

ಚಾಮರಾಜನಗರ: ಮೈಸೂರು ಜಿಲ್ಲೆಯ ಕಾವೇರಿ ನೀರಾವರಿ ನಿಗಮದ ನಂಜನಗೂಡು ವಿಭಾಗದಲ್ಲಿ ಹೆಚ್ಚು ಕಮಿಷನ್ ನೀಡಿದವರಿಗೆ ಮಾತ್ರ ಬಿಲ್ ಪಾವತಿ ಮಾಡುತ್ತಿದ್ದು, ತಾರತಮ್ಮ ಧೋರಣೆ ಅನುಸರಿಸುತ್ತಿರುವ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು ಎಂದು ಗುತ್ತಿಗೆದಾರ ಅಯ್ಯನಪುರ ಶಿವಕುಮಾರ್ ಆಗ್ರಹಿಸಿದರು.
ಕಾವೇರಿ ನೀರಾವರಿ ನಿಗಮದ ನಂಜನಗೂಡು ವಿಭಾಗದ ವಿಶೇಷ ಅಭಿವೃದ್ಧಿ ಯೋಜನೆಯಲ್ಲಿ ನಿರ್ವಹಿಸಿರುವ ಕಾಮಗಾರಿಗಳ ಬಿಲ್ ಪಾವತಿ ಮಾಡಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ಕಾರ್ಯಪಾಲಕ ಅಭಿಯಂತರಾದ ಕಾವೇರಿ ರಂಗನಾಥ್ ವಿಳಂಬ ಮತ್ತು ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆ. ಆದರೇ ಹೆಚ್ಚು ಕಮಿಷನ್ ನೀಡಿದವರಿಗೆ ಮಾತ್ರ ಬಿಲ್ ಪಾವತಿ ಮಾಡುತ್ತಿದ್ದಾರೆ. ಆಗಾಗಿ ಅವರನ್ನು ಸೇವೆಯಿಂದ ವಜಾಗೊಳಿಸಿ ತನಿಖೆಗೊಳಪಡಿಸಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ವಿಶೇಷ ಅಭಿವೃದ್ಧಿ ಯೋಜನೆಯಲ್ಲಿ ನಿರ್ವಹಿಸಿರುವ ಕಾಮಗಾರಿಗಳ ಬಿಲ್ 2021-22 ನೇ ಸಾಲಿನಿಂದ 25.65 ಕೋಟಿ ರೂ. ಬಾಕಿ ಉಳಿದಿದೆ. ಎಸ್‌ಡಿಪಿ ಹಾಗೂ ನಿರ್ವಹಣೆಗೆ ಅನುದಾನ ಇಲ್ಲ ಎಂದು ಹೇಳುತ್ತಾರೆ. ಆದರೆ ಶೇ.10,15 ರಷ್ಟು ಫರ್ಸೆಂಟ್ ಹಣ ಕೊಡುವ ದೊಡ್ಡ ಗುತ್ತಿಗೆದಾರರಿಗೆ ಕಾಮಗಾರಿ ಮಾಡಿದ ತಕ್ಷಣದಲ್ಲೇ ಮೊಬೈಲ್ ಮೂಲಕ ಬಿಲ್ ಪಾವತಿಸುತ್ತಾರೆ. ಆದರೆ ನಮಗೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ ಎಂದು ವಿಳಂಬ ಮಾಡುವ ಮೂಲಕ ಅಧಿಕಾರಿಗಳು ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ಸಾಲ ಮಾಡಿ ಕಾಮಗಾರಿ ನಿರ್ವಹಿಸಿ ವರ್ಷಗಳು ಕಳೆದರೂ ಬಿಲ್ ಆಗಿಲ್ಲ. ಇದರಿಂದ ಗುತ್ತಿಗೆದಾರರು ತುಂಬಾ ಕಷ್ಟದಲ್ಲಿ ಸಿಲುಕಿದ್ದಾರೆ. ಬಿಲ್ ಬಗ್ಗೆ ಚರ್ಚಿಸಲು ಬೆಂಗಳೂರಿಗೆ ಹೋದರೆ ವ್ಯವಸ್ಥಾಪಕ ನಿರ್ದೇಶಕರು ಸಿಗುತ್ತಿಲ್ಲ. ನಿಗಮದ ವ್ಯವಸ್ಥಾಪಕರು, ಕಾರ್ಯಪಾಲಕ ಇಂಜಿನಿಯರ್ ಈಗಾಗಲೇ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರಾದ ವೆಂಕಟಸುಬ್ಬಯ್ಯ ಅವರಿಗೆ 80 ಲಕ್ಷ ರೂ. ನೃಪತುಂಗ ಎಂ.ಎಸ್. ಕಂಟ್ರಾಕ್ಷನ್‌ಗೆ 25 ಲಕ್ಷ ಬಿಲ್ ಮಾಡಿದ್ದಾರೆ. ಇದನ್ನು ಪ್ರಶ್ನಿಸಿದರೆ ಎಂಡಿ ಅವರ ಆದೇಶದಂತೆ ಬಿಲ್ ಪಾವತಿಸಲಾಗಿದೆ ಎಂದು ಹೇಳುತ್ತಾರೆ. ಈ ಮೂಲಕ ತಾರತಮ್ಯ ಎಸಗುತ್ತಿದ್ದಾರೆ ಎಂದು ದೂರಿದರು.
ಗೋಷ್ಠಿಯಲ್ಲಿ ಎಸ್ಸಿ, ಎಸ್ಟಿ ಗುತ್ತಿಗೆದಾರರ ಸಂಘದ ತಾಲೂಕು ಅಧ್ಯಕ್ಷ ಚನ್ನಯ್ಯ, ಅಬ್ದುಲ್ ಅಜೀಜ್ (ದೀನಾ), ಗುತ್ತಿಗೆದಾರರಾದ ಎಸ್.ಆರ್.ಗೋವಿಂದರಾಜು, ಗಣೇಶಪ್ರಸಾದ್, ಗುರುಸ್ವಾಮಿ ಹಾಜರಿದ್ದರು.