ಹೆಚ್ಚಿದ ಖರೀದಿ, ಸಂಗ್ರಹ ಭರಾಟೆ

h27-Channamma Circle
Published on

ಹುಬ್ಬಳ್ಳಿ: ಬುಧವಾರ ಬೆಳಗಾಗುವುದರೊಳಗೇ ಜಾರಿಗೆ ಬರಲಿರುವ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ನಗರದ ಜನರು ಮಂಗಳವಾರವೇ ದಿನಸಿ, ಔಷಧ ಸೇರಿ ಇತರ ಅಗತ್ಯ ವಸ್ತುಗಳ ಸಂಗ್ರಹದತ್ತ ಚಿತ್ತ ಹರಿಸುತ್ತಿರುವುದು ಕಂಡುಬಂತು.

ನಗರದ ಜನತಾ ಬಜಾರ್, ದುರ್ಗದ ಬೈಲ್, ಎಂ.ಜಿ. ಮಾರ್ಕೆಟ್ ಸೇರಿ ದಿನಸಿ-ತರಕಾರಿ ಮಾರುಕಟ್ಟೆಗಳಲ್ಲಿ ಜನರು ಬೆಳ್ಳಂಬೆಳಗ್ಗೆಯೇ ಖರೀದಿಗಾಗಿ ಬಂದಿದ್ದರು. ತರಕಾರಿ, ಆಹಾರ ಧಾನ್ಯ, ಔಷಧ ಇತ್ಯಾದಿಗಳನ್ನು ಜನರು ಖರೀದಿ ಮಾಡುತ್ತಿದ್ದರು. ಕೆಲವೆಡೆ ಪರಸ್ಪರ ಅಂತರ ಕಾಯ್ದುಕೊಂಡಿದ್ದ ಜನರು ಕಂಡುಬಂದರೆ ಇನ್ನೊಂದೆಡೆ ಗುಂಪುಗುಂಪಾಗಿ ಅಂಗಡಿಗಳ ಮುಂದೆ ಜಮಾಯಿಸಿದ್ದರು. ಅಂಗಡಿ ಮಾಲೀಕರು ತಿಳಿಹೇಳಿದರೂ ಕೇಳುತ್ತಿರಲಿಲ್ಲ. ಬೇಸತ್ತ ಕೆಲ ಅಂಗಡಿಕಾರರು, ಜನರ ಕೈಯಿಂದ ಚೀಟಿ ಪಡೆದು ದೂರ ನಿಲ್ಲಿಸುತ್ತಿದ್ದರು. ನಂತರ ಲಿಸ್ಟ್ ಪ್ರಕಾರ ಸಾಮಗ್ರಿ ತುಂಬಿದ ಚೀಲಕೊಟ್ಟು ಕಳುಹಿಸುತ್ತಿದ್ದರು.

ವಾಹನ ದಟ್ಟಣೆ: ಚನ್ನಮ್ಮ ವೃತ್ತ, ಕೋರ್ಟ್ ಸರ್ಕಲ್, ದೇಸಾಯಿ ವೃತ್ತ, ರೈಲ್ವೆ ನಿಲ್ದಾಣದ ರಸ್ತೆ ಸೇರಿ ಇತರೆಡೆ ಜನ ಸಂಚಾರ ಹೆಚ್ಚಿತ್ತು. ಅಲ್ಲಲ್ಲಿ ಪೊಲೀಸರು ಠಿಕಾಣಿ ಹೂಡಿದ್ದರೂ ಜನರು ಕ್ಯಾರೆ ಎನ್ನಲಿಲ್ಲ. ಯಾವ ಕಡೆ ಅಂಗಡಿಗಳ ಬಾಗಿಲು ತೆರೆದಿವೆಯೋ ಆ ಕಡೆ ವಾಹನಗಳನ್ನು ನುಗ್ಗಿಸುತ್ತಿದ್ದರು. ಇದರಿಂದ ವಾಹನ ದಟ್ಟಣೆ ಹೆಚ್ಚಿತ್ತು.

ಬಾಗಿಲು ಬಂದ್: ದುರ್ಗದಬೈಲ್, ಮರಾಠ ಗಲ್ಲಿ, ರೈಲ್ವೆ ನಿಲ್ದಾಣದ ರಸ್ತೆ, ಕೊಪ್ಪಿಕರ ರಸ್ತೆ ಇತರೆಡೆ ಇರುವ ವಿವಿಧ ಅಂಗಡಿಗಳ ಬಾಗಿಲು ತೆರೆದು 10 ಗಂಟೆ ಸುಮಾರಿಗೆ ಮುಚ್ಚಲಾಗಿತ್ತು. 14 ದಿನಗಳವರೆಗೆ ಜನತಾ ಕರ್ಫ್ಯೂ ಘೊಷಣೆ ಹಿನ್ನೆಲೆಯಲ್ಲಿ ಅಂಗಡಿಗಳ ಮಾಲೀಕರು, ವ್ಯಾಪಾರ-ವಹಿವಾಟಿಗೆ ತಾವೇ ಸ್ವಯಂ ನಿರ್ಬಂಧ ಹೇರಿಕೊಂಡಿರುವುದು ಕಂಡುಬಂತು.

ತವರಿನತ್ತ ಹೊರಟ ಜನ: ದೂರದ ಊರಿನಿಂದ ನಗರಕ್ಕೆ ದುಡಿಯಲು ಆಗಮಿಸಿದ್ದ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ಜನರು, ತವರಿನತ್ತ ಮರಳಿದರು. ಇದರಿಂದ ಹಳೆಯ ಬಸ್ ನಿಲ್ದಾಣದಲ್ಲಿ ಸ್ವಲ್ಪ ಗಿಜಿ ಗಿಜಿ ವಾತಾವರಣ ಕಂಡುಬಂತು.

ಸರ್ಕಾರಿ ಕಚೇರಿಗಳಲ್ಲಿ ದಟ್ಟಣೆ

ಬುಧವಾರದಿಂದ ಜನತಾ ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳು ಜನದಟ್ಟಣೆಯಿಂದ ಕೂಡಿದ್ದವು. ಮಿನಿವಿಧಾನಸೌಧದ ಉಪ ನೋಂದಣಾಧಿಕಾರಿ ಕಚೇರಿಗೆ ಹೆಚ್ಚಿನ ಸಂಖ್ಯೆಯ ಜನರು ಆಗಮಿಸಿದ್ದರು. ವಿವಾಹ, ಆಸ್ತಿ ನೋಂದಣಿಗಾಗಿ ದಟ್ಟಣೆಯಿತ್ತು. ಬುಧವಾರದಿಂದ ಓಡಾಟ ಕಷ್ಟವಾಗಲಿರುವ ಸಾಧ್ಯತೆ ನಿರೀಕ್ಷಿತವಾಗಿದ್ದರಿಂದ ಮಂಗಳವಾರವೇ ಕೆಲಸ ಮುಗಿಸಿಕೊಳ್ಳುವ ಅವಸರವಿತ್ತು.

ಅಗತ್ಯ ವಸ್ತು ದುಪ್ಪಟ್ಟು ದರಕ್ಕೆ ಮಾರಾಟ

ಸಂಶಿ: ಜನತಾ ಕರ್ಫ್ಯೂ ನೆಪ ಮಾಡಿಕೊಂಡ ಬಹುತೇಕ ವ್ಯಾಪಾರಿಗಳು ಅಗತ್ಯ ವಸ್ತುಗಳ ಬೆಲೆಯನ್ನು ದುಪ್ಪಟ್ಟು ಮಾಡಿ ಮಾರಾಟಕ್ಕೆ ಇಳಿದಿದ್ದಾರೆ. ಸಣ್ಣ ಕಿರಾಣಿ ಅಂಗಡಿಗಳ ಮಾಲೀಕರು ಗುಟ್ಖಾ, ಸಿಗರೇಟ್ ಖರೀದಿ ಮಾಡಲು ಅಂಗಡಿಗಳ ಮುಂದೆ ಕೋವಿಡ್ ಮಾರ್ಗಸೂಚಿ ಪಾಲಿಸದೇ ನಿಲ್ಲುತ್ತಿದ್ದಾರೆ. 120 ರೂಪಾಯಿ ಇದ್ದ ಗುಟ್ಖಾ ಪ್ಯಾಕೆಟ್ 250 ರೂಪಾಯಿಗಳಿಗೆ ಮಾರಾಟ ಮಾಡಿದರೆ, 5 ರೂಪಾಯಿಯ ಗುಟ್ಕಾ 10 ರೂಪಾಯಿಗೆ ಮಾರಲಾಗುತ್ತಿದೆ. ಇಷ್ಟಾದರೂ ಈ ಕುರಿತು ಗ್ರಾಪಂನವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.

ಕ್ರಮ ಕೈಗೊಳ್ಳುತ್ತೇವೆ: ಈ ಕುರಿತು ಮಾತನಾಡಿದ ಸಂಶಿ ಗ್ರಾಪಂ ಪಿಡಿಒ ಎಸ್.ವಿ. ಕಾಯಕದ, ‘ಜನರ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಜನತಾ ಕರ್ಫ್ಯೂ ಘೊಷಣೆ ಮಾಡಿದೆ. ಇಂಥ ಸಂದರ್ಭದಲ್ಲಿ ಕೆಲ ಅಂಗಡಿಕಾರರು ದಿನಸಿ ವಸ್ತುಗಳು ಮತ್ತು ಗುಟ್ಖಾ ಪದಾರ್ಥಗಳನ್ನು ನಿಗದಿತ ಬೆಲೆಗೆ ಮಾರಾಟ ಮಾಡಬೇಕು. ಜತೆಗೆ ಕಡ್ಡಾಯವಾಗಿ ವಸ್ತುಗಳ ದರ ಪಟ್ಟಿ ಹಾಕಬೇಕು. ದುಪ್ಪಟ್ಟು ಬೆಲೆ ಮಾರಾಟ ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಕೋವಿಡ್​ನಿಂದ ಐವರ ಸಾವು

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಮಂಗಳವಾರ 423 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 5 ಜನ ಮೃತಪಟ್ಟಿದ್ದಾರೆ. 340 ಜನರು ಬಿಡುಗಡೆಯಾಗಿದ್ದು, 3020 ಸಕ್ರಿಯ ಪ್ರಕರಣಗಳಿವೆ. ಕೋವಿಡ್​ನಿಂದ ಇದುವರೆಗೆ 687 ಜನರು ಮೃತಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net