

ರಟ್ಟಿಹಳ್ಳಿ: ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳ ಗುಡ್ಡಗಾಡು, ಮನೆ ಅಕ್ಕಪಕ್ಕ, ಸರ್ಕಾರಿ ಕಚೇರಿ, ಜಮೀನು, ರಸ್ತೆ ಬದಿಗಳಲ್ಲಿ ಸ್ವಾಭಾವಿಕವಾಗಿ ಮತ್ತು ರೈತರು ಬೆಳೆಸಿದ ಗಂಧದ ಮರಗಳು ಕಳ್ಳರ ಪಾಲಾಗುತ್ತಿವೆ.
ಇತ್ತೀಚಿನ ದಿನಗಳಲ್ಲಿ ಗಂಧದ ಮರ ಕಳವು ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೊಲೀಸ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ.
ಸ್ಥಳೀಯ ಈಶ್ವರ ದೇವಸ್ಥಾನದ ಬಳಿ ಗ್ರಾಪಂ ಮಾಜಿ ಸದಸ್ಯ ಎಸ್.ಬಿ. ಪಾಟೀಲ ಅವರ ನಿವಾಸದಲ್ಲಿನ ಗಂಧದ ಎರಡು ಮರಗಳನ್ನು ಬುಧವಾರ ಕಡಿದು ಸಾಗಿಸಲಾಗಿದೆ. ಗ್ರಾಪಂ ಸದಸ್ಯ ಶಂಕ್ರರಗೌಡ ಚೆನ್ನಗೌಡ್ರ, ಶಿಕ್ಷಕ ದಯಾನಂದ ಮಡಿವಾಳರ, ಕಡೂರ ಗ್ರಾಮದ ಶಂಕರಗೌಡ ಶಿರಗಂಬಿಯವರ ಜಮೀನಿನಲ್ಲಿ ಹಾಗೂ ಹೆಸ್ಕಾಂ ಇಲಾಖೆ ಕಚೇರಿ ಆವರಣದಲ್ಲಿನ ಗಂಧದ ಮರಗಳನ್ನು ಇತ್ತೀಚೆಗೆ ಕಳ್ಳರು ಕಡಿದು ಸಾಗಿಸಿದ್ದಾರೆ. ಹಗಲಲ್ಲಿ ಗಿಡಗಳನ್ನು ಗುರುತಿಸುವ ಕಳ್ಳರು, ರಾತ್ರಿ ವೇಳೆ ಕತ್ತರಿಸಿಕೊಂಡು ಹೋಗುತ್ತಿದ್ದಾರೆ.
ಮನೆಯ ಅಕ್ಕ ಪಕ್ಕ ಬೆಳೆಸಿದ ಗಂಧದ ಮರಗಳನ್ನು ಕಳ್ಳರು ರಾತ್ರಿ ವೇಳೆ ವಿದ್ಯುತ್ ಅಡಚಣೆಯಾದ ಸಂದರ್ಭದಲ್ಲಿ ಕಳ್ಳತನ ಮಾಡುತ್ತಿದ್ದಾರೆ. ರಸ್ತೆಯ ಅಕ್ಕ ಪಕ್ಕ ಸ್ವಾಭಾವಿಕವಾಗಿ ಬೆಳೆದ ಮರಗಳನ್ನೂ ಕಡಿದುಕೊಂಡು ಹೋಗುತ್ತಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ದೂರು ದಾಖಲಿಸಲಾಗುವುದು. | ಎಸ್.ಬಿ.ಪಾಟೀಲ ಮತ್ತು ಶಂಕರಗೌಡಿ ಶಿರಗಂಬಿ
ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಗಂಧದ ಮರ ಕಳ್ಳತನವಾಗಿರುವ ಬಗ್ಗೆ ಯಾರೂ ದೂರು ದಾಖಲಿಸಿಲ್ಲ. ಆದರೆ, ಕಳ್ಳತನವಾಗಿರುವ ಬಗ್ಗೆ ಮಾಹಿತಿ ಇದೆ. ರಾತ್ರಿ ವೇಳೆ ಗಸ್ತಿಗಾಗಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗುತ್ತದೆ. | ಯು.ಜೆ. ಶಶಿಕುಮಾರ, ಪಿಎಸ್ಐ
ಗಂಧದ ಮರಗಳಿರುವ ಪ್ರದೇಶಗಳಲ್ಲಿ ಸಂಬಂಧಿಸಿದ ಮಾಲೀಕರು ಮತ್ತು ರೈತರು ಹೆಚ್ಚಿನ ಗಮನ ಹರಿಸಬೇಕಾಗಿದೆ. ಅರಣ್ಯ ಇಲಾಖೆ ವತಿಯಿಂದ ರಾತ್ರಿ ಗಸ್ತಿಗಾಗಿ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. | ಹೇಮಗಿರಿ ಅಂಗಡಿ, ವಲಯ ಅರಣ್ಯಾಧಿಕಾರಿ