ಹೆಂಡ ಮಾರಿ ರಾಜ್ಯ ನಡೆಸುತ್ತಿರುವ ಸರ್ಕಾರ-ಸೂಲಿಬೆಲೆ ಟೀಕೆ

BJP Welcome Chakravarti Sulibele
Published on

ಕಾರವಾರ:ಹೆಂಡ ಮಾರಿ ರಾಜ್ಯ ನಡೆಸುವ ಹೀನ ಸ್ಥಿತಿ ರಾಜ್ಯ ಸರ್ಕಾರಕ್ಕೆ ಬಂದಿದೆ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಟೀಕಿಸಿದರು.
ಸದೃಢ ಭಾರತಕ್ಕಾಗಿ ಮತ್ತೊಮ್ಮೆ ಮೋದಿ ಎಂಬ ಅಭಿಯಾನ, ಬೈಕ್ ರ‍್ಯಾಲಿ ಹಮ್ಮಿಕೊಂಡಿರುವ ಅವರು ಮಂಗಳವಾರ ಕಾರವಾರ ತಲುಪಿದ್ದು, ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು.
ರಾಜ್ಯ ಸರ್ಕಾರ ನೀರು ಕೊಡುವುದನ್ನು ಬಿಟ್ಟು ಬೀರು ಕೊಡಲು ನಿಂತಿದೆ. ಕಾಂಗ್ರೆಸ್ ಯಾವದನ್ನೂ ಯೋಚನೆ ಮಾಡದೇ ಬಿಟ್ಟಿ ಭಾಗ್ಯಗಳನ್ನು ಘೋಷಿಸಿತ್ತು. ಗ್ಯಾರಂಟಿ ಎಲ್ಲವನ್ನೂ ನೀಡಲು ಆಗದಿದ್ದರೂ ಎರಡು, ಮೂರು ನೀಡಲು ಹಠಕ್ಕೆ ಬಿದ್ದಿದ್ದಾರೆ. ಅದಕ್ಕೆ ದುಡ್ಡು ಹೊಂದಿಸಲು ಅಭಿವೃದ್ಧಿ ಕಾರ್ಯ ಬಿಟ್ಟು ಹೆಂಡ ಮಾರಲು ಯತ್ನಿಸುತ್ತಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರೀಟೇಲ್ ಮಾರ್ಕೆಟ್‌ನಲ್ಲಿ ಮದ್ಯ ಸಿಗುವಂತೆ ಮಾಡುತ್ತಿದ್ದಾರೆ. ಸ್ವಸ್ಥ, ಸಮೃದ್ಧ, ಸದೃಢ ಕರ್ನಾಟಕ ಕಾಂಗ್ರೆಸ್‌ಗೆ ಬೇಡವಾಗಿದೆ. ಗರೀಬಿ ಹಠಾವೋ ಬದಲು ಬಡವರನ್ನು ಹೇಗೆ ಮುಗಿಸೋದು ಅನ್ನೊ ಭಾವನೆಯಲ್ಲಿ ಸರ್ಕಾರವಿದೆ. ಕಾಂಗ್ರೆಸ್ ಬೇಡುವ ಜನಾಂಗವನ್ನು ಸೃಷ್ಟಿ ಮಾಡುತ್ತಿದೆ.

ಈ ಸರ್ಕಾರದಲ್ಲಿ ಹೆಚ್ಚಿನದನ್ನು ನಿರೀಕ್ಷಿಸಿದರೆ ಅದು ಮೂರ್ಖತನ, ದಲಿತರಿಗೆ ನೀಡುವ ಹಣವನ್ನು ಬಿಟ್ಟು ಬಿಟ್ಟಿ ಭಾಗ್ಯಗಳಿಗೆ ನೀಡಿದ್ದಾರೆ. ಆದರೆ, ಮುಸಲ್ಮಾನರಿಗೆ ನಿಧಿ ಕೊಡುವ ಬಗ್ಗೆ ಸಿದ್ಧರಾಮಯ್ಯ ಭರವಸೆ ನೀಡಿದ್ದಾರೆ. ಜೈಲಿನಲ್ಲಿರುವ ಅಮಾಯಕ ಮುಸ್ಲಿಮರನ್ನು ಬಿಡುಗಡೆ ಮಾಡಿ ಎಂದು ರಾಜ್ಯದ ಗೃಹ ಸಚಿವರು ಪತ್ರ ಬರೆದಿದ್ದಾರೆ ಎಂದು ಸರ್ಕಾರಕ್ಕೆ ಮಾತಿನ ಚಾಟಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net