

ಗೋಣಿಕೊಪ್ಪ: ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರುವ ಕೊಡಗು ಹೆಗ್ಗಡೆ ಸಮುದಾಯಕ್ಕೆ ಶೀಘ್ರ ರಾಜಕೀಯ ಮೀಸಲಾತಿ ಲಭ್ಯವಾಗಲಿದೆ ಎಂದು ಶಾಸಕ ಎ.ಎಸ್.ಪೊನ್ನಣ್ಣ ಭರವಸೆ ವ್ಯಕ್ತಪಡಿಸಿದರು.
ಕೊಡಗು ಹೆಗ್ಗಡೆ ಸಮಾಜ ಬಿಟ್ಟಂಗಾಲದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ರಾಜಕೀಯ ಮೀಸಲಾತಿ ಪಡೆಯುವುದು ಸಮುದಾಯದ ಹಕ್ಕಾಗಿದೆ. ಮಂಬರುವ ಜಿಪಂ, ತಾಪಂ ಚುನಾವಣೆಗೂ ಮುನ್ನವೇ ಈ ಭರವಸೆ ಈಡೇರಲಿದೆ ಎಂದರು. ನ್ಯಾಯಮೂರ್ತಿ ಭಕ್ತವತ್ಸಲಂ ಆಯೋಗಕ್ಕೆ ಈ ಬಗ್ಗೆ ಸಮಗ್ರ ಮಾಹಿತಿ ಕೊಡಲಾಗಿದೆ. ಅವರು ಸರ್ಕಾರಕ್ಕೆ ವರದಿ ನೀಡಿ ರಾಜಕೀಯ ಮೀಸಲಾತಿಗೆ ಶಿಫಾರಸ್ಸು ಮಾಡಿದ್ದಾರೆ. ಮುಂದಿನ ಸ್ಥಳೀಯ ಚುನಾವಣೆಗೂ ಮುನ್ನ ರಾಜಕೀಯ ಮೀಸಲಾತಿ ದೊರೆಯುವ ವಿಶ್ವಾಸವಿದೆ ಎಂದರು.
ಪ್ರಸ್ತಾವಿಕವಾಗಿ ಮಾತನಾಡಿದ ಸಮಾಜದ ಉಪಾಧ್ಯಕ್ಷ ಕೊರಕುಟ್ಟಿರ ಸರ ಚಂಗಪ್ಪ, ಪ್ರತಿ ವರ್ಷ ನಡೆಯುವ ಸಮುದಾಯದ ಕ್ರೀಡಾಕೂಟಕ್ಕೆ ಅನುದಾನದ ಕೊರತೆ ಕಾಡುತ್ತಿದೆ. ಸರ್ಕಾರದ ವತಿಯಿಂದ ಅನುದಾನ ಒದಗಿಸಬೇಕು ಎಂದು ಶಾಸಕರಿಗೆ ಮನವಿ ಮಾಡಿದರು. ಕುಲಶಾಸ್ತ್ರ ಅಧ್ಯಯನಕ್ಕೆ ನಾವು ತಯಾರಿ ನಡೆಸಿದ್ದೇವೆ. ನಮಗೂ ಬುಡಕಟ್ಟು ಸ್ಥಾನಮಾನ ನೀಡುವ ಮೂಲಕ ಸರ್ಕಾರ ಕ್ರಮಕೈಗೊಳ್ಳಬೇಕು ಎಂದರು.
ಸಮಾಜದ ಅಧ್ಯಕ್ಷ ಪಿ.ಜಿ.ಅಯ್ಯಪ್ಪ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ನಿರ್ದೇಶಕರಾದ ಮುರೀರ ಕುಶಾಲಪ್ಪ, ತೋರೇರ ಮುದ್ದಯ್ಯ ಇತರರು ಇದ್ದರು.