

ವಿರಾಜಪೇಟೆ: ಇಲ್ಲಿನ ಮುಖ್ಯರಸ್ತೆ ಸೇರಿದಂತೆ ನಗರದ ಹಲವು ವಾರ್ಡ್‌ಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಜನಸಾಮಾನ್ಯರು ಒಬ್ಬಂಟಿಯಾಗಿ ಓಡಾಡುವುದು ಕಷ್ಟವಾಗಿದೆ.
ಹತ್ತರಿಂದ ಹದಿನೈದು ನಾಯಿಗಳ ಹಿಂಡು ನಗರದ ದೊಡ್ಡಟ್ಟಿ ಚೌಕಿ, ಮೂರ್ನಾಡು ರಸ್ತೆ, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಓಡಾಡುವ ಮೂಲಕ ಭಯ ಹುಟ್ಟಿಸುತ್ತಿವೆ.
ಬೀದಿನಾಯಿಗಳು ಜನರ ಮೇಲೆ ಅದರಲ್ಲೂ ಮಹಿಳೆಯರು ಮತ್ತು ಮಕ್ಕಳು ಹಾಗೂ ಬೈಕ್ ಸವಾರರ ಮೇಲೆ ದಾಳಿ ಮಾಡುತ್ತಿದ್ದು, ಈ ಕುರಿತು ಹಲವು ಪ್ರಕರಣಗಳು ವರದಿಯಾಗಿವೆ. ಪಶುಪಾಲನಾ ಇಲಾಖೆ ವೈದ್ಯರು ಮತ್ತು ಪುರಸಭೆ ಮುಖ್ಯಾಧಿಕಾರಿಗಳು ಈ ಬಗ್ಗೆ ಹಲವು ಬಾರಿ ಚರ್ಚೆ ಮಾಡಿದರೂ ಪ್ರಯೋಜನವಾಗಿಲ್ಲ.
ಪುರಸಭೆಯ ಕಸದ ತೊಟ್ಟಿಗಳಲ್ಲಿ ಸಾರ್ವಜನಿಕರು ಹಾಕಿದ ಕಸವನ್ನು ರಸ್ತೆಗೆ ಎಳೆದು ತಂದು ತಿನ್ನುತ್ತಿದ್ದು, ಇದರಿಂದ ಆ ರಸ್ತೆಗಳಲ್ಲಿ ಓಡಾಡುವುದು ಕಷ್ಟಕರವಾಗುತ್ತಿದೆ. ಎಷ್ಟೋ ಬಾರಿ ದ್ವಿಚಕ್ರವಾಹನ ಸವಾರರು ನಾಯಿ ದಾಳಿಗೆ ಹೆದರಿ ರಸ್ತೆ ಮೇಲೆ ಬಿದ್ದು ಗಾಯಗೊಂಡಿದ್ದಾರೆ. ಪುರಸಭೆ ಇದಕ್ಕೆ ಕಡಿವಾಣ ಹಾಕದಿದ್ದಲ್ಲಿ ಸಾರ್ವಜನಿಕರು ಪುರಸಭೆಯ ಮುಂದೆ ಬಂದು ಪ್ರತಿಭಟಿಸಬೇಕಾಗುತ್ತದೆ ಎನ್ನುತ್ತಾರೆ ವಿರಾಜಪೇಟೆ ನಿವಾಸಿ ಶ್ರೀಕಾಂತ್ ಶೆಟ್ಟಿ.
ಇನ್ನು ತೆಲುಗರ ಬೀದಿಯಲ್ಲಿ ಬೆಳಗಿನ ಜಾವ ದೇವಸ್ಥಾನಕ್ಕೆ ಹೋಗುವವರು ಭಯಪಡುವಂತಾಗಿದೆ. ಪೌರಕಾರ್ಮಿಕರಿಗೆ ರಸ್ತೆ ಸ್ವಚ್ಛ ಮಾಡಲಾಗುತ್ತಿಲ್ಲ. ಪುರಸಭೆ ಇದಕ್ಕೆ ಕಡಿವಾಣ ಹಾಕಲೇಬೇಕು ಎನ್ನುತ್ತಾರೆ ತೆಲುಗರ ಬೀದಿ ನಿವಾಸಿ ಟಿ.ಡಿ.ಲೋಕೇಶ್.
ಹಲವು ಬಾರಿ ಪುರಸಭೆ ಸಾಮಾನ ್ಯಸಭೆಗಳಲ್ಲಿ ಸದಸ್ಯರಾದ ಮೊಹಮ್ಮದ್ ರಾಫಿ, ಅಗಸ್ಟಿನ್ ಬೆನ್ನಿ ಈ ಬಗ್ಗೆ ಪ್ರಶ್ನೆ ಮಾಡಿದಾಗ, ನಾಯಿಗಳನ್ನು ನಾವು ಏನು ಮಾಡಲು ಬರುವುದಿಲ್ಲ. ಪ್ರಾಣಿದಯ ಸಂಘದವರು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸಾ ಮಾಡಲು ವಿರೋಧ ವ್ಯಕ್ತಪಡಿಸುತ್ತಾರೆ ಎನ್ನುವ ಉತ್ತರವಷ್ಟೇ ಸಿಕ್ಕಿದೆಯೇ ಹೊರತು ಸಮಸ್ಯೆಗೆ ಪರಿಹಾರ ದೊರೆತಿಲ್ಲ. ಪುರಸಭೆ ಮುಂದೆ ಪ್ರತಿಭಟನೆ ಮಾಡುವುದೊಂದೇ ಉಳಿದಿರುವ ಮಾರ್ಗ ಎನ್ನುತ್ತಾರೆ ಬೀದಿನಾಯಿಗಳಿಂದ ಬೇಸತ್ತ ಸಾರ್ವಜನಿಕರು.
ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಶಾಲಾ-ಕಾಲೇಜು ಮಕ್ಕಳು ರಸ್ತೆಯಲ್ಲಿ ನಡೆದು ಹೋಗುವುದು ಕಷ್ಟವಾಗಿದೆ. ಆದಷ್ಟು ಬೇಗ ಪುರಸಭೆ ಕ್ರಮಕೈಗೊಳ್ಳಬೇಕು ಇಲ್ಲದಿದ್ದರೆ ಅಪಾಯ ಖಂಡಿತ.
ಅನಿಲ್ಕುಮಾರ್ ತಾಲೂಕು ಅಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡರ ಬಣ
ಬೀದಿನಾಯಿಗಳ ಹಾವಳಿ ತಡೆಗೆ ಕ್ರಮವಹಿಸಲಾಗುತ್ತಿದೆ. ಜಿಲ್ಲಾ ಪಶುಪಾಲನಾ ಇಲಾಖೆ ಅಧಿಕಾರಿಗಳ ಬಳಿ ವಿಷಯ ಪ್ರಸ್ತಾಪ ಮಾಡಲಾಗಿದೆ. ಅವರು ಬೀದಿನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲು ಎನ್‌ಜಿಒಗೆ ಸೂಚನೆ ಕೊಟ್ಟಿದ್ದಾರೆ. ಎಲ್ಲ ಪ್ರಕ್ರಿಯೆಗಳು ಮುಗಿದ ಬಳಿಕ ಬೀದಿ ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲಾಗುವುದು.
ಚಂದ್ರಕುಮಾರ್ ಮುಖ್ಯಾಧಿಕಾರಿ, ಪುರಸಭೆ ವಿರಾಜಪೇಟೆ