

ರಾಮದುರ್ಗ: ಮತಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡಿಸಿ, ಜನರ ಸಮಸ್ಯೆಗಳ ನಿವಾರಣೆಗೆ ಶ್ರಮಿಸಿದ್ದೇನೆ. ಮುಂಬರುವ ದಿನಗಳಲ್ಲಿಯೂ ಜನರ ಇನ್ನುಳಿದ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರದಿಂದ ಅಗತ್ಯ ಅನುದಾನ ತರಲು ಪ್ರಾಮಾಣಿಕ ಪ್ರಯತ್ನಿಸುತ್ತೇನೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಭರವಸೆ ನೀಡಿದರು.
60 ಲಕ್ಷ ರೂ. ವೆಚ್ಚದಲ್ಲಿ ತಾಲೂಕಿನ ಹನಮಸಾಗರ, ಚುಂಚನೂರ, ಬೆನಕಟ್ಟಿಯ ಆಯ್ದ ಭಾಗಗಳಲ್ಲಿ ರಸ್ತೆ ಸುಧಾರಣೆ, ಕಿಲ್ಲಾ ತೊರಗಲ್ ಗ್ರಾಮದಲ್ಲಿ ಎಸ್‌ಸಿಪಿ/ಟಿಎಸ್‌ಪಿ ಯೋಜನೆ ಅಡಿಯಲ್ಲಿ 28 ಲಕ್ಷ ರೂ. ವೆಚ್ಚದಲ್ಲಿ ಸಿ.ಸಿ ರಸ್ತೆ ನಿರ್ಮಾಣ, 70 ಲಕ್ಷ ರೂ. ವೆಚ್ಚದಲ್ಲಿ ಸಿ.ಸಿ ರಸ್ತೆ ನಿರ್ಮಾಣ, 30 ಲಕ್ಷ ರೂ. ವೆಚ್ಚದಲ್ಲಿ ಶ್ರೀಪತಿ ನಗರ ನಾಗಪ್ಪನ ಕಟ್ಟೆ ಹತ್ತಿರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ರಾಮದುರ್ಗ ಸೇರಿ ತಾಲೂಕಿನ ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು, ಮೂಲ ಸೌಲಭ್ಯಗಳನ್ನು ಕಲ್ಪಿಸಲು ಸಾಕಷ್ಟು ಶ್ರಮಿಸಿದ್ದೇನೆ. ವಾರ್ಡ್ ಹಾಗೂ ಗ್ರಾಮಸ್ಥರು ಗುತ್ತಿಗೆದಾರರೊಂದಿಗೆ ಅನವಶ್ಯಕ ತಂಟೆ ತಕರಾರು ಮಾಡದೆ ಗುಣಮಟ್ಟದ ಕಾಮಗಾರಿ ಮಾಡಿಸಿಕೊಳ್ಳಬೇಕು. ಕಳಪೆ ಕಾಮಗಾರಿ ಮಾಡುತ್ತಿರುವುದು ಕಂಡುಬಂದಲ್ಲಿ, ನಮ್ಮ ಗಮನಕ್ಕೆ ತಂದಲ್ಲಿ ಅದನ್ನು ಸರಿಪಡಿಸುವ ಕೆಲಸ ಮಾಡುತ್ತೇನೆ ಎಂದರು. ಕಿಲ್ಲಾ ತೊರಗಲ್ ಗ್ರಾಮದಲ್ಲಿ ಗಚ್ಚಿನ ಹಿರೇಮಠದ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಹಣಮಸಾಗರ ಗ್ರಾಮದಲ್ಲಿ ಜಿಪಂ ಮಾಜಿ ಸದಸ್ಯ ಮಾರುತಿ ತುಪ್ಪದ, ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಬಿ.ಎಂ. ತುಪ್ಪದ, ಗುತ್ತಿಗೆದಾರ ಸಿದ್ದು ಕಡ್ಲೆಪ್ಪನವರ, ರಾವಸಾಹೇಬ ಶಿಂಧೆ, ಹುಸೇನಬಿ ಬಾಲದಾರ, ಅಬ್ಬಾಸಾಹೇಬ ಶಿಂಧೆ, ರಾಮದುರ್ಗ ಪಟ್ಟಣದಲ್ಲಿ ಪುರಸಭೆ ಅಧ್ಯಕ್ಷ ರಘುನಾಥ ರೇಣಕೆ, ಉಪಾಧ್ಯಕ್ಷ ನಾಗರಾಜ ಕಟ್ಟಿಮನಿ ಇತರರಿದ್ದರು.