

ಹಗರಿಬೊಮ್ಮನಹಳ್ಳಿ: ರೈತರು ಗುಣಮಟ್ಟದ ದಾಳಿಂಬೆ ಬೆಳೆಯಲು ಮಾರ್ಗದರ್ಶನ ಅವಶ್ಯವಾಗಿದ್ದು, ಹೆಚ್ಚು ಇಳುವರಿ ಪಡೆಯಲು ಸೂಕ್ತ ಕ್ರಮಗಳನ್ನುಅನುಸರಿಸಬೇಕೆಂದು ಸೊಲ್ಲಾಪುರದ ಎನ್.ಆರ್.ಸಿ.ಪಿ.ಯ ಹಿರಿಯ ವಿಜ್ಞಾನಿ ಡಾ.ಮಂಜುನಾಥ ಹೇಳಿದರು.
ಪಟ್ಟಣದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ದಾಳಿಂಬೆ ಬೆಳಗಾರರ ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ಹಗರಿಬೊಮ್ಮನಹಳ್ಳಿ, ಕೊಪ್ಪಳ ಹಾಗೂ ಕುಷ್ಟಗಿ ಭಾಗದ ದಾಳಿಂಬೆ ಬೆಳೆಗೆ ಜಾಗತಿಕ ಮನ್ನಣೆ ದೊರೆತಿದೆ ಎಂದರು.
ಸೊಲ್ಲಾಪುರದ ರಾಜ್ಯ ದಾಳಿಂಬೆ ಸಂಶೋಧನಾ ಕೇಂದ್ರದ ನಿವೃತ್ತ ನಿರ್ದೇಶಕ ಡಾ.ಜ್ಯೋತ್ಸನ್ ಶರ್ಮ, ದಾಳಿಂಬೆ ಸಸಿ ನಾಟಿ ಮಾಡುವ ಮುನ್ನ ವಹಿಸಬೇಕಾದ ಮುಂಜಾಗ್ರತಾ ಕ್ರಮ, ಕೊಟ್ಟಿಗೆ-ಎರೆಹುಳು ಗೊಬ್ಬರ, ಬೇವಿನ ಹಿಂಡಿ ಬಳಕೆ, ದುಂಡಾಣು ರೋಗಗಳ ನಿರ್ವಹಣೆ, ರೋಗಮುಕ್ತ ಸಸಿಗಳ ನಿರ್ವಹಣೆ ಕುರಿತು ಮಾಹಿತಿ ನೀಡಿದರು.
ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರಾಜೇಂದ್ರ ಮಾತನಾಡಿ, ಖರ್ಚು ಹಾಗೂ ನಿರ್ವಹಣೆ ಸಮಸ್ಯೆಯಿಂದ ಹೆಚ್ಚಿನ ರೈತರು ದಾಳಿಂಬೆ ಬೆಳೆಯುತ್ತಿರಲಿಲ್ಲ. ಸರ್ಕಾರಿ ಯೋಜನೆಗಳು, ನರೇಗಾ , ರಾಷ್ಟ್ರೀಯ ತೋಟಗಾರಿಕೆ ಮಿಷನ್ ಸೇರಿದಂತೆ ಹಲವು ಯೋಜನೆಗಳು ರೈತರಿಗೆ ಸಹಾಯಕವಾಗಿವೆ. ಸರ್ಕಾರದ ಸೌಲಭ್ಯಗಳನ್ನು ಪ್ರತಿಯೊಬ್ಬ ರೈತರು ಬಳಕೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಸಸ್ಯರೋಗ ತಜ್ಞ ಡಾ.ಜಿ.ಮಂಜುನಾಥ, ತಾಂತ್ರಿಕ ಸಲಹೆಗಾರ ಡಾ.ಮಲ್ಲಿಕಾರ್ಜುನ, ಡಾ.ರಾಘವೇಂದ್ರ ಆಚಾರ್, ಪ್ರಮುಖರಾದ ಶಿವಪ್ರಸಾದ್ ಹಡಗಲಿ, ಹೊಳಗುಂದಿ ಬಸವರಾಜ, ಶ್ರೀಕಾಂತ, ಸೂರ್ಯನಾರಾಯಣ ರೆಡ್ಡಿ, ಚಿಲಗೋಡು ಶಿವಪ್ಪ ಇತರರಿದ್ದರು.