ಹೆಚ್ಚಾಗಿದೆ ಚಿರತೆ ಹಾವಳಿ

10kglphoto-2,,..
Published on

ಕೊಳ್ಳೇಗಾಲ: ಕಳೆದ ಒಂದು ವಾರದಿಂದ ತಾಲೂಕಿನಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಸಾಕುಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿದೆ. ಚಿರತೆ ಅಲ್ಲಲ್ಲಿ ಪ್ರತ್ಯಕ್ಷವಾದ್ದರಿಂದ ಜನರು ಭಯಭೀತರಾಗಿದ್ದು, ತಿಮ್ಮರಾಜೀಪುರದ ಮೊರಾರ್ಜಿ ವಸತಿ ಶಾಲೆಯ ಮಕ್ಕಳಿಗೆ ಸುರಕ್ಷತೆ ಇಲ್ಲದಂತಾಗಿದೆ.

ಕೊಳ್ಳೇಗಾಲ ಪಟ್ಟಣದಿಂದ ಸುಮಾರು 7 ಕಿ.ಮೀ. ದೂರದಲ್ಲಿ ತಿಮ್ಮರಾಜೀಪುರ ಗ್ರಾಮವಿದೆ. ಈ ಭಾಗದ ಸುತ್ತಮುತ್ತ ಕೆಂಪನಪಾಳ್ಯ, ರಕ್ಕಸಪಾಳ್ಯ, ಕರಳಕಟ್ಟೆ, ಜಕ್ಕಳಿ, ಕುರುಬನಕಟ್ಟೆ, ಅರೇಪಾಳ್ಯ, ಹಿತ್ತಲದೊಡ್ಡಿ ಇತ್ಯಾದಿ ಗ್ರಾಮಗಳಿವೆ. ತಿಮ್ಮರಾಜೀಪುರದ ಹೊರವಲಯದಲ್ಲಿ ಮೊರಾರ್ಜಿ ವಸತಿ ಶಾಲೆ ಹಾಗೂ ಕಿತ್ತೂರು ಚನ್ನಮ್ಮ ವಸತಿ ಶಾಲೆಗಳಿವೆ.

ಈ ವಸತಿ ಶಾಲೆಗಳು ಬಿಳಿಗಿರಿರಂಗನ ಬೆಟ್ಟದ ಅಭಯಾರಣ್ಯ ವ್ಯಾಪ್ತಿಯ ಗುಂಡಾಲ್ ಜಲಾಶಯದ ಅರಣ್ಯ ಪ್ರದೇಶದ ತಪ್ಪಲಿನಲ್ಲಿವೆ. ಈ ಶಾಲೆಗಳ ಎದುರೇ ಸಾಲು ಬೆಟ್ಟಗಳಿವೆ. ಪರಿಣಾಮ ಆನೆಗಳು, ಕರಡಿ, ಚಿರತೆ, ಜಿಂಕೆಗಳು ಆಗಾಗ ಈ ಭಾಗದಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ.
ಇದರ ಬೆನ್ನಲ್ಲೇ ವಾರದ ಹಿಂದೆ ಚಿರತೆಯೊಂದು ಪ್ರತ್ಯಕ್ಷವಾಗಿ ಜನರಿಗೆ ಹೆದರಿಕೆ ಹುಟ್ಟಿಸಿದೆ. ಕೆಂಪನಪಾಳ್ಯ ಗ್ರಾಮದ ಮನೆ ಮುಂದೆ ಕಟ್ಟಿಹಾಕಿದ್ದ ಸಾಕು ನಾಯಿಯನ್ನು ಕೊಂದುಹಾಕಿದೆ. ಈ ಪ್ರಸಂಗವನ್ನು ಮನೆಯ ಮಾಲೀಕರು ಕಣ್ಣಾರೆ ಕಂಡು ಬೆಚ್ಚಿ ಬಿದ್ದಿದ್ದಾರೆ. ರೈತರಿಗೆ ಜಮೀನುಗಳಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದೆ. ಇದರಿಂದ ಈ ಭಾಗದ ಸುತ್ತಮುತ್ತಲ ಹಳ್ಳಿಗಳಲ್ಲಿ ಜನರಿಗೆ ಚಿರತೆಯ ಭಯ ಆವರಿಸಿದೆ.

ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 6 ರಿಂದ 10ನೇ ತರಗತಿಯ ವರೆಗೆ 450ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಸೇರಿದ ಮೊರಾರ್ಜಿ ವಸತಿ ಶಾಲೆಯ ಮುಂಭಾಗದಲ್ಲಿ ಮಾತ್ರ ಸುತ್ತುಗೋಡೆ ನಿರ್ಮಾಣ ಮಾಡಲಾಗಿದೆ. ಆದರೆ, ವಸತಿ ನಿಲಯದ ಹಿಂಭಾಗದಲ್ಲಿ ಅಂದರೆ ಪಶ್ಚಿಮ ಹಾಗೂ ಉತ್ತರ ಭಾಗದಲ್ಲಿ ಸುತ್ತುಗೋಡೆಯೇ ಇಲ್ಲ. ಈ ನಡುವೆ, ಈ ಭಾಗದಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿರುವುದರಿಂದ ವಿದ್ಯಾರ್ಥಿಗಳು, ಶಿಕ್ಷಕರಿಗೆ ಜೀವ ಭಯಉಂಟಾಗಿದೆ. ಪಾಲಕರೂ ಮಕ್ಕಳ ಚಿಂತೆಯಲ್ಲೇ ಮುಳುಗಿಹೋಗಿದ್ದಾರೆ.

ಆತಂಕದಲ್ಲಿಯೇ ಕೃಷಿ ಚಟುವಟಿಕೆ:
ಚಿರತೆ ನಿತ್ಯವೂ ಈ ಭಾಗದ ಗ್ರಾಮಗಳ ಹೊರವಲಯದ ಹೊಲ-ಗದ್ದೆಯಲ್ಲಿ ಕಾಣಿಸಿಕೊಳ್ಳುತ್ತಿದೆ. ಕೆಲ ದಿನಗಳಿಂದ ಚಿರತೆ ಚರ್ಚೆ ಮುನ್ನೆಲೆಯಲ್ಲೇ ಇದೆ. ರೈತರು ನಿರಾಳವಾಗಿ ತಮ್ಮ ಜಮೀನಿಗೆ ತೆರಳಿ ಕೃಷಿ ಮಾಡಲಾಗುತ್ತಿಲ್ಲ. ರಾತ್ರಿ ಕಾವಲಿಗೂ ತೆರಳಲು ಹಿಂದೇಟು ಹಾಕುತ್ತಿದ್ದಾರೆ.

ಚಿರತೆ ಸೆರೆಗೆ ಬೋನು ಅಳವಡಿಕೆ: ಮನೆಯ ಆವರಣದಲ್ಲೇ ಸಾಕು ನಾಯಿಯನ್ನು ಚಿರತೆ ಕೊಂದುಹಾಕಿದ ಪ್ರಕರಣದಿಂದ ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು ಕಳೆದ ನಾಲ್ಕು ದಿನದ ಹಿಂದೆ ಕೆಂಪನಪಾಳ್ಯ ಗ್ರಾಮದಲ್ಲಿ ಬೋನು ಅಳವಡಿಸಿದ್ದಾರೆ. ಆದರೆ, ಚಿರತೆ ಜನರ ಕಣ್ಣಿಗೆ ಬಿದ್ದು ಭಯ ಮೂಡಿಸುತ್ತಿದೆಯೇ ವಿನಾ ಬೋನಿಗೆ ಬಿದ್ದಿಲ್ಲ.
ತಂಡ ರಚನೆ: ಚಿರತೆ ಸೆರೆಗಾಗಿ 40 ಜನರನ್ನು ಒಳಗೊಂಡ ಟಾಸ್ಕ್‌ಫೋರ್ಸ್ ಅನ್ನು ಅರಣ್ಯ ಇಲಾಖೆ ರಚಿಸಿದೆ. ಬೆಳಗ್ಗೆ, ರಾತ್ರಿ ವೇಳೆ ಈ ತಂಡದವರು ಗಸ್ತು ನಡೆಸುತ್ತಿದ್ದಾರೆ. ಆದರೆ ಇವರಿಗೆ ಚಿರತೆ ಕಂಡಿಲ್ಲ.

ಮಕ್ಕಳಿಗೆ ಭದ್ರತೆಯೇ ಇಲ್ಲ
ಮೊರಾರ್ಜಿ ವಸತಿ ಶಾಲೆಯ ಉತ್ತರ ಹಾಗೂ ಪಶ್ಚಿಮ ಭಾಗಕ್ಕೆ ಕಾಂಪೌಡ್ ವ್ಯವಸ್ಥೆಯಿಲ್ಲ. ಕೇವಲ ಕಲ್ಲು ಕಂಬಗಳನ್ನು ನೆಟ್ಟು ತಂತಿ ಅಳವಡಿಸಲಾಗಿದೆ. ಸದ್ಯ ತಂತಿಗಳು ಸುಸ್ಥಿತಿಯಲ್ಲಿ ಇಲ್ಲ. ಬಿಳಿಗಿರಿರಂಗನ ಬೆಟ್ಟದ ಹುಲಿ ಸಂರಕ್ಷಿತ ಪ್ರದೇಶ ಶಾಲೆಯ ಮುಂದೆಯೇ ಇದೆ. ಸಂಜೆಯಾದರೆ ಆನೆಗಳು ಸಹ ಬೆಟ್ಟದಿಂದ ಕೆಳಗೆ ಇಳಿಯುತ್ತವೆ. ಹುಲಿ ಸಂಚಾರವೂ ಇಲ್ಲಿ ಇದೆ ಎಂದು ಹೇಳಲಾಗುತ್ತದೆ. ಮಕ್ಕಳು ರಾತ್ರಿ ವೇಳೆ ಶಾಲೆ ಆವರಣದಲ್ಲಿರುವ ಭೋಜನ ಕೊಠಡಿಗೆ ನಿತ್ಯವೂ ಬರುತ್ತಾರೆ. ಅಲ್ಲೇ ಕಾಲಕಳೆಯುತ್ತಾರೆ. ಈ ಸಮಯದಲ್ಲಿ ಕಾಡುಪ್ರಾಣಿ ಎರಗಿದರೆ ಯಾರು ಹೊಣೆ? ಸರ್ಕಾರ ಕೊಟ್ಯಂತರ ರೂ. ವ್ಯಯಿಸಿ ಶಾಲೆ ನಿರ್ಮಿಸಿದೆ. ಆದರೆ ಇಲ್ಲಿ ಮಕ್ಕಳಿಗೆ ಅಸುರಕ್ಷತೆ ಕಾಡುತ್ತಿದೆ. ಶಾಲೆಗೆ ಸುತ್ತುಗೋಡೆ ನಿರ್ಮಿಸಬೇಕೆಂಬುದು ಪಾಲಕರ ಒತ್ತಾಯವಾಗಿದೆ.
ಪ್ರತಿಭಟನೆ ಎಚ್ಚರಿಕೆ: ಈ ಬಗ್ಗೆ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶೈಲೇಂದ್ರ ಮಾತನಾಡಿ, ಚಿರತೆ ತಿಮ್ಮರಾಜೀಪುರ ಗ್ರಾಮದ ಸುತ್ತಮುತ್ತ ರೈತರ ಹಾಗೂ ಜನರ ನಿದ್ದೆಗೆಡಿಸಿದೆ. ಅರಣ್ಯಾಧಿಕಾರಿಗಳು ತ್ವರಿತವಾಗಿ ಅದನ್ನು ಸೆರೆ ಹಿಡಿಯಬೇಕು. ಜನರಿಗೆ ನೆಮ್ಮದಿ ಜೀವನ ನಡೆಸಲು ಅವಕಾಶ ಕಲ್ಪಿಸಿಕೊಡಬೇಕು. ಮೊರಾರ್ಜಿ ವಸತಿ ಶಾಲೆಗೆ ಎರಡು ಕಡೆ ಸುತ್ತುಗೋಡೆ ನಿರ್ಮಾಣ ಮಾಡಿಲ್ಲ. ಒಂದು ವೇಳೆ ಕಾಡುಪ್ರಾಣಿಗಳು ಮಕ್ಕಳ ಮೇಲೆ ಎರಗಿದರೆ ಯಾರು ಹೊಣೆ ? ಸಮಸ್ಯೆಗೆ ಶೀಘ್ರ ಸ್ಪಂದಿಸದಿದ್ದರೆ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.

ಚಿರತೆ ಸೆರೆಗೆ ಕ್ರಮವಹಿಸಿದ್ದೇವೆ. ಬೋನು ಅಳವಡಿಸಿದ್ದೇವೆ. ಎರಡು ದಿನದ ಹಿಂದೆ ಕಾಡುಬೆಕ್ಕು ಸಹ ಕಾಣಿಸಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇಲ್ಲಿ ಕಾಣಿಸಿಕೊಂಡಿರುವ ಚಿರತೆ ಗುಂಡಾಲ್ ಅರಣ್ಯ ಸೇರಿರಬಹುದು. ಆದರೂ ಹುಡುಕಾಟ ನಡೆಸುತ್ತಿದ್ದೇವೆ.-ಭರತ್ ಆರ್‌ಎಫ್‌ಒ, ಅರಣ್ಯ ಇಲಾಖೆ ಕಾಡುಪ್ರಾಣಿಗಳ ಆತಂಕ ಹೆಚ್ಚಾಗಿದೆ. ಮಕ್ಕಳಿಗೆ 6 ಗಂಟೆ ಬಳಿಕ ಹೊರಗೆ ಬರಬಾರದೆಂದು ಸೂಚನೆ ನೀಡಿದ್ದೇವೆ. ರಾತ್ರಿ ಊಟದ ಸಮಯದಲ್ಲಿ ಶಿಕ್ಷಕರು ಜತೆಗೆ ಇರುತ್ತಾರೆ. ಶಾಲೆಯ ಸುತ್ತುಗೋಡೆ ಹಾಗೂ ಕ್ಯಾಂಪಸ್ ಒಳಗೆ ರಸ್ತೆ ನಿರ್ಮಿಸಲು 1.80 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದ್ದೇವೆ. ಸರ್ಕಾರದಿಂದ ಮಂಜೂರಾತಿ ಸಿಗಬೇಕಿದೆ. ಕಾಡುಪ್ರಾಣಿಗಳಿಂದ ಮಕ್ಕಳನ್ನು ರಕ್ಷಿಸಲು ಸುತ್ತುಗೋಡೆ ನಿರ್ಮಾಣ ಅನಿವಾರ್ಯವಾಗಿದೆ.-ಗಿರೀಶ್ ಪ್ರಾಚಾರ್ಯ, ಮೊರಾರ್ಜಿ ವಸತಿ ಶಾಲೆ ನಮ್ಮ ಇಬ್ಬರು ಮಕ್ಕಳು ಮೊರಾರ್ಜಿ ಶಾಲೆಯಲ್ಲಿ ಓದುತ್ತಿದ್ದಾರೆ. ಇತ್ತೀಚೆಗೆ ಈ ಭಾಗದಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದೆ. ಶಾಲೆಯ ವಾತಾವರಣ ನೋಡಿದರೆ ಮಕ್ಕಳಿಗೆ ರಕ್ಷಣೆ ಇಲ್ಲ ಎನಿಸುತ್ತಿದೆ.-ಗುರುರಾಜ್ ಪಾಲಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net