ ರಾಜಮನೆತನದವರನ್ನು ಸರ್ಕಾರ ಟಾರ್ಗೆಟ್ ಮಾಡುತ್ತಿದೆ. ಚಾಮುಂಡಿಬೆಟ್ಟ, ಕುರುಬಾರಹಳ್ಳಿ ವಿಚಾರಗಳನ್ನು ನಾನು ಹೇಳಲ್ಲ. ರಸ್ತೆಗೆ ಸಿದ್ದರಾಮಯ್ಯ ಹೆಸರಿಡುವುದಕ್ಕೆ ನನ್ನ ವಿರೋಧವಿಲ್ಲ. ಆದರೆ, ಪ್ರಿನ್ಸೆಸ್ ರಸ್ತೆಗೆ ಅವರ ಹೆಸರಿಡುವುದು ಬೇಡ ಎಂದು ಸ್ಪಷ್ಟಪಡಿಸಿದರು.
ಹಿಂದಿನಿಂದಲೂ ಕೆಆರ್‌ಎಸ್ ರಸ್ತೆಯನ್ನು ಕೆಆರ್‌ಎಸ್ ರಸ್ತೆ ಎಂದು ಕರೆಯುತ್ತಾರೆ. ರಾಜಕುಮಾರಿ ಕೃಷ್ಣರಾಜಮ್ಮಣ್ಣಿ ಹಾಗೂ ಅವರ ಮಕ್ಕಳು ಟಿಬಿ ಕಾಯಿಲೆಯಿಂದ ಮೃತರಾಗುತ್ತಾರೆ. ಅವರ ತಂಗಿಯ ನೆನಪಿನಲ್ಲಿ ನಾಲ್ವಡಿ ಟಿಬಿ ಆಸ್ಪತ್ರೆ ಕಟ್ಟಿಸಿದರು. ಆ ರಸ್ತೆಗೆ ರಾಜಕುಮಾರಿ ಎಂದು ನಾಮಕರಣ ಮಾಡಿದರು ಎಂದು ತಿಳಿಸಿದರು.
ಮಹಾನಗರ ಪಾಲಿಕೆಗೆ ಚುನಾವಣೆ ನಡೆದಿಲ್ಲ. ಜನಪ್ರತಿನಿಧಿಗಳು ಇಲ್ಲದೆ ತೀರ್ಮಾನ ಕೈಗೊಳ್ಳುವುದು ಸರಿಯಲ್ಲ. ಮೈಸೂರಿನಲ್ಲಿ ಸಾಕಷ್ಟು ರಸ್ತೆಗಳಿವೆ. ಅದರಲ್ಲಿ ಯಾವುದಕ್ಕಾದರೂ ಸಿದ್ದರಾಮಯ್ಯ ಹೆಸರಿಡಬಹುದು. ಈ ವಿಚಾರವಾಗಿ ಮಹಾನಗರ ಪಾಲಿಕೆಗೆ ಜನರು ಆಕ್ಷೇಪಣೆ ಸಲ್ಲಿಸಿದ್ದಾರೆ. ಮಾಜಿ ಸಂಸದ ಪ್ರತಾಪಸಿಂಹ ಇತಿಹಾಸ ಗೊತ್ತಿಲ್ಲದಿದ್ದರೆ ತಿಳಿದುಕೊಳ್ಳಲಿ ಎಂದು ಕುಟುಕಿದರು.
ಕೆಆರ್‌ಎಸ್‌ಗೆ ತೆರಳುವ ಮಾರ್ಗದ ಪ್ರಿನ್ಸೆಸ್ ರಸ್ತೆಯನ್ನು ಸಿದ್ದರಾಮಯ್ಯ ಆರೋಗ್ಯ ಮಾರ್ಗ ಎಂದು ಮರುನಾಮಕರಣ ಮಾಡದೆ ಪರಂಪರೆಯನ್ನು ಉಳಿಸಿ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮನವಿ ಮಾಡಿದ್ದಾರೆ.
ಕೆಆರ್‌ಎಸ್ ರಸ್ತೆ ಎಂದು ಜನಪ್ರಿಯವಾಗಿರುವ ರಾಜಕುಮಾರಿ ರಸ್ತೆ ಕೇವಲ ರಸ್ತೆಯ ಹೆಸರಲ್ಲದೆ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ಈ ರಸ್ತೆಗೆ ಇಬ್ಬರು ಪ್ರತಿಷ್ಠಿತ ರಾಜಕುಮಾರಿಯರ ಹೆಸರನ್ನು ಇಡಲಾಗಿದೆ. ರಾಜಕುಮಾರಿ ಕೃಷ್ಣಾಜಮ್ಮಣ್ಣಿ ಅವರ ಹೆಸರಿನಲ್ಲಿ ಸ್ಥಾಪಿಸಲಾದ ಪಿಕೆ ಸ್ಯಾನಿಟೋರಿಯಂ ಮೂಲಕ ಅವರ ಸ್ಮರಣೆಯು ಜೀವಂತವಾಗಿದೆ. ರಾಜಕುಮಾರಿ ಚೆಲುವಾಜಮ್ಮಣ್ಣಿ ಅವರ ನಿವಾಸ, ಚೆಲುವಾಂಬ ಮ್ಯಾನ್ಸನ್, ಈಗಿನ ಸಿಎಫ್‌ಟಿಆರ್‌ಐ ಬಂಗಲೆಯು ಸಹ ಇದೆ ರಸ್ತೆಯಲ್ಲಿದೆ ಎಂದು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹೇಳಿದ್ದಾರೆ.
ಮೈಸೂರಿನ ಪಾರಂಪರಿಕ ಇತಿಹಾಸವನ್ನು ಹಾಗೂ ಅದರ ಹೆಗ್ಗುರುತುಗಳನ್ನು ಅಳಿಸಿ ಹಾಕುವ ಯಾವುದೇ ನಿರ್ಣಯವೂ ನಮ್ಮ ಮುಂದಿನ ಪೀಳಿಗೆಗೆ ಮಾರಕವಾಗುತ್ತದೆ ಮತ್ತು ಮೈಸೂರಿನ ಸಾಂಸ್ಕೃತಿಕ ಪರಂಪರೆಯನ್ನು ಕೊಂದಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.