

ಮೂಡಿಗೆರೆ: ಹೃದಯಾಘಾತದಿಂದ ಒಂದೇ ದಿನ ಅಕ್ಕಪಕ್ಕದ ಗ್ರಾಮದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಬೆಳಗೋಡು ಗ್ರಾಮದ ಕೂಲಿ ಕಾರ್ಮಿಕ ಯುವತಿ ಮೀನಾಕ್ಷಿ (29) ಶನಿವಾರ ಸಂಜೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕಳೆದ ವಾರ ಜ್ವರ ಹಾಗೂ ಲೋ ಬಿಪಿಯಿಂದ ಮೀನಾಕ್ಷಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿಯಲ್ಲಿದ್ದರು. ಶನಿವಾರ ಸಂಜೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆಯೊಯ್ಯುವಾಗ, ವಿಪರೀತ ಗಾಳಿ, ಮಳೆಯಿಂದ ಮಾರ್ಗ ಮಧ್ಯೆ ರಸ್ತೆಗೆ ಮರವೊಂದು ಬಿದ್ದಿತ್ತು. ಮರ ತೆರವುಗೊಳಿಸಿ ಆಸ್ಪತ್ರೆಗೆ ತಲುಪುವುದು ತಡವಾಗಿದೆ. ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದರು. ಮೀನಾಕ್ಷಿ ಅವಿವಾಹಿತರಾಗಿದ್ದರು.
ಇನ್ನು ಬಿ.ಹೊಸಳ್ಳಿ ಸುಮಿತ್ರೇಗೌಡ (75) ಹೃದಯಾಘಾತದಿಂದ ಶನಿವಾರ ಸಂಜೆ ಮನೆಯಲ್ಲಿ ಕುಸಿದುಬಿದ್ದು ಮೃತಪಟ್ಟಿದ್ದಾರೆ. ಎದೆ ನೋವು ಕಾಣಿಸಿಕೊಂಡ ಅವರನ್ನು ಕಳೆದ ವಾರ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆದು ಮನೆಗೆ ಬಂದಿದ್ದ ಅವರು ವಿಶ್ರಾಂತಿ ಪಡೆಯುತ್ತಿದ್ದರು.
ಇತ್ತೀಚೆಗೆ ಹೃದಯಘಾತದಿಂದ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರಲ್ಲಿ ಭಯದ ವಾತಾವರಣ ಉಂಟಾಗಿದೆ.