ಹೆಗ್ಗಾರುಕೊಡಿಗೆ ರಸ್ತೆ ಬದಿ ಕುಸಿತ

jyp 11 web
Published on

ಜಯಪುರ: ಅಗಳಗಂಡಿ ಗ್ರಾಮ ಪಂಚಾಯಿತಿ ಹೆಗ್ಗಾರುಕೊಡಿಗೆಯಲ್ಲಿ ಗಡಿಕಲ್ಲು-ಮೇಗೂರು-ಹೊರನಾಡು ರಸ್ತೆಯ ಒಂದು ಬದಿಯಲ್ಲಿ ಭೂ ಕುಸಿತವಾಗಿದ್ದು, ಸಂಪೂರ್ಣ ರಸ್ತೆಯೇ ಕುಸಿಯುವ ಆತಂಕ ಎದುರಾಗಿದೆ. ಕಳೆದ ವರ್ಷ ಇದೇ ಜಾಗದಲ್ಲಿ ರಸ್ತೆ ಕುಸಿದು 1 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟ್ ವಾಲ್ ನಿರ್ಮಾಣ ಮಾಡಲಾಗಿತ್ತು. ವಾಲ್ ಪಕ್ಕದಲ್ಲಿ ಭೂ ಕುಸಿತವಾಗುತ್ತಿದ್ದು ಕಾಂಕ್ರೀಟ್ ವಾಲ್​ನಲ್ಲೂ ಬಿರುಕು ಕಾಣಿಸಿಕೊಂಡಿದೆ. ಇದೇ ರೀತಿ ಮಳೆ ಮುಂದುವರಿದರೆ ರಸ್ತೆ ಕುಸಿದು ಹೆಗ್ಗಾರುಕೊಡಿಗೆ, ಮೇಗೂರು, ತಲವಾನೆ ಸೇರಿದಂತೆ ಹತ್ತಾರು ಊರುಗಳ ಸಂಪರ್ಕ ಕಡಿತಗೊಳ್ಳಲಿದೆ.

ಭೂ ಕುಸಿತವಾದ ಸಮೀಪದಲ್ಲೇ ಮನೆ ಹಾಗೂ ತೋಟವಿದ್ದು, ಹೆಚ್ಚಿನ ಕುಸಿತವಾದರೆ ಮನೆ ಹಾಗೂ ತೋಟಕ್ಕೂ ಹಾನಿಯಾಗಲಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಭೂ ಕುಸಿತ ತಡೆಯಲು ತುರ್ತು ಕ್ರಮ ಕೈಗೊಳ್ಳದಿದ್ದರೆ ಭಾರಿ ಅನಾಹುತವಾಗಲಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಭೂ ಕುಸಿತವಾಗಿ ಎರಡು ದಿನ ಕಳೆದರೂ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ನಾಗರಿಕರು ದೂರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net