

ಆರ್.ಕೃಷ್ಣ ಮೈಸೂರು
ನಗರದ ಪ್ರವಾಸಿ ತಾಣಗಳಲ್ಲಿ ಪುಟ್ಟ ಮಕ್ಕಳನ್ನು ಇರಿಸಿಕೊಂಡು ಭಿಕ್ಷಾಟನೆ ಮಾಡುವ ದಂಧೆ ಹೆಚ್ಚಾಗಿದ್ದು, ಇದರಿಂದ ಪ್ರವಾಸಿಗರು ಕಿರಿಕಿರಿ ಅನುಭವಿಸುವಂತಾಗಿದೆ.
ಟ್ರಾಫಿಕ್ ಸಿಗ್ನಲ್, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಇರುತ್ತಿದ್ದವರನ್ನು ಪೊಲೀಸರು, ಮಕ್ಕಳ ರಕ್ಷಣಾ ಸಮಿತಿಯವರು ಕಾರ್ಯಾಚರಣೆ ನಡೆಸಿ ಎಚ್ಚರಿಕೆ ನೀಡಿದ್ದರಿಂದ ಭಿಕ್ಷಾಟನೆ ಮಾಡುವವರು ಈಗ ಪ್ರವಾಸಿ ತಾಣಗಳ ಮೊರೆ ಹೋಗುತ್ತಿದ್ದಾರೆ.
ಹೊರ ರಾಜ್ಯ, ಜಿಲ್ಲೆಗಳಿಂದ ಬರುವ ಪ್ರವಾಸಿಗರು ಅದರಲ್ಲೂ ವಿದೇಶಿ ಪ್ರವಾಸಿಗರಲ್ಲಿ ಕನಿಕರ ಬರುವಂತೆ ಪೀಡಿಸಿ ಭಿಕ್ಷಾಟನೆ ಮಾಡುವುದು ನಡೆಯುತ್ತಿದೆ. ಭಿಕ್ಷಾಟನೆ ನಿರ್ಮೂಲನೆ ಕಾಯ್ದೆಯಡಿ ಭಿಕ್ಷಾಟನೆ ಮಾಡುವುದನ್ನು ಸರ್ಕಾರ ನಿಷೇಧಿಸಿದ್ದರೂ ಹೊರ ಜಿಲ್ಲೆ, ಹೊರ ರಾಜ್ಯದಿಂದ ಬಂದಿರುವವರು ಮಕ್ಕಳನ್ನು ಭಿಕ್ಷಾಟನೆಗೆ ಬಳಸಿಕೊಳ್ಳುತ್ತಿದ್ದಾರೆ.
ಹಿಂದೆ ಇದರ ವಿರುದ್ಧ ಜಾಗೃತಿ ಮೂಡಿಸಲು ಕ್ರಮಕೈಗೊಂಡು ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಹೀಗೆ ಕಾರ್ಯಾಚರಣೆ ನಡೆಸಿ ರಕ್ಷಿಸಿದ ಮಕ್ಕಳನ್ನೇ ಮತ್ತೆ ಭಿಕ್ಷಾಟನೆಗೆ ಪಾಲಕರೇ ಬಳಸುತ್ತಿರುವುದು ಕಾರ್ಯಾಚರಣೆಗೆ ತಲೆನೋವಾಗಿ ಪರಿಣಮಿಸಿದೆ.
ಸ್ಲಮ್ ನಿವಾಸಿ ಮಕ್ಕಳು ಹೆಚ್ಚಾಗಿ ಭಿಕ್ಷಾಟನೆ ಮಾಡುತ್ತಿದ್ದಾರೆ. ಸ್ಲಮ್‌ಗಳಲ್ಲಿ ಗಾಂಜಾ ಮಾರಾಟದಲ್ಲೂ ಮಕ್ಕಳನ್ನು ಬಳಕೆ ಮಾಡಲಾಗುತ್ತಿದೆ. ಇದರ ಹಿಂದೆ ದೊಡ್ಡ ಜಾಲವೇ ಇರುವ ಶಂಕೆ ಇದೆ. ಆದರೆ ಭಿಕ್ಷಾಟನೆಯಲ್ಲಿ ಇರುವವರನ್ನು ರಕ್ಷಣೆ ಮಾಡಿ ಅವರಿಗೆ ಸರ್ಕಾರ ಯಾವ ರೀತಿಯ ಪುನರ್ವಸತಿ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂಬುದು ಸ್ಪಷ್ಟವಾಗಿಲ್ಲ. ಅವಕಾಶ ವಂಚಿತರಾಗಿ ಭಿಕ್ಷೆ ಬೇಡುತ್ತಾರೆ, ಈ ನಿಟ್ಟಿನಲ್ಲಿ ಅವಕಾಶವನ್ನು ಹೇಗೆ ಕಲ್ಪಿಸಿಕೊಡಲಾಗುತ್ತಿದೆ ಎಂಬುದು ಬಹುಮುಖ್ಯವಾಗಿದೆ.
ರಾಜ್ಯದಲ್ಲಿ ದೊಡ್ಡಜಾಲ
ಕೆಲ ವರ್ಷಗಳ ಹಿಂದೆ ರಾಜ್ಯದಲ್ಲಿ ಭಿಕ್ಷಾಟನೆ ಮಾಫಿಯಾದಲ್ಲಿ ಸಿಲುಕಿದ್ದ 1,220 ಮಕ್ಕಳನ್ನು ಪೊಲೀಸರು ಪತ್ತೆಹಚ್ಚಿ, ಪುನರ್ವಸತಿ ಕಲ್ಪಿಸಿದ್ದಾರೆ. ಬೀದರ್, ಕಲಬುರಗಿ, ಮೈಸೂರು, ಬೆಂಗಳೂರು, ಹಾವೇರಿ, ಚಿತ್ರದುರ್ಗ, ರಾಮನಗರ, ಬಳ್ಳಾರಿಯಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿದ್ದವು. ಮೈಸೂರಿನಲ್ಲಿ 107, ಬಳ್ಳಾರಿಯಲ್ಲಿ 73,ಬೆಂಗಳೂರು ನಗರ 73, ಬೀದರ್ 111, ಕೊಪ್ಪಳ 41, ಚಿಕ್ಕಮಗಳೂರು 47 ಮಕ್ಕಳನ್ನು ಭಿಕ್ಷಾಟನೆಗೆ ಬಳಕೆ ಮಾಡುತ್ತಿರುವುದನ್ನು ಪತ್ತೆ ಹಚ್ಚಲಾಗಿತ್ತು. 2012ರಲ್ಲಿ ರಾಜ್ಯದಲ್ಲಿ ನಡೆಸಿರುವ ಭಿಕ್ಷುಕರ ಗಣತಿಯ ಪ್ರಕಾರ, 20,758 ಜನರು ಭಿಕ್ಷುಕರಿರುವುದು ಗೊತ್ತಾಗಿದೆ. ರಾಜ್ಯ ರಾಜಧಾನಿಯೊಂದರಲ್ಲೇ 6 ಸಾವಿರಕ್ಕೂ ಅಧಿಕ ಭಿಕ್ಷುಕರಿರುವುದು ಕಂಡುಬಂದಿತ್ತು.
ನಿಯಂತ್ರಣಕ್ಕೆ ಇಲಾಖೆಯ ಕ್ರಮಗಳೇನು?
ಭಿಕ್ಷಾಟನೆ ನಿರ್ಮೂಲನೆ ಕಾಯ್ದೆಯಡಿ ಭಿಕ್ಷಾಟನೆಯಲ್ಲಿ ತೊಡಗಿರುವ ಮಹಿಳೆಯರೊಂದಿಗೆ ಆರು ವರ್ಷದೊಳಗಿನ ಮಗುವಿದ್ದರೆ ಅಂಥ ಮಹಿಳೆಯರನ್ನು ರಕ್ಷಿಸಿ ಮಗುವಿನ ಜತೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸ್ವೀಕಾರ ಕೇಂದ್ರದಲ್ಲಿ ಪುನರ್ವಸತಿ ಕಲ್ಪಿಸಲಾಗುತ್ತಿದೆ
ಆರು ವರ್ಷ ಮೇಲ್ಪಟ್ಟ ಮಕ್ಕಳಿದ್ದರೆ ಅಂಥ ಮಕ್ಕಳನ್ನು ಬಾಲನ್ಯಾಯ ಕಾಯ್ದೆ 2015ರ ಅನ್ವಯ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ ಮಕ್ಕಳ ವಯಸ್ಸಿಗೆ ಅನುಗುಣವಾಗಿ ಪಾಲನಾ ಕೇಂದ್ರಗಳಲ್ಲಿ ಆಶ್ರಯ ಕಲ್ಪಿಸಲಾಗುತ್ತಿದೆ. ಮಕ್ಕಳ ಭಿಕ್ಷಾಟನೆ ಸಾಮಾಜಿಕ ಪಿಡುಗಾಗಿದ್ದು ಇದು ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆ ಮಾತ್ರವಲ್ಲ, ಕುಟುಂಬದ ಪರಿಸ್ಥಿತಿ ಸುಧಾರಿಸದ ಹೊರತಾಗಿ ಈ ಸಮಸ್ಯೆ ಬಗೆಹರಿಯುವುದಿಲ್ಲ.
ತೃತೀಯ ಲಿಂಗಿಗಳು
ಪುಟ್ಟ ಮಕ್ಕಳನ್ನು ಭಿಕ್ಷಾಟನೆಗೆ ಬಳಕೆ ಮಾಡುತ್ತಿರುವುದು ಒಂದೆಡೆಯಾದರೆ ತೃತೀಯ ಲಿಂಗಗಳು ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ. ವಾಣಿಜ್ಯ ಮಳಿಗೆಗಳು, ಪ್ರಮುಖ ಬೀದಿಗಳು, ಸಿಗ್ನಲ್, ದೇವಸ್ಥಾನ, ಕಲ್ಯಾಣ ಮಂಟಪಗಳು ಸೇರಿದಂತೆ ಇನ್ನಿತರ ಕಡೆಗಳಲ್ಲಿ ತಂಡ, ತಂಡವಾಗಿ ಬಂದು ಹಣ ವಸೂಲಿ ಮಾಡಲಾಗುತ್ತಿದೆ. ಒಂದೊಮ್ಮೆ ಹಣ ಕೊಡದಿದ್ದರೆ, ಕೊಟ್ಟರೂ ಅವರು ಕೇಳಿದಷ್ಟು ನೀಡದಿದ್ದರೆ ಜಗಳಕ್ಕೆ ಇಳಿಯುವುದು, ಅಸಭ್ಯವಾಗಿ ವರ್ತಿಸುವ ಘಟನೆಗಳು ಆಗಾಗ್ಗೆ ನಡೆಯುತ್ತಿವೆ.
ಜನರಲ್ಲಿ ಮೂಡದ ಜಾಗೃತಿ
ನಗರದ ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯ ಎಲ್ಲಮ್ಮ ಹಾಗೂ ಸಾಯಿಬಾಬಾ ಕಾಲನಿಯಲ್ಲಿ ಮಕ್ಕಳನ್ನು ಇರಿಸಿಕೊಂಡು ಹೆಚ್ಚು ಭಿಕ್ಷಾಟನೆ ನಡೆಸಲಾಗುತ್ತಿದೆ ಎಂದು ಗುರುತು ಮಾಡಲಾಗಿದೆ.
ಇಂಥ ಕಾಲನಿಗಳಲ್ಲಿ ಪೊಲೀಸರು, ಠಾಣೆ ಪ್ರತಿನಿಧಿಗಳು, ಮಾನವ ಕಳ್ಳಸಾಗಣೆ ನಿಗ್ರಹ ದಳ ಹಾಗೂ ಮಕ್ಕಳ ವಿಶೇಷ ಘಟಕ ಅಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳ ನೆರವಿನಿಂದ ಜಾಗೃತಿ ಕಾರ್ಯಕ್ರಮ ನಡೆಸಿ ಭಿಕ್ಷಾಟನೆ ಮಾಡದಂತೆ ಜಾಗೃತಿ ಮೂಡಿಸಲಾಗಿದೆ. ಆದರೂ ಮತ್ತೆ ಮತ್ತೆ ಮಕ್ಕಳನ್ನು ಭಿಕ್ಷಾಟನೆಗೆ ಕಳುಹಿಸುತ್ತಿರುವುದು, ಪುಟ್ಟ ಮಕ್ಕಳನ್ನು ಭಿಕ್ಷಾಟನೆಗೆ ಬಳಸುತ್ತಿರುವುದು ಮುಂದುವರಿದಿದೆ.
ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ಮಕ್ಕಳ ಭಿಕ್ಷಾಟನೆ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ. ಮಕ್ಕಳ ಭಿಕ್ಷಾಟನೆಯ ಹಿಂದೆ ವ್ಯವಸ್ಥಿತವಾದ ಜಾಲ ಕೆಲಸ ಮಾಡುತ್ತಿದೆ. ನಗರದ ರಸ್ತೆ ಬದಿಗಳಲ್ಲಿ ಹಾಗೂ ಸಿಗ್ನಲ್‌ಗಳಲ್ಲಿ ಆಟಿಕೆ, ಪೆನ್ನು ಮಾರಾಟ ಮಾಡುತ್ತಿರುವ ಹಾಗೂ ಭಿಕ್ಷಾಟನೆಯಲ್ಲಿ ತೊಡಗಿಕೊಂಡಿರುವ ಕಂಡುಬರುತ್ತಿದ್ದು, ಮಕ್ಕಳ ಉಚಿತ ಸಹಾಯವಾಣಿ 1098ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು.
ಎಸ್. ಶಶಿಕುಮಾರ್
ಸಂಯೋಜಕರು, ಮಕ್ಕಳ ಸಹಾಯವಾಣಿ
ಪ್ರವಾಸಿ ತಾಣವಾಗಿರುವ ನಗರದಲ್ಲಿ ಭಿಕ್ಷಾಟನೆ ದಂಧೆಗೆ ಕಡಿವಾಣ ಹಾಕಲು ಪೊಲೀಸರು ಮುಂದಾಗಿದ್ದಾರೆ. ಮಕ್ಕಳು ಹಾಗೂ ಮಹಿಳೆಯರನ್ನು ಭಿಕ್ಷಾಟನೆ ದಂಧೆಗೆ ದೂಡುತ್ತಿರುವುದು ಸಾರ್ವಜನಿಕರ ಗಮನಕ್ಕೆ ಬಂದರೆ ಪೊಲೀಸರಿಗೆ ಮಾಹಿತಿ ನೀಡಬಹುದು.
ಬಿ.ರಮೇಶ್ ಪೊಲೀಸ್ ಆಯುಕ್ತ