ಹೃದಯಾಘಾತದಿಂದ ಯೋಧ ಸಾವು

28_SAMSHI_02_KUSUMAVATHI
ಪಶ್ಚಿಮ ಬಂಗಾಳದಲ್ಲಿ ಹೃದಯಾಘಾತದಿಂದ ಮೃತಪಟ್ಟ ಸಂಶಿ ಸಮೀಪದ ರೊಟ್ಟಿಗವಾಡ ಗ್ರಾಮದ ಬಿ.ಎಸ್.ಎಫ್. ಯೋಧ ಗಂಗಾಧರಯ್ಯ ಚಂದ್ರಶೇಖರಯ್ಯ ಹಿರೇಮಠ ಅವರ ಪಾರ್ಥಿವ ಶರೀರ ಬೆಂಗಳೂರಿಗೆ ಆಗಮಿಸಿದ್ದು, ಶಾಸಕಿ ಕುಸುಮಾವತಿ ಶಿವಳ್ಳಿ ಅವರು ಗೌರವ ನಮನ ಸಲ್ಲಿಸಿದರು.
Published on

ಕುಂದಗೋಳ: ತಾಲೂಕಿನ ರೊಟ್ಟಿಗವಾಡ ಗ್ರಾಮದ ಹೆಮ್ಮೆಯ ಪುತ್ರ, ಬಿಎಸ್​ಎಫ್ ಯೋಧ ಗಂಗಾಧರಯ್ಯ ಚಂದ್ರಶೇಖರಯ್ಯ ಹಿರೇಮಠ (49) ಅವರು ಶನಿವಾರ ಪಶ್ಚಿಮ ಬಂಗಾಳದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದು, ಪಾರ್ಥಿವ ಶರೀರವನ್ನು ಭಾನುವಾರ ತಾಯ್ನಾಡಿಗೆ ತರಲಾಯಿತು.
ಭಾನುವಾರ ಬೆಂಗಳೂರಿಗೆ ಆಗಮಿಸಿದ ಯೋಧನ ಪಾರ್ಥಿವ ಶರೀರಕ್ಕೆ ಶಾಸಕಿ ಕುಸುಮಾವತಿ ಶಿವಳ್ಳಿ ಗೌರವ ನಮನ ಸಲ್ಲಿಸಿದರು. ಸೋಮವಾರ ಬೆಳಗ್ಗೆ 8 ಗಂಟೆಗೆ ಪಾರ್ಥಿವ ಶರೀರವನ್ನು ಗ್ರಾಮಕ್ಕೆ ತರಲಾಗುತ್ತಿದ್ದು, ನಂತರ ಅವರ ಜಮೀನಿನಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ತಹಸೀಲ್ದಾರ್ ಅಶೋಕ ಶಿಗ್ಗಾಂವ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ಕುಚ್ ಬಿಹಾರನ ಬಾಂಗ್ಲಾ ಗಡಿಯಲ್ಲಿ ಕಳೆದ 14 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಗಂಗಾಧರಯ್ಯ ಅವರು ಕರ್ತವ್ಯದಲ್ಲಿದ್ದಾಗ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದರು. ಆಸ್ಪತ್ರೆಗೆ ತೆರಳುವ ಮಾರ್ಗಮಧ್ಯದಲ್ಲಿಯೇ ಅವರು ಮೃತಪಟ್ಟಿದ್ದಾರೆ.
ಚಂದ್ರಶೇಖರಯ್ಯ ಹಾಗೂ ನೀಲವ್ವ ದಂಪತಿಯ ಎರಡನೇ ಮಗನಾಗಿ ಜುಲೈ 1, 1971ರಂದು ಜನಿಸಿದ ಇವರು, ದೇಶ ಸೇವೆಯಲ್ಲಿ ಅತೀವ ಆಸಕ್ತಿ ಹೊಂದಿದ್ದರಿಂದ 1994ರಲ್ಲಿ ಸೈನ್ಯಕ್ಕೆ ಸೇರಿದ್ದರು. ತಮ್ಮ ಸೇವಾವಧಿ 2011ರಲ್ಲಿ ಮುಕ್ತಾಯವಾದರೂ ದೇಶ ಸೇವೆನ್ನು ಮುಂದá-ವರಿಸಿದ್ದರು.
2 ದಿನಗಳ ಹಿಂದೆ ಕರ್ತವ್ಯಕ್ಕೆ ಹಾಜರು: ಹದಿನೈದು ದಿನಗಳ ಹಿಂದಷ್ಟೇ ಸ್ವಗ್ರಾಮಕ್ಕೆ ಬಂದಿದ್ದ ಗಂಗಾಧರಯ್ಯ ಅವರು, ಎರಡು ದಿನಗಳ ಹಿಂದೆ ಕರ್ತವ್ಯಕ್ಕೆ ಹಾಜರಾಗಿದ್ದರು. ರೊಟ್ಟಿಗವಾಡ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಭಕ್ತರಾಗಿದ್ದ ಇವರು ಜಾತ್ರಾ ಮಹೋತ್ಸವದಲ್ಲಿ ಅನ್ನಸಂತರ್ಪಣೆ ಮಾಡಿಸಿ ಭಕ್ತಿ ಸಮರ್ಪಿಸಿದ್ದರು. ಯೋಧ ಗಂಗಾಧರ ಅವರಿಗೆ ಪತ್ನಿ, ಮಗಳು ಹಾಗೂ ಇಬ್ಬರು ಸಹೋದರರು, ಮೂವರು ಸಹೋದರಿಯರು ಸೇರಿದಂತೆ ಅಪಾರ ಬಂಧುಗಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net