

ಸರಗೂರು: ರೈತರು ಬಿತ್ತನೆ ಅವಧಿಯಲ್ಲಿ ಕೃಷಿ ಇಲಾಖೆ ಸೂಚನೆಯಂತೆ ಬೀಜೋಪಚಾರ ಮಾಡುವ ಮೂಲಕ ರೋಗಮುಕ್ತ, ಹೆಚ್ಚು ಇಳುವರಿ ಹಾಗೂ ಗುಣಮಟ್ಟದ ಬೆಳೆ ಬೆಳೆಯಲು ಮುಂದಾಗಬೇಕು ಎಂದು ಕೃಷಿ ಇಲಾಖೆ ಅಧಿಕಾರಿ ಗಂಗಾಧರ್ ಮನವಿ ಮಾಡಿದರು.
ತಾಲೂಕಿನ ಕೃಷಿ ಸಂಪರ್ಕ ಕೇಂದ್ರದಲ್ಲಿ ಶುಕ್ರವಾರ ತಾಲೂಕು ಮಟ್ಟದ ಬೀಜೋಪಚಾರ ಆಂದೋಲನ ಹಾಗೂ ಸುರಕ್ಷಿತ ಕೀಟನಾಶಕಗಳ ಬಳಕೆ ಕುರಿತು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾಲೂಕಿನಲ್ಲಿ ಪ್ರಾಯೋಗಿಕವಾಗಿ ಭತ್ತ ಮತ್ತು ರಾಗಿ ಬೆಳೆಯನ್ನು ಬೀಜೋಪಚಾರ ಮಾಡುವ ಯೋಜನೆಗೆ ತರಬೇತಿ ನೀಡಲಾಯಿತು. ಮುಂದೆ ಹಂತ ಹಂತವಾಗಿ ಎಲ್ಲ ಭಾಗಕ್ಕೂ ವಿಸ್ತರಿಸಲು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಇಲಾಖೆ ವತಿಯಿಂದ ಪ್ರತಿ ಹೋಬಳಿ ಕೇಂದ್ರದಲ್ಲಿ ಮಾತ್ರ ಬೀಜೋಪಚಾರದ ಯಂತ್ರಗಳು ಲಭ್ಯವಿದ್ದು, ತಾತ್ಕಾಲಿಕವಾಗಿ ಲಭ್ಯವಿರುವ ಯಂತ್ರಗಳನ್ನು ವಾಹನದಲ್ಲಿ ಪ್ರತಿ ಹಳ್ಳಿಗಳಿಗೆ ಕೊಂಡೊಯ್ದು ರೈತರಿಗೆ ಮಾಹಿತಿ, ತರಬೇತಿ ನೀಡಬೇಕು. ಮುಂದೆ ಜಿಲ್ಲೆಯ ಎಲ್ಲ ಗ್ರಾಪಂ ಕೇಂದ್ರಗಳಲ್ಲೂ ಬೀಜೋಪಚಾರದ ಡ್ರಂ ವ್ಯವಸ್ಥೆ ಕಲ್ಪಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದರು.
ದೇಶದಲ್ಲಿ ಆಹಾರದ ಕೊರತೆ ಇಲ್ಲದಿದ್ದರೂ ಇಂದು ಗ್ರಾಮೀಣ ಭಾಗದಲ್ಲಿ ಭತ್ತ, ರಾಗಿ ಬೆಳೆಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಕೃಷಿ ಇಲಾಖೆ ಹೊರತಂದಿರುವ ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಯಥೇಚ್ಛವಾಗಿ ಆಹಾರ ಪದಾರ್ಥ ಬೆಳೆದು ಆರ್ಥಿಕವಾಗಿ ಅಭಿವೃದ್ಧಿ ಹೊಂದುವುದರ ಜತೆಗೆ ರಫ್ತು ಮಾಡಲು ಮುಂದಾಗಬೇಕು ಎಂದರು.
ತಾಲೂಕು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಡಿ.ಜೆ. ಶಿವರಾಜಪ್ಪ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಹೇಶ್‌ಕುಮಾರ್, ಅಧಿಕಾರಿ ಶ್ರೀಧರ್, ವಸಂತಾ ಪಾಟೀಲ್, ಬೆಟ್ಟ ನಾಯಕ, ಶಿವಣ್ಣ, ಹೂವಿನಕೊಳ ಮಹೇಂದ್ರ, ಮುಳ್ಳೂರು ಸಿದ್ದಪ್ಪ, ಕಾಳೆಗೌಡನಹುಂಡಿ ಸಿದ್ದರಾಜು, ಅಗ್ನಿ, ಗುರುಸ್ವಾಮಿ, ಆಶಾ, ಪ್ರೇಮಾ, ರೈತ ಮುಖಂಡರು ಭಾಗಿಯಾಗಿದ್ದರು.