

ಮೈಸೂರು: ಕೃಷಿ ಪರಿಕರ ಮಾರಾಟಗಾರರು ರೈತಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು. ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಮಾಡಿದರೆ ಲೈಸನ್ಸ್‌ರದ್ದು ಮಾಡಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕಿ ಡಾ.ಎಚ್.ಬಿ.ಮಧುಲತಾ ಎಚ್ಚರಿಸಿದರು.
ಕೃಷಿ ಇಲಾಖೆ ವತಿಯಿಂದ ನಗರದ ಕರ್ಜನ್ ಪಾರ್ಕ್‌ನಲ್ಲಿರುವ ಡಾ.ಎಂ.ಎಚ್.ಮರೀಗೌಡ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಮೈಸೂರು ತಾಲೂಕಿನ ರಸಗೊಬ್ಬರ, ಕೀಟನಾಶಕ, ಬಿತ್ತನೆ ಬೀಜ ಮಾರಾಟಗಾರರು ಹಾಗೂ ರೈತ ಮುಖಂಡರ ಸಭೆಯಲ್ಲಿ ಮಾತನಾಡಿದರು.
ದಾಸ್ತಾನಿರುವ ರಸಗೊಬ್ಬರ, ಬಿತ್ತನೆ ಬೀಜ, ಕೀಟನಾಶಕಗಳ ಪ್ರಮಾಣ ಮಾರಾಟ ದರ, ಮಾರಾಟಗಾರರ ಲೈಸನ್ಸ್‌ಗಳನ್ನು ಗ್ರಾಹಕರಿಗೆ ಕಾಣುವ ರೀತಿಯಲ್ಲಿ ಪ್ರದರ್ಶಿಸಬೇಕು. ಕಡ್ಡಾಯವಾಗಿ ರೈತರಿಗೆ ಬಿಲ್ ನೀಡಬೇಕೆಂದು ಸೂಚಿಸಿದರು.
ಇತ್ತೀಚಿನ ದಿನಗಳಲ್ಲಿ ನಕಲಿ ರಸಗೊಬ್ಬರಗಳ ಹಾವಳಿ ವರದಿಯಾಗಿದ್ದು, ಎಲ್ಲ ರೈತರು ಎಚ್ಚರ ವಹಿಸಬೇಕು. ತಾವು ಪಾವತಿಸುವ ಹಣಕ್ಕೆ ಬಿಲ್ ಕೇಳಿ ಪಡೆಯಬೇಕು. ರಸಗೊಬ್ಬರದ ಚೀಲದ ಬಾಯಿಯನ್ನು ಯಂತ್ರದಿಂದ ಹೊಲಿದಿರಬೇಕು. ಕೈಯಿಂದ ಚೀಲವನ್ನು ಹೊಲಿದಿದ್ದರೆ ಅದಕ್ಕೆ ಸೀಸದ ಮೊಹರನ್ನು ಖಚಿತವಾಗಿ ಹಾಕಿರಬೇಕು. ರಸಗೊಬ್ಬರ ಖರೀದಿಸಿದಾಗ ಚೀಲಗಳನ್ನು ತೂಕ ಮಾಡಿ ಖಾತ್ರಿ ಪಡಿಸಿಕೊಳ್ಳಬೇಕು ಎಂದು ರೈತರಿಗೆ ಸಲಹೆ ನೀಡಿದರು.
ಚೀಲದ ಮೇಲೆ ‘ರಸಗೊಬ್ಬರ’ ಎಂದು ಮುದ್ರಿತವಾಗಿರಬೇಕು. ತಯಾರಕರ ಹೆಸರು, ವಿಳಾಸ, ರಸಗೊಬ್ಬರದ ಹೆಸರು, ಬ್ರಾೃಂಡ್ ನಮೂದಿಸಿರಬೇಕು. ರಸಗೊಬ್ಬರದಲ್ಲಿರುವ ಕನಿಷ್ಠ ಶೇಕಡವಾರು ಪೋಷಕಾಂಶಗಳ ವಿವರ, ಗರಿಷ್ಠ ಮಾರಾಟ ಬೆಲೆ ಇರಬೇಕು. ಗರಿಷ್ಠ ಮತ್ತು ನಿವ್ವಳ ತೂಕವಿರಬೇಕು. ರಸಗೊಬ್ಬರಗಳ ಮಿಶ್ರಣಗಳು, ಸಿಂಗಲ್ ಸೂಪರ್ ಪಾಸ್ಪೇಟ್, ಲಘು ಪೋಷಕಾಂಶಗಳು, ಅವುಗಳ ಮಿಶ್ರಣಗಳ ಚೀಲ ಅಥವಾ ಡಬ್ಬಗಳ ಮೇಲೆ ಬ್ಯಾಚ್ ಸಂಖ್ಯೆ, ನೋಂದಣಿ ಸಂಖ್ಯೆ ನಮೂದಿಸಿರಬೇಕು ಎಂದು ತಿಳಿಸಿದರು.
ರಸಗೊಬ್ಬರ ಖರೀದಿಸಿದ್ದಕ್ಕೆ ನಮೂನೆ ‘ಎಂ’ ನಲ್ಲಿ ರಸೀದಿ ಪಡೆಯಬೇಕು. ಅದರಲ್ಲಿ ರಸಗೊಬ್ಬರಗಳ ವಿವರ ಭರ್ತಿ ಮಾಡಿರಬೇಕು. ರೈತರು, ಮಾರಾಟಗಾರರ ಸಹಿ ಕಡ್ಡಾಯವಾಗಿರಬೇಕು. ಈ ಎಲ್ಲ ಅಂಶಗಳನ್ನು ರೈತರು ಗಮನದಲ್ಲಿಟ್ಟುಕೊಂಡು ರಸಗೊಬ್ಬರ, ಬಿತ್ತನೆ ಬೀಜ, ಕೀಟನಾಶಕ ಮಾರಾಟಗಾರರೊಂದಿಗೆ ವ್ಯವಹರಿಸಬೇಕು ಎಂದು ರೈತರಿಗೆ ತಿಳಿಸಿದರು.
ಡೀಲರ್‌ಗಳು ರೈತರೊಂದಿಗೆ ಅನುಚಿತವಾಗಿ ವರ್ತಿಸುವುದು ಅಥವಾ ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಹಾಗೂ ನಿಯಮಗಳನ್ನು ಮೀರಿ ನಡೆದುಕೊಳ್ಳುವುದು ಕಂಡುಬಂದಲ್ಲಿ ಕೂಡಲೇ ಹತ್ತಿರದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ಪ್ರಸ್ತುತ ತಾಲೂಕಿನ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲೂ ಸಹಾಯಧನದಲ್ಲಿ ಮುಸುಕಿನ ಜೋಳ, ಹೆಸರು, ಉದ್ದು, ಅಲಸಂದೆ ಬಿತ್ತನೆ ಬೀಜಗಳು ಲಭ್ಯ ಇವೆ. ರೈತರು ಈ ಸೌಲಭ್ಯ ಪಡೆಯಲು ತಮ್ಮ ಆಧಾರ್ ಸಂಖ್ಯೆ ಅಥವಾ ಎಫ್‌ಐಡಿ ಸಂಖ್ಯೆ ಮತ್ತು ಎಸ್ಸಿ-ಎಸ್ಟಿ ರೈತರು ಜಾತಿ ಪ್ರಮಾಣಪತ್ರದ ಪ್ರತಿ ಒದಗಿಸಬೇಕು ಎಂದು ತಿಳಿಸಿದರು.
ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಕೆ.ಬಿ.ಲಿಂಗರಾಜು, ರೈತ ಮುಖಂಡರಾದ ವರಕೊಡು ಕೃಷ್ಣೇಗೌಡ, ವೆಂಕಟೇಶ್, ವಿಜಯೇಂದ್ರ, ಕಂದಾಯ ಇಲಾಖೆಯ ಶಿರಸ್ತೇದಾರ್ ಲೋಕೇಶ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಶಶಿಧರ್, ಕೃಷಿ ಅಧಿಕಾರಿಗಳಾದ ಪಿ.ಎನ್.ವೆಂಕಟೇಶ್, ಆನಂದ ಕುಮಾರ್, ಪಿ.ಎನ್.ಜೀವನ್, ಸಿ.ಎಂ.ಕಾರ್ತಿಕ್ ಮತ್ತು ಸಿಬ್ಬಂದಿ ಹಾಜರಿದ್ದರು.