

ಮಧುಗಿರಿ: ವಿದ್ಯಾರ್ಥಿಗಳು ಹೆಚ್ಚಾಗಿ ಮೊಬೈಲ್ ಬಳಕೆ ಮಾಡುವುದರಿಂದ ಕಣ್ಣಿನ ಸಮಸ್ಯೆ ಉಂಟಾಗುತ್ತಿದೆ ಎಂದು ವಿಧಾನ
ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ತಿಳಿಸಿದರು.
ಪಟ್ಟಣದ ಕನ್ನಡ ಭವನದ ಕೆ.ಎನ್.ರಾಜಣ್ಣ ಸಭಾಂಗಣದಲ್ಲಿ ಇತ್ತೀಚೆಗೆ ಲಯನ್ಸ್ ಅಂತಾರಾಷ್ಟ್ರೀಯ ಸಂಸ್ಥೆ ಮತ್ತು ಶಿಕ್ಷಣ ಇಲಾಖೆಯಿಂದ ಮಧುಗಿರಿ ತಾಲೂಕಿನ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಕಣ್ಣಿನ ಪರೀಕ್ಷೆ ನಡೆಸಿದ್ದು, ಸಮಸ್ಯೆ ಇರುವ 1200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕನ್ನಡಕ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕಳೆದ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮಧುಗಿರಿ ತಾಲೂಕು ಅತೀ ಕಡಿಮೆ ಫಲಿತಾಂಶ ಬಂದಿದ್ದು, ಈ ಬಾರಿ ಉತ್ತಮ ಫಲಿತಾಂಶ ಬರುವಂತೆ ಮಾಡಲು ವಿಶೇಷ ತರಗತಿ ನಡೆಸಲಾಗುತ್ತಿದೆ ಹಾಗೂ ಪ್ರತಿ ವಿದ್ಯಾರ್ಥಿ ಸಮಸ್ಯೆ ಬಗ್ಗೆತಿಳಿದುಕೊಂಡು ಸಮಸ್ಯೆ ನಿವಾರಣೆಗೆ ಒತ್ತು ನೀಡುವಂತೆ ತಿಳಿಸಿದರು.
ಲಯನ್ಸ್ ಸಂಸ್ಥೆ ಶ್ರೀಮತಿ ಅನಿತಾ ಪ್ರಸಾದ್ ಮಾತನಾಡಿ, ತುಮಕೂರು ಜಿಲ್ಲೆ ಐದು ತಾಲೂಕುಗಳಲ್ಲಿ ಇದುವರೆಗೂ 67 ಸಾವಿರ ವಿದ್ಯಾರ್ಥಿಗಳ ಕಣ್ಣಿನ ತಪಾಸಣೆ ನಡೆಸಿದ್ದು, 1700ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕನ್ನಡಕ ವಿತರಿಸಲಾಗಿದೆ. ಲಯನ್ಸ್ ಸಂಸ್ಥೆ ಮಕ್ಕಳಲ್ಲಿನ ದೃಷ್ಟಿ ದೋಷವಲ್ಲದೇ ಕಂಡು ಬರುವ ಡಯಾಬಿಟಿಸ್, ಕ್ಯಾನ್ಸರ್ ಮುಂತಾದ ಸಮಸ್ಯೆ ನಿವಾರಣೆಗೆ ಹೆಚ್ಚು ಒತ್ತು ನೀಡುತ್ತಿದೆ ಎಂದರು.
ಬಿಇಒ ಹನುಮಂತನಾಯಪ್ಪ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಂಗಪ್ಪ, ಕಸಾಪ ತಾಲೂಕು ಅಧ್ಯಕ್ಷೆ ಸಹನಾ ನಾಗೇಶ್, ಕಾರ್ಯದರ್ಶಿ ರಂಗಾಧಮಯ್ಯ, ಲಯನ್ಸ್ ಸಂಸ್ಥೆಯ ಪಾಂತ್ಯಪಾಲ ಮೋಹನ್ ಕುಮಾರ್, ಪದಾಧಿಕಾರಿಗಳಾದ ಸುರೇಶ್, ರಾಮು, ನಾಗೇಶ್, ವಿಜಯಕುಮಾರ್, ರಾಮಚಂದ್ರ ಇದ್ದರು.