

ಗುರುಮಠಕಲ್: ಕುಡಿಯುವ ನೀರಿಗಾಗಿ ಸರ್ಕಾರ ನೀಡಿರುವ ಅನುದಾನ ಯಾವುದಕ್ಕೂ ಸಾಲದು, ಈ ಕುರಿತು ಇನ್ನೂ ಹೆಚ್ಚಿನ ಅನುದಾನಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಶಾಸಕ ಶರಣಕಗೌಡ ಕಂದಕೂರ ಹೇಳಿದರು.
ಪಟ್ಟಣದ ಹೊರವಲಯದಲ್ಲಿ ನಗರಾಭಿವೃದ್ಧಿ ಇಲಾಖೆ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಪುರಸಭೆ ಆಶ್ರಯದಲ್ಲಿ ಗುರುಮಠಕಲ್ ಪಟ್ಟಣಕ್ಕೆ ಭೀಮಾನದಿ ಮೂಲದಿಂದ ಕೇಂದ್ರ ಪುರಸ್ಕೃತ ಅಮೃತ ೨.೦ ಯೋಜನೆಯಡಿ ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿಗೆ ೨೪.೭೫ ಕೋಟಿ ರೂ. ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಸರ್ಕಾರ ನೀಡಿರುವ ಈ ಅನುದಾನ ಯಾವುದಕ್ಕೂ ಸಾಲುವುದಿಲ್ಲ. ಈ ಕುರಿತು ಈಗಾಗಲೇ ಸಂಬAಧಿಸಿದ ಸಚಿವರಿಗೆ ಮನವರಿಕೆ ಮಾಡಿದ್ದು, ಇನ್ನೂ ೧೫ರಿಂದ ೨೦ ಕೋಟಿ ರೂ. ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. ಮತಕ್ಷೇತ್ರದ ಅಭಿವೃದ್ದಿಗಾಗಿ ಸರ್ಕಾರದಿಂದ ಹಲವು ಹಲವು ಯೋಜನೆ ತಂದಿದ್ದು, ಅಧಿಕಾರಿಗಳು ಕಾಮಗಾರಿಯನ್ನು ಗುಣಮಟ್ಟ ಮತ್ತು ಸಕಾಲದಲ್ಲಿ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.
ಪ್ರಜಾಸೌಧ, ಉಪ ನೊಂದಣಿ ಕಚೇರಿ, ಉನ್ನತ ದರ್ಜೆ ಆಸ್ಪತ್ರೆ, ಬಿಇಒ ಕಚೇರಿ ಮುಂತಾದ ಕಚೇರಿಗಳ ಸ್ಥಾಪನೆಗೆ ಶ್ರಮಿಸಲಾಗುತ್ತಿದೆ. ಅಪರಾಧ ಪ್ರಮಾಣ ತಡೆಗಟ್ಟಲು ಮುನ್ನೆಚ್ಚರಿಕೆಯಾಗಿ ಸಿಸಿ ಕ್ಯಾಮರ ಅಳವಡಿಸಲಾಗಿದೆ ಎಂದು ಹೇಳಿದರು.
ಈ ವೇಳೆ ಪುರಸಭೆ ಅಧ್ಯಕ್ಷೆ ಜಯಶ್ರೀ ಪೊಲೀಸ್ ಪಾಟೀಲ್, ಉಪಾಧ್ಯಕ್ಷೆ ರೇಣುಕಾ ಪಡಿಗೆ, ಕಲಬುರಗಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಅಭಿಯಂತರ ನರಸಿಂಹರಡ್ಡಿ ಎನ್, ಯಾದಗಿರಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರ ಅಶೋಕ ಕುಮಾರ, ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ, ತಹಸೀಲ್ದಾರ್ ಶಾಂತಗೌಡ ಬಿರದಾರ, ತಾಪಂ ಇಒ ಅಮರೇಶ ಪಾಟೀಲ್, ಸಿಡಿಪಿಒ ಶರಣಬಸಪ್ಪ, ಪಿಐ ವೀರಣ್ಣ ಹೊಸಮನಿ, ಜೆಡಿಎಸ್ ಜಿಲಾಧ್ಯಕ್ಷ ಸುಭಾಷ ಕಟಕಟೆ, ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ಶರಣು ಅವುಂಟಿ, ಜೆಡಿಎಸ್ ಬ್ಲಾಕ್ ಅಧ್ಯಕ್ಷ ಪ್ರಕಾಶ ನೀರೆಟಿ, ಮಾಜಿ ತಾಪಂ ಅಧ್ಯಕ್ಷ ಈಶ್ವರ ರಾಠೋಡ, ಬಸಣ್ಣ ದೇವರಹಳ್ಳಿ, ಮಲ್ಲಿಕಾರ್ಜುನ ಅರುಣಿ, ರಘುನಾಥರೆಡ್ಡಿ ಗವಿನೋಳ ಇತರರಿದ್ದರು.