

ಪಾಂಡವಪುರ: ತಾಲೂಕಿನ ಹೆಗ್ಗಡಹಳ್ಳಿ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾಗಿದ್ದ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆಗೊಳಿಸುವ ಮೂಲಕ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ನುಡಿದಂತೆ ನಡೆದುಕೊಂಡಿದ್ದಾರೆ.
ತಾಲೂಕಿನ ಹೆಗ್ಗಡಹಳ್ಳಿ ಗ್ರಾಮದಿಂದ ಪಾಂಡವಪುರ ಪಟ್ಟಣಕ್ಕೆ ಕುರಹಟ್ಟಿ ಹಾಗೂ ಹಿರೇಮರಳಿ ಮಾರ್ಗವಾಗಿ ಬಸ್ ಸಂಚಾರಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಶುಕ್ರವಾರ ಚಾಲನೆ ನೀಡಿದರು.
ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಹೆಗ್ಗಡಹಳ್ಳಿ ಗ್ರಾಮಕ್ಕೆ ಕೆಎಸ್‌ಆರ್‌ಟಿಸಿ ಬಸ್ ಹಾಕಿಸಿಕೊಡುವುದಾಗಿ ಚುನಾವಣೆ ವೇಳೆ ಗ್ರಾಮಸ್ಥರಿಗೆ ಭರವಸೆ ನೀಡಿದ್ದೆ. ಅದರಂತೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಳಗ್ಗೆ ಹಾಗೂ ಸಂಜೆ ಬಸ್ ಸಂಚರಿಸಲಿದ್ದು, ಹೆಗ್ಗಡಹಳ್ಳಿ ಹಾಗೂ ಕುರಹಟ್ಟಿ ಗ್ರಾಮಸ್ಥರು, ವಿದ್ಯಾರ್ಥಿಗಳು ಬಸ್ ವ್ಯವಸ್ಥೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಗ್ರಾಮದ ಸರ್ಕಾರಿ ಶಾಲೆ ಅಭಿವೃದ್ಧಿಗಾಗಿ ಗ್ರಾಮಸ್ಥರು ಮನವಿ ಮಾಡಿದ್ದಾರೆ, ಆ ಬಗ್ಗೆ ಕ್ರಮ ವಹಿಸಲಾಗುವುದು. ಜನರ ಆರೋಗ್ಯದ ಹಿತದೃಷ್ಟಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡಿಸಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.
ಮುಖಂಡ ರಾಮಕೃಷ್ಣೇಗೌಡ ಮಾತನಾಡಿ, ಕಳೆದ 10 ವರ್ಷಗಳಿಂದಲೂ ಹೆಗ್ಗಡಹಳ್ಳಿ ಗ್ರಾಮಕ್ಕೆ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಇರಲಿಲ್ಲ. ಇದರಿಂದ ಗ್ರಾಮದ ಜನರು ಪಾಂಡವಪುರ ಪಟ್ಟಣಕ್ಕೆ ತೆರಳಲು ಬೈಕ್, ಆಟೋಗಳನ್ನು ಆಶ್ರಯಿಸುವಂತಾಗಿತ್ತು. ನಮ್ಮೂರಿನ ಜನರು ಆಸ್ಪತ್ರೆಗೆ ತೆರಳಲು ಹಾಗೂ ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ತೆರಳಲು ಬಸ್ ಸೌಲಭ್ಯವಿಲ್ಲದೆ ಅನನುಕೂಲವಾಗಿತ್ತು. ಇದೀಗ ಶಾಸಕರು ಹೆಗ್ಗಡಹಳ್ಳಿ ಗ್ರಾಮಕ್ಕೆ ಶಾಸಕರು ಬಸ್ ಸೌಲಭ್ಯ ಕಲ್ಪಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಗ್ರಾಪಂ ಸದಸ್ಯರಾದ ಭಾಗ್ಯ, ಸುದರ್ಶನ್, ಕೃಷ್ಣ, ರೈತಸಂಘದ ಮುಖಂಡರಾದ ಕನಗನಮರಡಿ ಬಲರಾಂ, ಕನಗೋನಹಳ್ಳಿ ಪರಮೇಶ್‌ಗೌಡ, ಚಿಕ್ಕಮರಳಿ ಚಂದ್ರಶೇಖರ್, ಕ್ಯಾತನಹಳ್ಳಿ ರಾಘವ ಪ್ರಕಾಶ್, ಪಾಂಡವಪುರ ಡಿಪೋ ಮ್ಯಾನೇಜರ್ ಅಪ್ಪಿ ರೆಡ್ಡಿ, ಮೇಲ್ವಿಚಾರಕ ಸಿ.ಆರ್.ರಮೇಶ್ ಇತರರಿದ್ದರು.