

ಬೀದರ್: ಸೆ.8 ಮತ್ತು 9ರಂದು ಇಲ್ಲಿನ ಐತಿಹಾಸಿಕ ಕೋಟೆ ಮೇಲೆ ಏರ್ ಶೋ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜಿಲ್ಲೆಯ ವಿವಿಧ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾಧಿಕಾರಿ ಗೋವಿಂದರಡ್ಡಿ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಏರ್ ಶೋ ನಿಮಿತ್ತ ಪೂರ್ವಭಾವಿ ಸಭೆ ನಡೆಸಿದ ಅವರು, ವಾಯುಪಡೆ ನಿಲ್ದಾಣ ಹಾಗೂ ಜಿಲ್ಲಾಡಳಿತದಿಂದ ಶೋ ಸಂಘಟಿಸಲಾಗಿದೆ. ಕಾರ್ಯಕ್ರಮಕ್ಕೆ ಬರುವ ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ಆಯಾ ಶಾಲಾ-ಕಾಲೇಜು ಶಿಕ್ಷಕರು, ಉಪನ್ಯಾಸಕರು ನೋಡಿಕೊಳ್ಳಬೇಕು. ಸ್ಕೂಲ್ ಬ್ಯಾಗ್ ಜತೆಗೆ ಮಕ್ಕಳನ್ನು ಕರೆತರಬೇಡಿ ಎಂದು ಸೂಚಿಸಿದರು.
ಕೋಟೆಯಲ್ಲಿ ಸೆ.8ರಂದು ಸಂಜೆ 4ಕ್ಕೆ ಜಿಲ್ಲೆಯ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಮರುದಿನ ಸಂಜೆ 4ಕ್ಕೆ ಸಾರ್ವಜನಿಕರಿಗೆ ಏರ್ ಶೋ ವೀಕ್ಷಿಸಲು ಅವಕಾಶ ಕಲ್ಲಿಸಲಾಗಿದೆ. ವಾಯುಪಡೆಯ ಸೂರ್ಯಕಿರಣ ಏರೋಬ್ಯಾಟಿಕ್ ಟೀಮ್ ಆಕರ್ಷಕ ಪ್ರದರ್ಶನ ನೀಡಲಿದೆ ಎಂದರು.
ಕಾರ್ಯಕ್ರಮ ಮಕ್ಕಳಿಗೆ ಮನರಂಜನೆ ನೀಡುವುದು ಮಾತ್ರವಲ್ಲದೆ ವಿಮಾನಗಳು ಆಕಾಶದಲ್ಲಿ ಹಾರಾಡುವುದನ್ನು ನೋಡಿ ನಾವು ಸಹ ಏನಾದರೂ ಆಗಬೇಕೆಂಬ ಕನಸುಗಳನ್ನು ಕಟ್ಟಿಕೊಳ್ಳಲು ನೆರವಾಗಲಿದೆ. ಜಿಲ್ಲೆಯಲ್ಲೇ ಏರ್ಫೋಸ್೯ ಸ್ಟೇಷನ್ ಇರುವುದರಿಂದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಮಕ್ಕಳನ್ನು ಶಾಲಾ ವಾಹನಗಳಲ್ಲಿ ಸುರಕ್ಷಿತವಾಗಿ ಕರೆತಂದು ಏರ್ ಶೋ ನಡೆಯುವುದಕ್ಕಿಂತ ಮುನ್ನ ಕೋಟೆ ಒಳಗಡೆ ಕೂಡಿಸಬೇಕು. ವಾಹನ ಇಲ್ಲದ ಶಾಲೆಗಳಲ್ಲಿ ದಾನಿಗಳಿಂದ ವ್ಯವಸ್ಥೆ ಮಾಡಿ. ಇಲ್ಲದಿದ್ದರೆ ಅಂಥ ಶಾಲೆಗಳ ಮಾಹಿತಿ ನೀಡಿದರೆ ಜಿಲ್ಲಾಡಳಿತದಿಂದ ವ್ಯವಸ್ಥೆ ಮಾಡಲಾಗುವುದು ಎಂದು ಅಭಯ ನೀಡಿದರು.
ಕ್ಲಸ್ಟರ್ ಹಂತದಲ್ಲಿ ಎಷ್ಟು ವಿದ್ಯಾರ್ಥಿಗಳು ಬರುತ್ತಾರೆ ಎಂಬ ಮಾಹಿತಿ ನೀಡಿದರೆ ವಾಹನ ವ್ಯವಸ್ಥೆ ಮಾಡಲು ಅನುಕೂಲವಾಗುತ್ತದೆ. ಕಳೆದ ವರ್ಷದ ಏರ್ ಶೋದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ 20 ಸಾವಿರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸಲ ಅದಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಬೇಕೆಂದು ಹೇಳಿದರು.
ಜಿಪಂ ಸಿಇಒ ಶಿಲ್ಪಾ ಎಂ. ಮಾತನಾಡಿ, ಮಕ್ಕಳನ್ನು ಜವಾಬ್ದಾರಿಯಿಂದ ಕರೆತಂದ ಬಳಿಕ ಅಷ್ಟೇ ಜವಾಬ್ದಾರಿಯಿಂದ ಅವರನ್ನು ಆಯಾ ಶಾಲೆ ಶಿಕ್ಷಕರು ಸುರಕ್ಷಿತವಾಗಿ ಮನೆಗೆ ಕರೆದುಕೊಂಡು ಹೋಗಬೇಕು ಎಂದರು.
ಎಸ್ಪಿ ಚನ್ನಬಸವಣ್ಣ ಲಂಗೋಟಿ ಮಾತನಾಡಿದರು. ಸೂರ್ಯಕಿರಣ ಏರೋಬ್ಯಾಟಿಕ್ ಟೀಮ್ ವಿಂಗ್ ಕಮಾಂಡರ್ ಅರ್ಜುನ್, ಡಿಡಿಪಿಯು ಚಂದ್ರಕಾಂತ ಶಾಬಾದಕರ್, ಡಿಡಿಪಿಐ ಸಲೀಂ ಪಾಶಾ ಇತರರಿದ್ದರು.